ಬಳ್ಳಾರಿ: ಲಿಂಗತ್ವ, ಲೈಂಗಿಕ ಅಲ್ಪಸಂಖ್ಯಾತರ ಬದುಕಿಗೆ ಮಾರಕವಾಗಿರುವ ಕೇಂದ್ರ ಸರ್ಕಾರ ಜಾರಿಗೊಳಿಸಲು ಸಜ್ಜಾಗಿರುವ ತಿದ್ದುಪಡಿ ಮಸೂದೆ- 2026 ರಾಜ್ಯದಲ್ಲಿ ಅನುಷ್ಠಾನಗೊಳಿಸಬಾರದು ಎಂದು ಒತ್ತಾಯಿಸಿ ಮೇ 4ರಂದು ನಗರದಲ್ಲಿ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಲಿಂಗತ್ವ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಹಕ್ಕು ರಕ್ಷಣಾ ಸಮಿತಿಯ ಮುಖ್ಯಸ್ಥೆ ವೀಣಾ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಇತ್ತೀಚೆಗೆ ಮಂಡಿಸಿರುವ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆ 2026 ದೇಶದಲ್ಲಿ ಜಾರಿಗೊಂಡಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಸಮುದಾಗಳ ಹಕ್ಕುಗಳಿಗೆ ದೊಡ್ಡ ಹಿನ್ನಡೆಯಾಗಲಿದೆ. ಸ್ವಗುರುತು ಮತ್ತು ಗೌರವದಿಂದ ದೂರ ಸರಿಸಿ ವ್ಯಕ್ತಿಯ ಲಿಂಗತ್ವವನ್ನು ನಿರ್ಧರಿಸುವ ಅಧಿಕಾರವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಮತ್ತು ವೈದ್ಯಕೀಯ ಮಂಡಳಿಗಳ ಮೂಲಕ ರಾಜ್ಯದ ಕೈಗೆ ಒಪ್ಪಿಸಿದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ತೃತೀಯ ಲಿಂಗಿಗಳು ಹಾಗೂ ಲಿಂಗಪರಿವರ್ತಿತರಿಗೆ ತಮ್ಮ ಲೈಂಗಿಕ ಅಸ್ಮಿತೆಯನ್ನು ಸ್ವಯಂ ನಿರ್ಧರಿಸಲು ಅವಕಾಶ ಕಲ್ಪಿಸಿಕೊಡುತ್ತಿದ್ದವು. ಈ ಅವಕಾಶ ಅವರ ಜೀವಿಸುವ ಹಕ್ಕುಗಳ ಭಾಗವಾಗುತ್ತಿತ್ತು. ಈ ಹಕ್ಕು ಮತ್ತು ಕಾನೂನು, ಲಿಂಗತ್ವ ಅಲ್ಪಸಂಖ್ಯಾತರು ಆತ್ಮಗೌರವ, ಘನತೆಯಿಂದ ತಮ್ಮ ಬದುಕನ್ನು ಕಟ್ಟಿಕೊಳ್ಳಲು ನೆರವಾಗುತ್ತಿದ್ದವು. ಆದರೆ, ಸಂಸತ್‌ನಲ್ಲಿ ಮಂಡಿಸಿದ ತಿದ್ದುಪಡಿ ಮಸೂದೆ ಇಲ್ಲಿವರೆಗೆ ಜಾರಿಯಲ್ಲಿದ್ದ ಪ್ರಗತಿಪರ ಕ್ರಮಗಳಿಗೆ ಹಿನ್ನಡೆ ಉಂಟುಮಾಡುವ ಆತಂಕ ಸೃಷ್ಟಿಸಿದೆ. ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿ ಕುರಿತಾದ ವ್ಯಾಖ್ಯೆಯನ್ನು ಮಸೂದೆ ಸಂಕುಚಿತಗೊಳಿಸುತ್ತಿದೆ ಎಂದು ತಿಳಿಸಿದರು.

ಉದ್ದೇಶಿತ ತಿದ್ದುಪಡಿ ಅನೇಕ ಲಿಂಗತ್ವ ಅಲ್ಪಸಂಖ್ಯಾತರನ್ನು ಪ್ರಸಕ್ತ ಕಾಯ್ದೆ ನೀಡಿರುವ ರಕ್ಷಣೆಗಳ ವ್ಯಾಪ್ತಿಯ ಹೊರಗೆ ಇರಿಸುವುದರ ಜತೆಗೆ ಅವರನ್ನು ಹೆಚ್ಚು ಕಠಿಣ ಹಿಂಸೆ, ವಿಚಾರಣೆಗೆ ಒಳಪಡಿಸಲಿದೆ. ದೈಹಿಕ, ವೈದ್ಯಕೀಯ ಪರಿಶೀಲನೆಯ ಮೂಲಕ ಲಿಂಗತ್ವವನ್ನು ಗುರ್ತಿಸುವ ಉದ್ದೇಶಿತ ತಿದ್ದುಪಡಿಯು 2019ರ ಕಾಯ್ದೆಯ ಮಹತ್ವವನ್ನು ಕುಗ್ಗಿಸಲಿದೆ. ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ ಒಳಗಾಗುವ ವ್ಯಕ್ತಿಗಳ ವಿವರಗಳನ್ನು ವೈದ್ಯಕೀಯ ಸಂಸ್ಥೆಗಳು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅವರೊಂದಿಗೆ ಕಡ್ಡಾಯವಾಗಿ ಹಂಚಿಕೊಳ್ಳಬೇಕೆನ್ನುವುದು ಗೌಪ್ಯತೆಯ ಹಕ್ಕಿನ ಉಲ್ಲಂಘನೆಯಾಗಿದೆ. ಸಾಂವಿಧಾನಿಕ ಹಕ್ಕು ಎಂದು ಸುಪ್ರೀಂಕೋರ್ಟ್‌ ಹೇಳಿರುವ ಸ್ವಯಂ ಗುರ್ತಿಸಿಕೊಳ್ಳುವ ಹಕ್ಕನ್ನು ನಿರಾಕರಿಸುವ ಮಸೂದೆ ಸಾಂವಿಧಾನಿಕ ಪರಿಶೀಲನೆಗೆ ಒಳಪಡಬೇಕಾದ ಅಗತ್ಯವಿದೆ. ಕೇಂದ್ರ ಸರ್ಕಾರದ ಅವೈಜ್ಞಾನಿ ನಿಲುವನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ಆಸ್ಪದ ಮಾಡಿಕೊಡಬಾರದು ಎಂದು ಒತ್ತಾಯಿಸಿ ಬಳ್ಳಾರಿಯ ಗಾಂಧಿಭವನದಲ್ಲಿ ಮೇ 4ರಂದು ಬೆಳಿಗ್ಗೆ 11 ಗಂಟೆಗೆ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶ ಅಂಗವಾಗಿ ಮೋತಿ ವೃತ್ತದಿಂದ ಗಾಂಧಿಭವನವರೆಗೆ ಮೆರವಣಿಗೆ ನಡೆಸಲಾಗುವುದು. ಸಮಾವೇಶದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದು, ನೂರಾರು ಸಂಖ್ಯೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಮುಖಂಡರಾದ ಪರ್ವಿನ್ ಬಾನು, ಗೌಸಿಯಾಬಾನು, ಚಾಂದಿನಿ, ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಜೆ.ಚಂದ್ರಕುಮಾರಿ, ಅರುಣಾ, ಹೇಮಲತಾ ಇದ್ದರು.