ಕೇಂದ್ರ ಬಿಜೆಪಿ ಸರ್ಕಾರ ಈ ಬಾರಿ ವಿಶೇಷವಾಗಿ ಪಟ್ಟಿ ಪರಿಷ್ಕರಣೆ ಮಾಡುತ್ತಿದ್ದು, ಅನಕ್ಷರಸ್ಥರು, ಬಡವರು, ಆದಿವಾಸಿಗಳು, ಮಹಿಳೆಯರು ಹಾಗೂ ಕಾರ್ಮಿಕರು ಮತದಾರ ಪಟ್ಟಿಯಿಂದ ಹೊರ ಹೋಗುವ ಸಾಧ್ಯತೆಗಳು ಹೆಚ್ಚಿದೆ.

ಧಾರವಾಡ:

ಕೇಂದ್ರ ಸರ್ಕಾರವು ಭಾರತ ಚುನಾವಣಾ ಆಯೋಗದೊಂದಿಗೆ ನಡೆಸುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್ಐಆರ್‌)ಯಲ್ಲಿ ಅಸಂವಿಧಾನಿಕವಾಗಿದ್ದು ಈ ಪ್ರಕ್ರಿಯೆ ವಿರೋಧಿಸಿ ರಾಜ್ಯದಲ್ಲಿ ಜಾನಜಾಗೃತಿ ಜಾಥಾ ಆಯೋಜಿಸಲಾಗಿದೆ ಎಂದು ಸಾಮಾಜಿಕ ಹೋರಾಟಗಾರ್ತಿ ಇಸಬೆಲ್ಲಾ ಝೇವಿಯರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹತ್ತು ವರ್ಷಗಳಿಗೊಮ್ಮೆ ಈ ಪಟ್ಟಿ ಪರಿಷ್ಕಣೆ ಆಗುವುದು ಸಾಮಾನ್ಯ. ಆದರೆ, ಕೇಂದ್ರ ಬಿಜೆಪಿ ಸರ್ಕಾರ ಈ ಬಾರಿ ವಿಶೇಷವಾಗಿ ಪಟ್ಟಿ ಪರಿಷ್ಕರಣೆ ಮಾಡುತ್ತಿದ್ದು, ಅನಕ್ಷರಸ್ಥರು, ಬಡವರು, ಆದಿವಾಸಿಗಳು, ಮಹಿಳೆಯರು ಹಾಗೂ ಕಾರ್ಮಿಕರು ಮತದಾರ ಪಟ್ಟಿಯಿಂದ ಹೊರ ಹೋಗುವ ಸಾಧ್ಯತೆಗಳು ಹೆಚ್ಚಿದೆ. ಅಲ್ಲದೇ, ದಾಖಲೆ ನೀಡಲು 15ರಿಂದ 1 ತಿಂಗಳು ಮಾತ್ರ ಸಮಯ ನೀಡಿದ್ದು, ಮೊದಲಿನ ಪಟ್ಟಿ ಹಾಗೂ ಈಗಿನ ಪಟ್ಟಿಯಲ್ಲಿ ಹೆಸರು ಹೋಲಿಕೆ ಆಗದೇ ಹೋದಲ್ಲಿ ಪಟ್ಟಿಯಿಂದ ಹೆಸರು ಹಾರಿ ಹೋಗುವ ಸಾಧ್ಯತೆಗಳೇ ಹೆಚ್ಚಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಈಗಾಗಲೇ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ನಡೆದ ಪರಿಷ್ಕರಣೆಯಲ್ಲಿ 6.5 ಕೋಟಿ ಜನರ ಹೆಸರುಗಳು ಪಟ್ಟಿಯಿಂದ ಹೊರ ಹೋಗಿವೆ. ಹೀಗಾಗಿ ರಾಜ್ಯದಲ್ಲೂ ಇದೇ ಮಾದರಿಯಲ್ಲಿ ಮತದಾರರ ಪಟ್ಟಿಯಿಂದ ಹೆಸರು ಬಿಟ್ಟು ಹೋಗುವ ಆತಂಕ ಎದುರಾಗದೆ. ಈ ಹಿನ್ನೆಲೆಯಲ್ಲಿ ಜೂ. 20ರಂದು ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಹೋರಾಟಕ್ಕೆ ಸಜ್ಜಾಗಿದ್ದೇವೆ ಎಂದರು.

ಹೋರಾಟಗಾರ ಲಕ್ಷ್ಮಣ ಬಕ್ಕಾಯಿ ಮಾತನಾಡಿ, ಕಾಂಗ್ರೆಸ್‌ ಪಕ್ಷವು ಇನ್ನೂ 50 ವರ್ಷಗಳ ಕಾಲ ಅಧಿಕಾರಕ್ಕೆ ಬರಬಾರದೆಂಬ ನಿಟ್ಟಿನಲ್ಲಿ ಕೇಂದ್ರದ ಬಿಜೆಪಿ ಸರ್ಕಾರದ ಕೆಟ್ಟ ಚಿಂತನೆ ಎಸ್‌ಐಆರ್‌. ಕಾಂಗ್ರೆಸ್‌ ಪಕ್ಷ ಬೆಂಬಲಿಸುವ ಎಸ್ಸಿ-ಎಸ್ಟಿ ಜನಾಂಗ, ಕಾರ್ಮಿಕರು, ಮಹಿಳೆಯರನ್ನು ಮತದಾರರ ಪಟ್ಟಿಯಿಂದ ಕೈ ಬಿಟ್ಟರೆ, ಸರಳವಾಗಿ ಬಹುಮತ ಪಡೆಯಬಹುದು ಎಂಬ ಚಿಂತನೆಯಿಂದ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಸ್ಲಿಂ ಸಂಘಟನೆಯ ಯೂಸೂಫ್, ಅಂಜುಮನ್‌ ಸಂಸ್ಥೆಯ ಜಹಗೀರದಾರ, ಶಂಕರ ಹಲಗತ್ತಿ, ಫಾದರ್‌ ಧೀರಜ್‌ ಮತ್ತಿತರರು ಇದ್ದರು.