ಕನ್ನಡಪ್ರಭ ವಾರ್ತೆ ತುಮಕೂರು

ಜಿಲ್ಲೆಯ ರೈತರ ಹಿತಾಸಕ್ತಿಗೆ ವಿರುದ್ಧವಾಗಿ ಹಾಗೂ ಜಿಲ್ಲೆಯ ದೀರ್ಘಕಾಲದ ನೀರಾವರಿ ಹಕ್ಕುಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ರಾಜ್ಯ ಸರ್ಕಾರವು ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ಜಾರಿಗೊಳಿಸಲು ಮುಂದಾಗಿರುವುದನ್ನು ಖಂಡಿಸಿ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದ ಆಶಯದ ಪಾರದರ್ಶಕ ಪರೀಕ್ಷಾ ವ್ಯವಸ್ಥೆ ಮತ್ತು ನಶಾ ಮುಕ್ತ ಯುವಶಕ್ತಿ ನಿರ್ಮಾಣ ಅಭಿಯಾನ ಬೆಂಬಲಿಸಿ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿಯು ಮಹತ್ವದ ನಿರ್ಣಯ ಮಂಡಿಸಿತು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿಶಂಕರ್ ಹೆಬ್ಬಾಕ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಗರದಲ್ಲಿ ನಡೆದ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಈ ಸಂಬಂಧ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲಾಯಿತು.ಸರ್ಕಾರವು ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆಗಾಗಿ ಸಾವಿರಾರು ಕೋಟಿ ರು.ಗಳ ವೆಚ್ಚ ನಿಗದಿಪಡಿಸಿದ್ದು, ಯೋಜನೆಯಡಿ ನೀರನ್ನು ರಾಮನಗರ ಸೇರಿದಂತೆ ಇತರೆ ಪ್ರದೇಶಗಳಿಗೆ ವರ್ಗಾಯಿಸುವ ಉದ್ದೇಶ ಹೊಂದಿದೆ. ತುಮಕೂರು ಜಿಲ್ಲೆ ಈಗಾಗಲೇ ನಿರಂತರ ಬರಗಾಲ, ಅಂತರ್ಜಲ ಕುಸಿತ ಹಾಗೂ ನೀರಾವರಿ ಕೊರತೆಯಿಂದ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಜಿಲ್ಲೆಯ ರೈತರಿಗೆ ಸಿಗಬೇಕಾದ ನೀರಿನ ಮೇಲೆಯೇ ಕಣ್ಣಿಟ್ಟಿರುವುದು ಅತ್ಯಂತ ಖಂಡನೀಯ ಎಂದರು.

ಈ ಹಿಂದೆ ಭಾರತೀಯ ಜನತಾ ಪಕ್ಷದ ಸರ್ಕಾರದ ಅವಧಿಯಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತುಮಕೂರು ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಹಾಗೂ ಜಿಲ್ಲೆಯ ಭವಿಷ್ಯದ ನೀರಿನ ಅಗತ್ಯವನ್ನು ಮನಗಂಡು ಹೇಮಾವತಿ ಕೆನಾಲ್ ಅಭಿವೃದ್ಧಿಗೆ ರು. 500 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಅದರ ಪರಿಣಾಮವಾಗಿ ಕಾಮಗಾರಿಯು ಶೇಕಡ 80ರಷ್ಟು ಪೂರ್ಣಗೊಂಡಿತ್ತು. ಆದರೆ ಪ್ರಸ್ತುತ ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಯೋಜನೆಯಡಿ ಬೃಹತ್ ಗಾತ್ರದ ಪೈಪ್‌ಲೈನ್ ಮೂಲಕ ನೀರನ್ನು ಬೇರೆಡೆಗೆ ಕೊಂಡೊಯ್ಯಲು ಮುಂದಾಗಿರುವುದು ಜಿಲ್ಲೆಯ ಹಿತಾಸಕ್ತಿಗೆ ಗಂಭೀರ ಧಕ್ಕೆಯಾಗಿದೆ. ಇದರಿಂದ ಜಿಲ್ಲೆಯ ಕೃಷಿಗೆ ಮಾತ್ರವಲ್ಲದೆ, ಭವಿಷ್ಯದಲ್ಲಿ ಕುಡಿಯುವ ನೀರಿಗೂ ತೀವ್ರ ಸಂಕಷ್ಟ ಎದುರಾಗಲಿದ್ದು, ಈ ಯೋಜನೆಯು ಅಕ್ಷರಶಃ ತುಮಕೂರು ಜಿಲ್ಲೆಯ ಪಾಲಿಗೆ ಮರಣಶಾಸನವಾಗಲಿದೆ ಎಂದರು.

ಈ ಅವೈಜ್ಞಾನಿಕ ಯೋಜನೆಯನ್ನು ವಿರೋಧಿಸಿ ಭಾರತೀಯ ಜನತಾ ಪಕ್ಷವು ಜಿಲ್ಲೆಯ ರೈತರೊಂದಿಗೆ ಕೈಜೋಡಿಸಿ ಈಗಾಗಲೇ ಹಲವಾರು ಬಾರಿ ಬೃಹತ್ ಪ್ರತಿಭಟನೆಗಳು, ಪಾದಯಾತ್ರೆಗಳು ಹಾಗೂ ವಿವಿಧ ಹೋರಾಟಗಳನ್ನು ಸಂಘಟಿಸಿ, ಕಾಮಗಾರಿಯನ್ನು ಸ್ಥಗಿತಗೊಳಿಸುವಲ್ಲಿ ಯಶಸ್ವಿಯಾಗಿದೆ. ಮುಂದೆಯೂ ಸಹ ತುಮಕೂರು ಜಿಲ್ಲೆಯ ರೈತರ ಹಾಗೂ ಜಿಲ್ಲೆಯ ನೀರಿನ ಹಕ್ಕಿನ ರಕ್ಷಣೆಗೆ ಭಾರತೀಯ ಜನತಾ ಪಕ್ಷವು ಸಂಪೂರ್ಣ ಬದ್ಧವಾಗಿದ್ದು, ಅಗತ್ಯವಿದ್ದಲ್ಲಿ ಜಿಲ್ಲೆಯ ರೈತರೊಂದಿಗೆ ಸೇರಿ ನಿರಂತರ ಹಾಗೂ ತೀವ್ರ ಹೋರಾಟವನ್ನು ಸಂಘಟಿಸಲಿದೆ ಎಂದರು.


ದೇಶದ ಭವಿಷ್ಯವನ್ನು ನಿರ್ಧರಿಸುವ ಎರಡು ಮಹತ್ವದ ಕ್ಷೇತ್ರಗಳಾದ ಶಿಕ್ಷಣದ ಪಾವಿತ್ರ‍್ಯ ಮತ್ತು ಯುವಶಕ್ತಿಯ ಆರೋಗ್ಯಕರ ಭವಿಷ್ಯ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡಿರುವ ಐತಿಹಾಸಿಕ ಕ್ರಮಗಳನ್ನು ಕಾರ್ಯಕಾರಿಣಿ ಅಭಿನಂದಿಸಿ, ಬೆಂಬಲ ಸೂಚಿಸಿತು. ವಿಕಸಿತ ಭಾರತ-2047 ನಿರ್ಮಾಣದ ಸಂಕಲ್ಪದಲ್ಲಿ ಪ್ರಾಮಾಣಿಕ ವಿದ್ಯಾರ್ಥಿ ಹಾಗೂ ವ್ಯಸನಮುಕ್ತ ಯುವಶಕ್ತಿಯೇ ರಾಷ್ಟ್ರದ ನಿಜವಾದ ಬಂಡವಾಳ ಎಂಬುದು ಈ ಸಭೆಯ ದೃಢ ನಿಲುವು ವ್ಯಕ್ತಪಡಿಸಿತು. ಈ ವೇಳೆ ಶಾಸಕ ಜಿ.ಬಿ. ಜ್ಯೋತಿಗಣೇಶ್, ಜಿಲ್ಲಾ ಪ್ರಭಾರಿ ಮುನಿರಾಜುಗೌಡ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಟಿ.ಎಚ್. ಹನುಮಂತರಾಜು, ಶಿವಕುಮಾರ್, ಮುಖಂಡರಾದ ವೈ.ಎಚ್. ಹುಚ್ಚಯ್ಯ, ಬ್ಯಾಟರಂಗೇಗೌಡ, ಮುರಳಿ, ವಿನಯ್ ಬಿದರೆ, ದಿಲೀಪ್‌ಕುಮಾರ್ ಮೊದಲಾದವರು ಭಾಗವಹಿಸಿದ್ದರು.