ಹೆಸರಘಟ್ಟ ಮೀಸಲು ಪ್ರದೇಶಕ್ಕೆ ವಿರೋಧ

| Published : Nov 18 2024, 01:20 AM IST

ಸಾರಾಂಶ

ರೈತರ ಹೆಸರಿನಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಹೆಸರಘಟ್ಟ ಪ್ರದೇಶವನ್ನು ‘ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ’ ಎಂದು ಘೋಷಿಸುವ ಮೂಲಕ ರೈತರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಯಲಹಂಕ

ರೈತರ ಹೆಸರಿನಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಹೆಸರಘಟ್ಟ ಪ್ರದೇಶವನ್ನು ‘ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ’ ಎಂದು ಘೋಷಿಸುವ ಮೂಲಕ ರೈತರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಯಲಹಂಕ ಕ್ಷೇತ್ರದ ಹೆಸರಘಟ್ಟದ ಪ್ರವಾಸಿ ಮಂದಿರದ ಬಳಿ ಏರ್ಪಡಿಸಿದ್ದ ಖಂಡನಾ ನಿರ್ಣಯ ಸಭೆಯಲ್ಲಿ ಮಾತನಾಡಿದ ಅವರು, ''''''''1972ರ ಸೆಕ್ಷನ್ 3ಎ ಪ್ರಕಾರ ಸರ್ಕಾರವು 5010 ಎಕರೆ ವಿಸ್ತೀರ್ಣದ ಹೆಸರಘಟ್ಟ ಹುಲ್ಲುಗಾವಲನ್ನು ಸಮರ್ಪಕವಾದ ಸಮೀಕ್ಷೆ ನಡೆಸದೆ, ಈ ಭಾಗದ ರೈತರ ಅಭಿಪ್ರಾಯ ಸಂಗ್ರಹಿಸದೆ ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ ಎಂದು ಘೋಷಿಸಿರುವುದು ಈ ಭಾಗದ ರೈತರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಎಸಗಿರುವ ಮಹಾಪ್ರಮಾದವಾಗಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು.

ಹೆಸರಘಟ್ಟ ಪ್ರದೇಶ ವ್ಯಾಪ್ತಿಯ ಐದು ಪಂಚಾಯಿತಿ ಅಧ್ಯಕ್ಷರು, ರೈತ ಸಂಘಗಳು, ಕನ್ನಡಪರ ಸಂಘ ಸಂಸ್ಥೆಗಳು ಸೇರಿ ಸರ್ಕಾರದ ಕ್ರಮವನ್ನು ಕುರಿತು ಖಂಡನಾ ನಿರ್ಣಯ ಮಂಡಿಸಲು ನಿರ್ಧಾರ ಕೈಗೊಂಡಿದ್ದೇವೆ ಎಂದು ತಿಳಿಸಿದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರ ನಡೆಸಿದ ಸಭೆಯಲ್ಲಿ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಸೇರಿದಂತೆ ಈ ಭಾಗದ ಐದೂ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರೆಲ್ಲರೂ ಭಾಗವಹಿಸಿ, ವಿರೋಧ ವ್ಯಕ್ತಪಡಿಸಿದ್ದರು. ಸಭೆಯಲ್ಲಿ ಸ್ಥಳೀಯ ಪಂಚಾಯಿತಿಗಳಿಂದ ವರದಿ ಪಡೆಯಲು ತಿಳಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಅಧಿಕಾರಿಗಳಿಗೆ ಹಳ್ಳಿಗಳಿಗೆ ಖುದ್ದು ಭೇಟಿ ನೀಡಿ ಅಭಿಪ್ರಾಯ ಸಂಗ್ರಹಿಸಲು ಸೂಚಿಸಿದ್ದರು. ಆದರೆ ಕೆಲ ಎನ್‌ಜಿಓ ಸಂಸ್ಥೆಗಳು ಮತ್ತು ಹೊರಗಿನ ವ್ಯಕ್ತಿಗಳು ಎಸಿ ರೂಂನಲ್ಲಿ ಕುಳಿತು ಈ ಕುರಿತು ನಿರ್ಧಾರ ತೆಗೆದುಕೊಳ್ಳುವ ಮೂಲಕ ರೈತರಿಗೆ ಅನ್ಯಾಯವೆಸಗಿದ್ದಾರೆ. ಮೊಬೈಲ್ ಉಪಯೋಗಿಸುವುದನ್ನು ತಿಳಿಯದ ರೈತರು ಹೇಗೆ ತಾನೇ ಮೊಬೈಲ್ ಆ್ಯಪ್‌ನಲ್ಲಿ ಈ ಕುರಿತು ಅಪ್ಡೇಟ್ ಮಾಡಲು ಸಾಧ್ಯ ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಸಂರಕ್ಷಿತ ಮೀಸಲು ಅರಣ್ಯ ಪ್ರದೇಶ ಮಾಡುವುದರಿಂದ ಸರ್ಕಾರವು ಯಾವಾಗ ಬೇಕಾದರೂ ರಸ್ತೆಯನ್ನು ಮುಚ್ಚಬಹುದು ಹಾಗೂ ಜಾನುವಾರುಗಳಿಗೆ ನಿರ್ಬಂಧ ಹೇರಬಹುದು. ಈ ಬಗ್ಗೆ ಸರಿಯಾಗಿ ಅರ್ಥೈಸಿಕೊಳ್ಳದ ಯಲಹಂಕದ ಕೆಲ ಮುಖಂಡರು ಸುದ್ದಿಗೋಷ್ಠಿ ನಡೆಸಿ ಜನರಿಗೆ ತೊಂದರೆ ಆಗಲ್ಲ'''''''' ಎಂಬ ಬೇಕಾಬಿಟ್ಟಿ ಹೇಳಿಕೆ ನೀಡಿದ್ದಾರೆ ಎಂದು ದೂರಿದರು.

ಬಿಜೆಪಿ ಹಿರಿಯ ಮುಖಂಡರಾದ ಎಸ್.ಎನ್.ರಾಜಣ್ಣ, ದಿಬ್ಬೂರು ಜಯಣ್ಣ, ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ರಾಮಮೂರ್ತಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಗ್ರಾಮಾಂತರ ಮಂಡಲ ರೈತ ಮೋರ್ಚಾ ಅಧ್ಯಕ್ಷ ಎಚ್.ಸಿ.ರಾಜೇಶ್, ಉಪಾಧ್ಯಕ್ಷ ಕೆ.ರಾಜಣ್ಣ, ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ರಾಜೇಂದ್ರ, ಗ್ರಾಪಂ ಅಧ್ಯಕ್ಷರಾದ ಸಂಜೀವಯ್ಯ, ಪುಷ್ಪಲತಾ, ಲಲಿತಾ, ಬ್ಯಾತ ಸುರೇಶ್, ಬಿ.ಅಶ್ವತ್ಥ್, ಕೆ.ಎಂ.ಅರಸೇಗೌಡ ಇದ್ದರು.