ಸಾರಾಂಶ
ಶಿವಮೊಗ್ಗ: ಕರ್ನಾಟಕ ನೀರಾವರಿ ನಿಗಮ ನಿಯಮಿತವು ಭದ್ರಾ ಜಲಾಶಯದ ಬಳಿಯ ಬಫರ್ ಝೋನ್‍ನ ಒಳ ಭಾಗದಲ್ಲಿ ನಡೆಸಲಾಗುತ್ತಿರುವ ನೀರು ಶುದ್ಧೀಕರಣ ಘಟಕದ ಕಾಮಗಾರಿಯನ್ನು ತಕ್ಷಣವೇ ನಿಲ್ಲಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡ ಕೆ.ಟಿ.ಗಂಗಾಧರ್ ನೇತೃತ್ವದಲ್ಲಿ ಕಾಮಗಾರಿ ನಡೆಯುವ ಸ್ಥಳದಲ್ಲಿ ರೈತರು ಮಂಗಳವಾರದಿಂದ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.
ಈ ವೇಳೆ ಮಾತನಾಡಿದ ರೈತ ಸಂಘದ ಮುಖಂಡ ಕೆ.ಟಿ.ಗಂಗಾಧರ್, ಈ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಇದನ್ನು ನಿಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳ ಬಳಿ ಮನವಿ ಮಾಡಿದರೂ ಸಹ ಕಾಮಗಾರಿ ಮುಂದುವರೆಸಿರುವುದು ಖಂಡನೀಯ ಎಂದರು.ನೀರಾವರಿ ನಿಗಮದ ಭದ್ರಾವತಿಯ ನಂ. 4, ಬಿಆರ್‌ಎಲ್‍ಬಿಸಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಅವರು ಕಾಮಗಾರಿ ನಿಲ್ಲಿಸುವ ಕುರಿತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ಪತ್ರದ ಮೂಲಕ ತಿಳಿಸಿದ್ದರೂ, ಸಹ ಕಾಮಗಾರಿ ಮುಂದುವರೆಸಲಾಗಿದೆ. ಇದನ್ನು ಖಂಡಿಸಿ ಅಹೋರಾತ್ರಿ ಧರಣಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ತರೀಕೆರೆ ತಾಲೂಕು ಲಕ್ಕವಳ್ಳಿ ಗ್ರಾಮದ ಸರ್ವೇ ನಂ. 28 ಮತ್ತು 29ರಲ್ಲಿ ಭದ್ರಾ ಜಲಾಶಯದ ಮುಂಭಾಗದಲ್ಲಿ ನೀರು ಶುದ್ಧೀಕರಣ ಘಟಕದ ಕಾಮಗಾರಿಯನ್ನು ನಡೆಸುತ್ತಿರುವುದನ್ನು ಗಮನಿಸಲಾಗಿದೆ. ಭದ್ರಾ ಜಲಾಶಯವು ಬೃಹತ್ ಜಲಾಶಯವಾಗಿದ್ದು, ಈ ಜಲಾಶಯದ ಸಮೀಪ ಕಾಮಗಾರಿಯನ್ನು ಪ್ರಾರಂಭಿಸುವ ಮೊದಲು ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ ನಿರಪೇಕ್ಷಣಾ ಪತ್ರ ಪಡೆಯಬೇಕಾಗಿರುತ್ತದೆ. ಈ ಪ್ರದೇಶವು ಅತ್ಯಂತ ಸೂಕ್ಷ್ಮ ಹಾಗೂ ನಿರ್ಬಂಧಿತ ಪ್ರದೇಶವಾಗಿದ್ದು, ಇಲ್ಲಿ ಯಾವುದೇ ಯೋಜನೆಗಳನ್ನಾಗಲಿ ಅಥವಾ ಶಾಶ್ವತ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತಿಲ್ಲ ಎಂದು ಹೇಳಿದರು.ಈಗಾಗಲೇ ನಿರ್ವಹಿಸುತ್ತಿರುವ ಕಾಮಗಾರಿಯ ಸ್ಥಳವು ಬಫರ್ ಝೋನ್‍ನ ಒಳ ಭಾಗದಲ್ಲಿ ಇರುವ ಕಾರಣ ಕಾಮಗಾರಿಯನ್ನು ಮುಂದುವರೆಸದಂತೆ ತಿಳಿಸಲಾಗಿದೆ. ಆದ್ದರಿಂದ ಸಕ್ಷಮ ಪ್ರಾಧಿಕಾರದ ಮುಂದಿನ ನಿರ್ದೇಶನದವರೆಗೆ ತಕ್ಷಣವೇ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ತಿಳಿಸಲಾಗಿದ್ದರೂ, ಸಹ ಕಾಮಗಾರಿ ಮುಂದುವರೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭದ್ರಾ ಡ್ಯಾಂನಿಂದ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಸುಮಾರು 6 ಜಿಲ್ಲೆಗಳ 4.50 ಲಕ್ಷಕ್ಕೂ ಅಧಿಕ ಎಕ್ಟೇರ್ ಜಮೀನಿಗೆ ನೀರು ಒದಗಿಸಲಾಗುತ್ತದೆ. ತರೀಕೆರೆ ಮತ್ತು ಹೊಸದುರ್ಗ ಗ್ರಾಮಾಂತರ ಭಾಗಕ್ಕೆ ಜಲಜೀವನ್ ಮಿಷನ್ ಯೋಜನೆ ಅಡಿ 500 ಕೋಟಿ ರು. ವೆಚ್ಚದಲ್ಲಿ ನೀರು ಶುದ್ಧೀಕರಣ ಘಟಕದ ಕಾಮಗಾರಿಯನ್ನು ಭದ್ರಾ ಜಲಾಶಯದ ಬಳಿಯ ಬಫರ್ ಝೋನ್‍ನ ಒಳ ಭಾಗದಲ್ಲಿ ನಡೆಸುತ್ತಿರುವುದು ಆತಂಕಕಾರಿಯಾಗಿದೆ ಎಂದರು.ಬಫರ್ ಝೋನ್‍ನ ಒಳ ಭಾಗದಲ್ಲಿ ನಡೆಸುತ್ತಿರುವ ಕಾಮಗಾರಿಯಿಂದ ಡ್ಯಾಂನ ಭದ್ರತೆಗೆ ಧಕ್ಕೆ ಉಂಟಾಗಲಿದೆ. ಆದ್ದರಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಿ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಧರಣಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಯಶವಂತರಾವ್ ಘೋರ್ಪಡೆ, ಕಾಚಿನಕಟ್ಟೆ ಪುಟ್ಟಪ್ಪ, ಭದ್ರಾವತಿ ತಾಲೂಕು ಅಧ್ಯಕ್ಷ ವೀರಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥೇಶ್ವರ, ತರೀಕೆರೆ ತಾಲೂಕಿನ ರಂಗೇನಹಳ್ಳಿ ಮೂಡಲಪ್ಪ, ಗೋವಿಂದ ನಾಯ್ಕ, ಜಗದೀಶ ನಾಯ್ಕ ಮಲವಗೊಪ್ಪ, ಎನ್.ಎಚ್.ದೇವಕುಮಾರ್, ಲವಕುಮಾರ ಮತ್ತಿತರರು ಭಾಗವಹಿಸಿದ್ದರು.