ಎಸ್‌ಐಆರ್‌ ವಿರೋಧಿ ಜನಪರ ಸಂಘಟನೆಗಳ ಒಕ್ಕೂಟದಿಂದ ನಡೆಯುತ್ತಿರುವ ಈ ಸಮೀಕ್ಷೆಯೂ ಮಂಗಳವಾರ ಮುಂಡಗೋಡಿನಿಂದ ಆರಂಭಗೊಂಡಿದ್ದು, ಸೆ. 29ರಂದು ಮಂಡ್ಯದಲ್ಲಿ ಮುಕ್ತಾಯಗೊಳ್ಳಲಿದೆ.

ಹುಬ್ಬಳ್ಳಿ:

ಎಸ್‌ಐಆರ್‌ನಿಂದ ಉಂಟಾಗಬಹುದಾದ ಸಮಸ್ಯೆಗಳ ವಾಸ್ತವ ಚಿತ್ರಣ ಪಡೆಯಲು ಮಂಗಳವಾರದಿಂದ "ಪ್ರತಿಶೋಧ ಮತ್ತು ಪ್ರತಿರೋಧ " ಹೆಸರಿನಲ್ಲಿ ಪ್ರವಾಸ ಕೈಗೊಳ್ಳಲಾಗಿದೆ. ಇದರಡಿ ರಾಜ್ಯದ 25 ಜಿಲ್ಲೆಗಳ 100 ಮತಗಟ್ಟೆ ಆಯ್ಕೆ ಮಾಡಿಕೊಂಡು ಮನೆ-ಮನೆ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಎದ್ದೇಳು ಕರ್ನಾಟಕದ ರಾಜ್ಯ ಸಮನ್ವಯಕ ನೂರ್ ಶ್ರೀಧರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಐಆರ್‌ ವಿರೋಧಿ ಜನಪರ ಸಂಘಟನೆಗಳ ಒಕ್ಕೂಟದಿಂದ ನಡೆಯುತ್ತಿರುವ ಈ ಸಮೀಕ್ಷೆಯೂ ಮಂಗಳವಾರ ಮುಂಡಗೋಡಿನಿಂದ ಆರಂಭಗೊಂಡಿದ್ದು, ಸೆ. 29ರಂದು ಮಂಡ್ಯದಲ್ಲಿ ಮುಕ್ತಾಯಗೊಳ್ಳಲಿದೆ ಎಂದರು.

ಎಸ್‌ಐಆರ್‌ ಪ್ರಕ್ರಿಯೆಯಿಂದಾಗಿ ದುಡಿಯುವ ಹಾಗೂ ಶೋಷಿತ ವರ್ಗದ ಅನೇಕ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗವನ್ನು ಒತ್ತಾಯಿಸಲಾಗುವುದು ಎಂದು ಹೇಳಿದ ಅವರು, ಎಸ್‌ಐಆರ್‌ ಪ್ರಕ್ರಿಯೆ ಪ್ರಜಾಪ್ರಭುತ್ವದ ಬುನಾದಿಗೆ ಧಕ್ಕೆ ಉಂಟು ಮಾಡುವ ಸಾಧ್ಯತೆ ಇದೆ ಎಂದು ಆರಂಭದಿಂದಲೂ ಎಚ್ಚರಿಸಲಾಗಿತ್ತು. ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮತದಾರರ ಹೆಸರು ಕೈಬಿಟ್ಟಿರುವ ಕುರಿತು ಹಲವು ಆಕ್ಷೇಪ ಕೇಳಿ ಬಂದಿವೆ. ಕರ್ನಾಟಕದಲ್ಲೂ ಹೆಚ್ಚಿನ ಸಂಖ್ಯೆಯ ಮತದಾರರ ಹೆಸರು ಪಟ್ಟಿಯಿಂದ ಹೊರಗುಳಿದಿರುವ ಬಗ್ಗೆ ಅನುಮಾನಗಳಿವೆ ಎಂದರು.

ಎಸ್‌ಐಆರ್‌ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸದೆ ಕರಡು ಮತದಾರರ ಪಟ್ಟಿಯನ್ನು ಗ್ರಾಮಸಭೆ ಹಾಗೂ ವಾರ್ಡ್‌ ಸಭೆಗಳಲ್ಲಿ ಸಾರ್ವಜನಿಕವಾಗಿ ಪರಿಶೀಲನೆಗೆ ಒಳಪಡಿಸಬೇಕು. ಪ್ರತಿಯೊಂದು ಪಂಚಾಯಿತಿ ಹಾಗೂ ವಾರ್ಡ್‌ನಲ್ಲಿ ಸಹಾಯ ಕೇಂದ್ರ ಸ್ಥಾಪಿಸಿ, ಅಗತ್ಯ ದಾಖಲೆ ಪಡೆಯಲು ಜನರಿಗೆ ಸರ್ಕಾರ ನೆರವಾಗಬೇಕು ಎಂದು ಒತ್ತಾಯಿಸಿದರು.

ಎದ್ದೇಳು ಕರ್ನಾಟಕದ ರಾಜ್ಯ ಕಾರ್ಯದರ್ಶಿ ಕೆ.ಎಲ್. ಅಶೋಕ ಮಾತನಾಡಿ, ಕರ್ನಾಟಕದಲ್ಲಿ 1.08 ಕೋಟಿಗೂ ಅಧಿಕ ಮತದಾರರನ್ನು ಎಎಸ್‌ಡಿಡಿಒ ಪಟ್ಟಿಯಲ್ಲಿ ಗುರುತಿಸಿರುವುದು ಹಾಗೂ 43.8 ಲಕ್ಷಕ್ಕೂ ಹೆಚ್ಚು ಮತದಾರರಿಗೆ ನೋಟಿಸ್‌ ನೀಡಿರುವ ಹಿನ್ನೆಲೆಯಲ್ಲಿ, ನೈಜ ಮತದಾರರ ಸ್ಥಿತಿಗತಿ ಪರಿಶೀಲಿಸುವ ಅಗತ್ಯವಿದೆ. ನೋ ಮ್ಯಾಪಿಂಗ್‌ ಹಾಗೂ ತಾರ್ಕಿಕ ವ್ಯತ್ಯಾಸ ಕಾರಣಕ್ಕೆ ನೋಟಿಸ್‌ ಪಡೆದವರಲ್ಲಿ ಅರ್ಹರು ಹೊರಗುಳಿಯದಂತೆ ಸಮರ್ಪಕ ಪರಿಶೀಲನೆ ಮತ್ತು ಕಾಲಾವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಸೆ. 30ಕ್ಕೆ ವರದಿ:

100 ಬೂತ್‌ಗಳ ಅಧ್ಯಯನದ ಪ್ರಾಥಮಿಕ ವರದಿಯನ್ನು ಸೆ. 30ರಂದು ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗದ ಮುಂದಿಡಲಾಗುವುದು. ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಸದಸ್ಯರೊಂದಿಗೆ ಈ ಕುರಿತು ಚರ್ಚಿಸಿ, ಎಸ್‌ಐಆರ್‌ ಕುರಿತು ಸರ್ಕಾರ ಮತ್ತು ನಾಗರಿಕ ಸಮಾಜ ಕೈಗೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆ ಪ್ರಸ್ತಾಪಿಸಲಾಗುವುದು ಎಂದರು.

ಅ. 1ರಂದು ರಾಷ್ಟ್ರಮಟ್ಟದ ಸಭೆ:

ವಿವಿಧ ರಾಜ್ಯಗಳ ನಾಗರಿಕ ಸಂಘಟನೆಗಳ ರಾಷ್ಟ್ರೀಯ ಸಭೆ ಅ.1ರಂದು ದೆಹಲಿಯಲ್ಲಿ ನಡೆಯಲಿದ್ದು, ಮುಂದಿನ ಹೋರಾಟದ ರೂಪುರೇಷೆ ಪ್ರಕಟಿಸಲಾಗುವುದು ಎಂದರು.

ವೆಲ್‌ಫೇರ್‌ ಪಾರ್ಟಿ ಆಫ್‌ ಇಂಡಿಯಾದ ರಾಜ್ಯಾಧ್ಯಕ್ಷ ತಾಹಿರ್ ಹುಸೇನ್ ಮಾತನಾಡಿದರು. ಈ ವೇಳೆ ಬಸವರಾಜ ಸೂಳಿಬಾವಿ, ಡಾ. ಇಸಬೆಲ್ಲಾ ಝೇವಿಯರ್, ಮುಸ್ತಾಕ್‌ ಅಹ್ಮದ್, ಗುರುನಾಥ ಉಳ್ಳಿಕಾಶಿ, ಮಹೇಶ ಪತ್ತಾರ ಸೇರಿದಂತೆ ಹಲವರಿದ್ದರು.

ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಿದ್ದ ನಟ ಪ್ರಕಾಶ ರಾಜ್‌ ಅವರು ಭಾಗಿಯಾಗಲಿಲ್ಲ. ಆದರೆ ನೂರ್‌ ಶ್ರೀಧರ್‌ ಮೊಬೈಲ್‌ ಮೂಲಕ ಸುದ್ದಿಗಾರರೊಂದಿಗೆ ಮಾತನಾಡಿದರು. ಎಸ್‌ಐಆರ್‌ ಪ್ರಕ್ರಿಯೆಗೆ ವಿರೋಧಿಸಿದರು.