ವಿಬಿ-ಜಿ-ರಾಮ್- ಜಿ ಯೋಜನೆಯ ಜನಜಾಗೃತಿ ಅಭಿಯಾನದಲ್ಲಿ ಸಂಸದ
ಕನ್ನಡಪ್ರಭ ವಾರ್ತೆ ಹೊನ್ನಾವರಜನತಂತ್ರ ವ್ಯವಸ್ಥೆಯಲ್ಲಿ ಸರ್ಕಾರ ಎಷ್ಟು ಜಾಗೃತವಾಗಿರಬೇಕು ಎನ್ನುವುದಕ್ಕೆ ಕಾಂಗ್ರೆಸ್ ಮಾಡುವ ಸುಳ್ಳು ಅಪಪ್ರಚಾರ ಒಂದು ನಿದರ್ಶನ. ಕೂಲಿಗಾಗಿ ಕಾಳು ಯೋಜನೆ, ಉದ್ಯೋಗ ಕಾತರಿ ಎಂಬ ಹೆಸರಿನಲ್ಲಿ ನಂತರ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆ ಎಂದು ಕಾಲಕಾಲಕ್ಕೆ ಬದಲಾಯಿಸಲಾಯಿತು. ಇದೀಗ ಬಿಜೆಪಿ ವಿಬಿಜಿ ರಾಮಜಿ ಯೋಜನೆ ಎಂದು ಹೆಸರು ಕೊಟ್ಟಿದ್ದಕ್ಕೆ ಕಾಂಗ್ರೆಸ್ ವಿರೋಧಿಸುತ್ತಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ತಾಲೂಕಿನ ಕವಲಕ್ಕಿಯಲ್ಲಿ ಹೊನ್ನಾವರ ಬಿಜೆಪಿ ಮಂಡಲ ವತಿಯಿಂದ ಸೋಮವಾರ ನಡೆದ ವಿಬಿ-ಜಿ-ರಾಮ್- ಜಿ ಯೋಜನೆಯ ಜನಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.ಗ್ರಾಪಂ ಅಧಿಕಾರವನ್ನು ಕಸಿದುಕೊಳ್ಳುತ್ತಿದೆ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಈ ಯೋಜನೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಗ್ರಾಪಂ ಅಧಿಕಾರವನ್ನು ಮೊಟಕುಗೊಳಿಸಲಾಗಿಲ್ಲ. ಗ್ರಾಪಂ ವ್ಯಾಪ್ತಿಯಲ್ಲಿ ಸಾಮಾನ್ಯ ಜನರ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಹೀಗಿರುವಾಗ ಅವರು ಯೋಜನೆಯ ಹೆಸರು ಬದಲಾವಣೆ ಮಾಡಿರುವ ಬಗ್ಗೆ ಮಾತನಾಡುತ್ತಾರೆ. ಈ ಹಿನ್ನೆಲೆ ನಾವು ಜಾಗೃತಿ ಅಭಿಯಾನ ನಡೆಸುತ್ತಿದ್ದೇವೆ ಎಂದರು.ಈ ಯೋಜನೆಯ ಹೆಸರಲ್ಲಿ ರಾಮನ ಹೆಸರು ಇದೆ ಎಂದು ಹೇಳಿ ಅವರು ಇದನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಿದರು.
ವಿಬಿಜಿ ರಾಮಜಿ ಯೋಜನೆ ದುಡಿಯುವ ಕೈಗಳಿಗೆ ಉದ್ಯೋಗ ನೀಡುವ ಜೊತೆಗೆ ಭಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶ ಹೊಂದಿದೆ. ಈ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು ಕಾಂಗ್ರೆಸ್ಸಿಗೆ ಅಜೀರ್ಣವಾಗಿದೆ. ಕೂಲಿ ಮಾಡಿದವರಿಗೆ ಒಂದು ವಾರದೊಳಗೆ ಹಣ ಪಾವತಿ ಮಾಡಬೇಕು, 100 ದಿನಗಳ ಬದಲು ಕನಿಷ್ಟ 125 ದಿನ ಕೆಲಸ ನೀಡಲಾಗುತ್ತಿದೆ ಎಂದರು.ಭ್ರಷ್ಟಾಚಾರ ನಿಯಂತ್ರಣಕ್ಕೆ ತಂದಿರುವ ಕಾಯ್ದೆಯಿಂದ ಯಾರಿಗೂ ತೊಂದರೆ ಆಗುವುದಿಲ್ಲ. ಅದೇನಾದರೂ ತೊಂದರೆ ಆದರೆ ಸಿದ್ದರಾಮಯ್ಯನವರ ಸರ್ಕಾರಕ್ಕೆ ಮಾತ್ರ. ನಮ್ಮ ಎಲ್ಲಾ ಕಾರ್ಯಕರ್ತರು ಪಂಚಾಯತಿ ಸದಸ್ಯರು ಈ ಯೋಜನೆಯ ಮಾಹಿತಿ ಸಾಮಾನ್ಯ ಕೂಲಿಕಾರ್ಮಿಕರಿಗೂ ತಲುಪಿಸಿ ಎಂದರು.ಶಾಸಕ ದಿನಕರ ಶೆಟ್ಟಿ ಮಾತನಾಡಿ, ನಾನು ಮೊದಲು ಶಾಸಕನಾಗಿದ್ದಾಗ ತುಂಬಾ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಈಗ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ. ಅವರು ನನ್ನ ಕ್ಷೇತ್ರಕ್ಕೆ ಏನನ್ನೂ ನೀಡುತ್ತಿಲ್ಲ. ಸರ್ಕಾರಿ ಶಾಲಾ ಕಟ್ಟಡ ನಿರ್ಮಿಸಲು ಅವರು ಯಾವುದೇ ಸಹಾಯ ನೀಡುತ್ತಿಲ್ಲ. ಉಸ್ತುವಾರಿ ಸಚಿವರು ದುರಸ್ತಿ ಮಾಡುವ ಬದಲು ಹೊಸ ಕಟ್ಟಡಗಳಿಗೆ ಸಹಾಯ ನೀಡುವುದಾಗಿ ಈ ಹಿಂದೆ ಹೇಳಿದ್ದರು. ಆದರೆ ಇನ್ನೂ ಅದರ ಬಗ್ಗೆ ಕೇಳಿದರೆ, ಯಾವುದೇ ಹೊಸ ಕಟ್ಟಡ ನೀಡಲಾಗಿಲ್ಲ ಎಂದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಎಸ್.ಹೆಗಡೆ, ಜಿಪಂ ಮಾಜಿ ಸದಸ್ಯೆ ಶ್ರೀಕಲಾ ಶಾಸ್ತ್ರಿ ಮಾತನಾಡಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಕವಲಕ್ಕಿಯಲ್ಲಿ ಪಾದಯಾತ್ರೆಯ ಮೂಲಕ ಸಂಚರಿಸಿ ಕಾಂಗ್ರೆಸ್ ಮತ್ತು ಮುಖ್ಯಮಂತ್ರಿ ವಿರುದ್ಧ ಘೋಷಣೆ ಕೂಗಿದರು.
ಹೊನ್ನಾವರ ಮಂಡಲ ಅಧ್ಯಕ್ಷ ಯೋಗೇಶ್ ಮೇಸ್ತ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಜಿಪಂ ಸದಸ್ಯ ಶಿವಾನಂದ ಹೆಗಡೆ ಕಡತೋಕ, ಪ್ರಮುಖರಾದ ರಾಜೇಶ್ ಬಂಡಾರಿ, ಜಗದೀಶ್ ನಾಯ್ಕ್ ಮೊಗಟ, ಮಂಜುನಾಥ್ ನಾಯ್ಕ ಇತರರು ಇದ್ದರು.