ಶಿವಳ್ಳಿ ಸಮೀಪದ ಮಡ್ಡಿಗುಡ್ಡದಲ್ಲಿ ನಿರ್ಮಿಸುತ್ತಿರುವ 450 ಟನ್ ಸಾಮರ್ಥ್ಯದ ಘನ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದನಾ ಘಟಕ ಸ್ಥಾಪನೆಗೆ ಶಿವಳ್ಳಿ ಹಾಗೂ ಸುತ್ತಲಿನ ಗ್ರಾಮಸ್ಥರು ಪ್ರತಿರೋಧ ವ್ಯಕ್ತಪಡಿಸಿದರು.
ಧಾರವಾಡ:
ತಮ್ಮೂರಿನ ಸಮೀಪ ಸ್ಥಾಪಿಸುತ್ತಿರುವ ಘನ ತ್ಯಾಜ್ಯ ಘಟಕ ವಿರೋಧಿಸಿದ ಗ್ರಾಮಸ್ಥರು ಕೈಯಲ್ಲಿ ಸಸಿ ಹಿಡಿದು ಘಟಕದ ಆವರಣದಲ್ಲಿ ನೆಡಲು ಮುಂದಾದ ಘಟನೆ ಸೋಮವಾರ ಜರುಗಿದ್ದು ಯಾವುದೇ ಕಾರಣಕ್ಕೂ ಘಟಕ ಸ್ಥಾಪಿಸಲೇ ಬಾರದೆಂದು ಪಟ್ಟು ಹಿಡಿದರು.ತಾಲೂಕಿನ ಶಿವಳ್ಳಿ ಸಮೀಪದ ಮಡ್ಡಿಗುಡ್ಡದಲ್ಲಿ ನಿರ್ಮಿಸುತ್ತಿರುವ 450 ಟನ್ ಸಾಮರ್ಥ್ಯದ ಘನ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದನಾ ಘಟಕ ಸ್ಥಾಪನೆಗೆ ಶಿವಳ್ಳಿ ಹಾಗೂ ಸುತ್ತಲಿನ ಗ್ರಾಮಸ್ಥರು ಪ್ರತಿರೋಧ ವ್ಯಕ್ತಪಡಿಸಿದರು. ಶಿವಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಾದ ಹೆಬ್ಬಳ್ಳಿ, ಮಾರಡಗಿ, ಸುಳ್ಳ ಮತ್ತು ಸೋಮಾಪುರ ಹಳ್ಳಿಗಳ ಜನರು ಪರಿಸರ ರಕ್ಷಣೆ ಜನಾಂದೋಲನ ಸಮಿತಿ ರಚಿಸಿಕೊಂಡು ಹೋರಾಟದ ಮುಂಚೂಣಿ ವಹಿಸಿದ್ದಾರೆ. ಈ ಮಡ್ಡಿಗುಡ್ಡ ಮೂಲತಃ ಅರಣ್ಯ ಇಲಾಖೆಗೆ ಸೇರಿದೆ. ಆದರೆ, ಅದು ಹೇಗೆ ಮಹಾನಗರ ಪಾಲಿಕೆ ಹೆಸರಿಗೆ ಆಗಿದೆ ಎಂಬುದೇ ಗೊತ್ತಾಗುತ್ತಿಲ್ಲ. ಇಲ್ಲಿ ಯಾವುದೇ ಕಾರಣಕ್ಕೂ ಬಯೋಗ್ಯಾಸ್ ಉತ್ಪಾದನಾ ಘಟಕ ಬೇಡ. ಇಲ್ಲಿ ಸಸಿ ನೆಟ್ಟು ನಮ್ಮೂರಿನ ಪರಿಸರ ಕಾಪಾಡಿಕೊಳ್ಳುತ್ತೇವೆ ಎಂದು ಹೇಳಿದರು.
ಈ ಯೋಜನೆ ಶುರುವಾದರೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಗೆ ದುರ್ನಾತ ಹರಡುವ ಜತೆಗೆ ಸೊಳ್ಳೆ, ನೊಣಗಳ ಹಾವಳಿಯೂ ಹೆಚ್ಚುತ್ತದೆ. ಇದರೊಂದಿಗೆ ಅಂತರ್ಜಲವೂ ಕಲುಷಿತಗೊಳ್ಳುತ್ತದೆ. ಘಟಕದ ವಿಷಕಾರಿ ತ್ಯಾಜ್ಯವು ಭೂಮಿಯಲ್ಲಿ ಸೇರಿ ಮಣ್ಣಿನ ಫಲವತ್ತತೆ ಕೂಡ ಹಾಳಾಗಲಿದೆ. ಕಸದ ಘಟಕಗಳಲ್ಲಿ ಬೆಂಕಿ ಅವಘಡ ಸಂಭವಿಸುವ ಅಪಾಯವಿದ್ದು, ಅಪಾಯಕಾರಿ ಅನಿಲ ತಮ್ಮೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಸೇರಿಕೊಂಡು, ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.ಪೊಲೀಸರ ತಡೆ:
ತಂಡೋಪ ತಂಡವಾಗಿ ಸಸಿಯೊಂದಿಗೆ ಆಗಮಿಸಿದ್ದ ಜನರು ಘಟಕದ ಒಳಗಡೆ ನುಗ್ಗಲು ಯತ್ನಿಸಿದರು. ಆದರೆ, ಪೊಲೀಸರು ಅದಕ್ಕೆ ತಡೆವೊಡ್ಡಿದರು. ಹೀಗಾಗಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಸ್ಥಳೀಯರನ್ನು ಘಟಕದ ಒಳಗೆ ಬಿಟ್ಟರು. ಬಳಿಕ ಮಾತನಾಡಿ, ಈ ಜಾಗ 2003ರಲ್ಲಿಯೇ ಮಹಾನಗರ ಪಾಲಿಕೆಗೆ ಹಸ್ತಾಂತರವಾಗಿದ್ದು ಘಟಕ ಆರಂಭಿಸಲಾಗುತ್ತಿದೆ. ಇದೀಗ ವಿರೋಧ ವ್ಯಕ್ತವಾದ ಹಿನ್ನೆಲೆ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದರು.