ಸಾರಾಂಶ
ಸುದ್ದಿಗೋಷ್ಠಿಯಲ್ಲಿ ಕಮ್ಮರಡಿ ಇಲಿಯಾಸ್ ಮಾತನಾಡಿದರು. ಈ ವೇಳೆ ಕುಟುಂಬಸ್ಥರು ಉಪಸ್ಥಿತರಿದ್ದರು.
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಕಮ್ಮರಡಿ ಸಮೀಪದ ಹೊರಣೆಬೈಲು ಕೆಸಲೂರಿನಲ್ಲಿ ಅಬಕಾರಿ ಇಲಾಖೆಯ ಯಮಮ ಉಲ್ಲಂಘಿಸಿ ಜನವಸತಿ ಪ್ರದೇಶದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯುವ ಸಿದ್ಧತೆ ನಡೆಸಲಾಗುತ್ತಿದೆ. ಜಿಲ್ಲಾಧಿಕಾರಿಗಳೂ ಸೇರಿದಂತೆ 16 ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಕೂಡ ಯಾರಿಂದಲೂ ಸ್ಪಂದನೆ ಇಲ್ಲವಾಗಿದೆ ಎಂದು ಇಲಿಯಾಸ್ ಆಕ್ಷೇಪ ವ್ಯಕ್ತಪಡಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 45 ವರ್ಷಗಳಿಂದ ಕೆಸಲೂರಿನಲ್ಲಿ ಜೀವನ ನಡೆಸುತ್ತಿದ್ದೇವೆ. ಇಲ್ಲಿ ಮದ್ಯದಂಗಡಿ ತೆರೆದಲ್ಲಿ ಹೆಂಗಸರು,ಮಕ್ಕಳು ಮನೆಯಿಂದ ಹೊರಬರುವುದಕ್ಕೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗುವ ಆತಂಕವಿದೆ. ಯಾರಲ್ಲಿ ನಮ್ಮ ಗೋಳು ಹೇಳಿಕೊಳ್ಳಬೇಕು ಎಂಬುದು ತಿಳಿಯದೆ, ಹೆಂಗಸರನ್ನು ಕರೆದುಕೊಂಡು ಬಂದು ಗೋಗೆರೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ಹೇಳಿಕೊಂಡರು.
ಗ್ರಾಮದ ಸರ್ವೇ.ನಂ 72 ರಲ್ಲಿ ಉದ್ದೇಶಿತ ಬಾರಿಗೆ ಮನೆಗಳಿಂದ ದೂರವನ್ನು ಹೆಚ್ಚಿಸುವ ಸಲುವಾಗಿ ರಸ್ತೆ ಮತ್ತು ಕಟ್ಟಡದ ನಡುವೆ ಕಾಂಪೌಂಡ್ ನಿರ್ಮಿಸಿ ಬದಲಿ ರಸ್ತೆ ದೂರದ ದಾರಿ ತೋರಿಸಲಾಗಿದೆ. ಈ ಜಾಗದಲ್ಲಿ ಅಕ್ರಮವಾಗಿ ಯಂತ್ರಗಳನ್ನು ಬಳಸಿ ಮರಗಳನ್ನು ಕಡಿಯಲಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯ ಅರಣ್ಯ ಸಂರಕ್ಷಣಾಧಿಕಾರಿಗಳು, ಎಸಿಎಫ್, ಆರ್‌ಎಫ್‍ಒ, ಜಿಪಂ ಸಿಇಒ, ತಹಸೀಲ್ದಾರ್‌ಗೆ ದೂರು ನೀಡಿದ್ದೇವೆ ಎಂದು ಹೇಳಿದರು.ಈ ಪ್ರತಿಭಟನೆ ನಮ್ಮ ನಮ್ಮ ಮನೆಗಳ ಹೆಣ್ಣುಮಕ್ಕಳ ಸುರಕ್ಷತೆ ಮತ್ತು ಜೀವನದ ಪ್ರಶ್ನೆಯಾಗಿದೆಯೇ ಹೊರತು ಯಾರನ್ನೂ ವಿರೋದಿಸುವ ಉದ್ದೇಶವಿಲ್ಲ. ಮದ್ಯದ ಅಂಗಡಿಗೆ ಅನುಮತಿ ನೀಡಬಾರದು. ನಮ್ಮ ಈ ಗಂಭೀರ ಸಮಸ್ಯೆಯನ್ನು ಪರಿಗಣಿಸಿ ನ್ಯಾಯ ದೊರಕಿಸಿಕೊಡಬೇಕು. ಇಲ್ಲವಾದಲ್ಲಿ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗಲಿದೆ ಎಂದು ಮನವಿ ಮಾಡಿದರು. ಸಭೆಯಲ್ಲಿ ಯಹ್ಯಾ, ಅನಿಶಾ ಇಲಿಯಾಸ್, ನಿಶ್ಮಾ, ಮಮ್ತಾಜ್ ಇದ್ದರು.