ಅನ್ಯ ಸಮುದಾಯ ಎಸ್‌ಟಿಗೆ ಸೇರ್ಪಡೆ ವಿರೋಧ

| Published : Sep 27 2025, 12:01 AM IST

ಸಾರಾಂಶ

ಅನ್ಯ ಸಮುದಾಯದವರನ್ನು ಎಸ್.ಟಿ. ಪಟ್ಟಿಗೆ ಸೇರಿಸುತ್ತಿರುವುದನ್ನು ವಿರೋಧಿಸಿ ಮತ್ತು ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಟ್ಟೀಹಳ್ಳಿ ತಾಲೂಕು ಮಹರ್ಷಿ ವಾಲ್ಮೀಕಿ ಸಂಘದ ವತಿಯಿಂದ ಗುರುವಾರ ಇಲ್ಲಿನ ತಹಸೀಲ್ದಾರ್ ಶ್ವೇತಾ ಅಮರಾವತಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ರಟ್ಟೀಹಳ್ಳಿ: ಅನ್ಯ ಸಮುದಾಯದವರನ್ನು ಎಸ್.ಟಿ. ಪಟ್ಟಿಗೆ ಸೇರಿಸುತ್ತಿರುವುದನ್ನು ವಿರೋಧಿಸಿ ಮತ್ತು ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಟ್ಟೀಹಳ್ಳಿ ತಾಲೂಕು ಮಹರ್ಷಿ ವಾಲ್ಮೀಕಿ ಸಂಘದ ವತಿಯಿಂದ ಗುರುವಾರ ಇಲ್ಲಿನ ತಹಸೀಲ್ದಾರ್ ಶ್ವೇತಾ ಅಮರಾವತಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಸಮಾಜದ ಅಧ್ಯಕ್ಷ ಮಂಜುನಾಥ ತಳವಾರ ಮಾತನಾಡಿ, ಸ್ವಾತಂತ್ರ್ಯ ಬಂದು 7 ದಶಕಗಳು ಕಳೆಯುತ್ತಾ ಬಂದರೂ ಪರಿಶಿಷ್ಟ ಪಂಗಡದವರ ಮೇಲೆ ನಿರಂತರ ಶೋಷಣೆ, ದಬ್ಬಾಳಿಕೆ, ದೌರ್ಜನ್ಯಗಳು ಮತ್ತು ಮೀಸಲಾತಿಯ ವಂಚನೆಯ ಪ್ರಕರಣಗಳು ಹೆಚ್ಚಾಗುತ್ತಿರುವುದು ಖಂಡನೀಯ. ಇಂದಿಗೂ ಭಾರತೀಯ ಸಂಸ್ಕೃತಿಗೆ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಆದಿಕವಿ ಮಹರ್ಷಿ ವಾಲ್ಮೀಕಿಯವರ ಆದರ್ಶಗಳನ್ನು ಹಾಗೂ ಭಾರತದ ಶೋಷಿತ ಸಮುದಾಯಗಳ ಧ್ವನಿ, ಮಹಾ ಮಾನವತವಾದಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಬಿ.ಆರ್. ಅಂಬೇಡ್ಕರ್‌ ಸಂವಿಧಾನದ ಆಶಯಗಳಿಗೆ ಬದ್ಧರಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಸಂವಿಧಾನದ ಹಕ್ಕುಗಳನ್ನು ಪಡೆಯಲು ಸಾಂಘಿಕವಾಗಿ ಒಟ್ಟಾಗಿ ಮೀಸಲಾತಿ ಕಬಳಿಸುವವರ ವಿರುದ್ಧ ಹೋರಾಡುವ ಅನಿವಾರ್ಯತೆ ಎದುರಾಗಿದೆ. ನಮ್ಮ ಪರಿಶಿಷ್ಟ ಪಂಗಡದ ಜಾತಿಗೆ ಅನ್ಯ ಸಮುದಾಯವನ್ನು ಸೇರ್ಪಡೆ ಮಾಡುವುದಕ್ಕೆ ಮುಂದಾಗಿರುವುದು ಖಂಡನಿಯವಾಗಿದೆ. ಇದನ್ನು ನಮ್ಮ ಸಮಾಜ ಬಲವಾಗಿ ಖಂಡಿಸುತ್ತದೆ ಎಂದರು.ನಿ.ಶಿಕ್ಷಕ ಕೆ.ಡಿ. ದೀವಿಗಿಹಳ್ಳಿ ಮಾತನಾಡಿ, ನಾಯಕ ತಳವಾರ ಹೆಸರಿನಲ್ಲಿ 2 ಲಕ್ಷಕ್ಕೂ ಹೆಚ್ಚಿಗೆ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ತೆಗೆದುಕೊಂಡು ಅನೇಕ ಸೌಲಭ್ಯಗಳನ್ನು ವಾಮ ಮಾರ್ಗದಲ್ಲಿ ಪಡೆದು ವಂಚಿಸುತ್ತಿರುವ ಬಗ್ಗೆ ಈಗಾಗಲೇ ಸರ್ಕಾರದ ಗಮನ ಸೆಳೆದಿದ್ದರೂ ಸಹ ಈ ಹಗಲು ದರೋಡೆಗೆ ಸರ್ಕಾರ ಕಡಿವಾಣ ಹಾಕದಿರುವುದು ವಿಷಾದನೀಯ. ಪರಿಶಿಷ್ಟ ಪಂಗಡದ ನಾಯಕ ತಳವಾರ ಹೆಸರಿನಲ್ಲಿ ಪ್ರವರ್ಗ-1 ರಲ್ಲಿರುವ ಬೇರೆ ಸಮುದಾಯದವರು ಅಕ್ರಮವಾಗಿ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಮತ್ತು ಸಿಂಧುತ್ವ ಪ್ರಮಾಣ ಪತ್ರಗಳನ್ನು ತೆಗೆದುಕೊಂಡು ವಂಚಿಸುತ್ತಿರುವುದು ರಾಜ್ಯದಲ್ಲಿ ಕಂಡು ಬರುತ್ತಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪರಿಶಿಷ್ಟ ಪಂಗಡದ ವಾಲ್ಮೀಕಿ ನಾಯಕ ಸಮಾಜ ಸಂಘಟನೆಗಳು ಮತ್ತು ಇತರೆ ಪರಿಶಿಷ್ಟ ಪಂಗಡದ ಸಂಘಟನೆಗಳು ನಿರಂತರವಾಗಿ ಅನೇಕ ಪ್ರತಿಭಟನೆಗಳನ್ನು ಮಾಡಿ ರಾಜ್ಯ ಸರ್ಕಾರಕ್ಕೆ, ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ, ತಹಸೀಲ್ದಾರ್‌ಗಳಿಗೆ ಮನವಿಗಳನ್ನು ನೀಡುತ್ತಿದ್ದರೂ ಸಹ ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿ ನಿಂತಿರುವುದಿಲ್ಲ. ಸರ್ಕಾರವೂ ಈ ಬಗ್ಗೆ ಅನೇಕ ಸುತ್ತೋಲೆಗಳನ್ನು ನೀಡಿದ್ದರೂ ಸಹ ತಹಸೀಲ್ದಾರ್‌ ಕಚೇರಿಗಳಿಂದ ನಕಲಿ ಜಾತಿ ಪತ್ರಗಳ ವಿತರಣೆ ಮುಂದುವರಿಯುತ್ತಲೇ ಇದೆ ಹಾಗೂ ತಪ್ಪಿತಸ್ಥರಿಗೆ ಯಾವುದೇ ಕ್ರಮ ಆಗಿರುವುದಿಲ್ಲ. ಕೂಡಲೇ ಸರ್ಕಾರ ನಮ್ಮ ಸಮಾಜಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಮತ್ತು ಅನ್ಯ ಸಮುದಾಯದವರನ್ನು ಎಸ್.ಟಿ. ಪಟ್ಟಿಗೆ ಸೇರಿಸುವುದನ್ನು ಕೈಬಿಡಬೇಕು ಇಲ್ಲದೇ ಇದ್ದರೆ ಮುಂದಿನ ದಿನದಲ್ಲಿ ನಮ್ಮ ಜನರು ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದರು. ತಾಲೂಕು ವಾಲ್ಮೀಕಿ ಸಮಾಜದ ಉಪಾಧ್ಯಕ್ಷರಾದ ಅಶೋಕ ಹೆಡಿಯಾಲ, ಮಂಜು ತಳವಾರ, ಹನುಮಂತಪ್ಪ ದೀವಿಗಿಹಳ್ಳಿ, ಪ್ರಧಾನ ಕಾರ್ಯದರ್ಶಿ ಕರಿಯಪ್ಪ ಚೌಡಕ್ಕನವರ, ಖಜಾಂಚಿ ನಾಗರಾಜ ಬಳ್ಳಾರಿ, ರಾಘವೇಂದ್ರ ಎ.ಜಿ. ಸದಸ್ಯರಾದ ಮಹೇಶಣ್ಣ ತಿಪ್ಪಣ್ಣನವರ, ಶರಣಗೌಡ ಬಾಲನಗೌಡ್ರ, ಮಾರುತಪ್ಪ ಗಿರಿಯಣ್ಣನವರ, ಮಂಜು ಬಳ್ಳಾರಿ, ಕರಬಸಪ್ಪ ನಾಗೇನಹಳ್ಳಿ, ಕುಮಾರ ಮಾಸೂರು, ಕೃಷ್ಣಗೌಡ ಮುದ್ದನಗೌಡ್ರ, ಹರೀಶ ಮಾಳಗೇರ, ಮಾಲತೇಶ ಸಣ್ಣಪ್ಪನವರ, ಪ್ರಕಾಶ ಕೊಣನತೆಲಿ ಇದ್ದರು.