ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಕಾಟನ್ ಪೇಟೆಯ ಶಾಶ್ವತ ಸಮಾದಿ ಮತ್ತು ಪ್ರಾರ್ಥನಾ ಸ್ಥಳಕ್ಕೆ (ಪೀರ್ ಬೌಂಡರಿ) ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಸೋಮವಾರ ತಂತಿ ಬೇಲಿ ಅಳವಡಿಕೆಗೆ ಮುಂದಾದ ಸಂದರ್ಭದಲ್ಲಿ ಕೆಲವರು ಅಡ್ಡಿ ಪಡಿಸಿದ ಘಟನೆ ನಡೆದಿದೆ.ಈ ಜಾಗವು 1.30 ಎಕರೆ ಇದ್ದು, ಕಂದಾಯ ಇಲಾಖೆಯ ದಾಖಲೆಗಳಲ್ಲಿ ವರ್ಗಾವಣೆ ರಹಿತ ಎಂದು ಉಲ್ಲೇಖಿಸಲಾಗಿದೆ. ಜತೆಗೆ, ಜಾಗಕ್ಕೆ ಬಿಬಿಎಂಪಿಯ ಹೆಸರಿನಲ್ಲಿ ಎರಡು ಖಾತೆಗಳಿವೆ. ಹೀಗಾಗಿ, ಜಾಗ ಸಂರಕ್ಷಣೆಯ ಉದ್ದೇಶದಿಂದ ಬಿಬಿಎಂಪಿಯು ಸುಮಾರು ₹80 ಲಕ್ಷ ವೆಚ್ಚದಲ್ಲಿ ತಂತಿ ಬೇಲಿ ಅಳವಡಿಕೆ ಕಾಮಗಾರಿಯನ್ನು ಕೈಗೊಂಡಿತ್ತು. ಅದರಂತೆ ಸೋಮವಾರ ಕಾಮಗಾರಿ ಆರಂಭಿಸುವುದಕ್ಕೆ ತೆರಳಿದ ವೇಳೆ ಸೈಯದ್ ಮೊಯಿಖಾನ್ ಎಂಬುವವರು, ಜಾಗವು ತಮ್ಮ ಕುಟುಂಬಕ್ಕೆ ಸೇರಿದ್ದು ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ ಎಂದು ಕಾಮಗಾರಿಗೆ ಅಡ್ಡಿ ಪಡಿಸುವುದಕ್ಕೆ ಮುಂದಾದರು. ಈ ವೇಳೆ ಭದ್ರತೆಗೆ ಆಗಮಿಸಿದ ಪೊಲೀಸ್ ಅಧಿಕಾರಿಗಳೊಂದಿಗೆ ಸೈಯದ್ ಮೊಯಿಖಾನ್ ಸೇರಿದಂತೆ ಬೆಂಬಲಿಗರ ನಡುವೆ ವಾಗ್ವಾದ ನಡೆಯಿತು. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತ್ತು.
ಅಂತಿಮವಾಗಿ ಜಾಗಕ್ಕೆ ಸಂಬಂಧಿಸಿದಂತೆ ಮಂಗಳವಾರ ದಾಖಲೆಗಳನ್ನು ಬಿಬಿಎಂಪಿಯ ಅಧಿಕಾರಿಗಳಿಗೆ ನೀಡಲಾಗುವುದು. ಅಲ್ಲಿಯವರೆಗೆ ಕಾಮಗಾರಿ ಮಾಡುವುದು ಬೇಡ ಎಂದು ಮನವಿ ಸೈಯದ್ ಮೊಯಿಖಾನ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಸೋಮವಾರ ಕೈಬಿಡಲಾಗಿದೆ.ಮಂಗಳವಾರ ಸೈಯದ್ ಮೊಯಿಖಾನ್ ದಾಖಲೆಗಳನ್ನು ಸಲ್ಲಿಕೆ ಮಾಡಿದರೆ ಪಾಲಿಕೆ ಕಾನೂನು ಕೋಶಕ್ಕೆ ಸಲ್ಲಿಕೆ ಮಾಡಿ ಪರಿಶೀಲನೆ ನಡೆಸಲಾಗುವುದು. ಕಾನೂನು ಕೋಶವು ನೀಡುವ ಅಭಿಪ್ರಾಯದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಮಂಗಳವಾರ ಸೈಯದ್ ಮೊಯಿಖಾನ್ ಯಾವುದೇ ದಾಖಲೆ ಸಲ್ಲಿಕೆ ಮಾಡದಿದ್ದರೆ, ಬುಧವಾರದಿಂದ ಮತ್ತೆ ಕಾಮಗಾರಿ ಆರಂಭಿಸುವುದಾಗಿ ಅಧಿಕಾರಿಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.