ಸಾರಾಂಶ
ಶಿಗ್ಗಾಂವಿ: ಸಿದ್ದರಾಮಯ್ಯ ಅವರು ಒಬ್ಬ ಮುಖ್ಯಮಂತ್ರಿ, ಸರ್ಕಾರ ಇಟ್ಟುಕೊಂಡು ಚುನಾವಣೆಯನ್ನು ಗೆಲ್ಲುವುದಕ್ಕೋಸ್ಕರ ಹಸಿಸುಳ್ಳು ಹೇಳುತ್ತಿರುವುದು ಖೇದವೆನಿಸುತ್ತಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದರು. ಶಿಗ್ಗಾಂವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಸುಳ್ಳಿನಿಂದಾಗಿಯೇ ಕೋವಿಡ್‌ನಿಂದ ಅತಿ ಹೆಚ್ಚು ಸಾವಾಗಲು ಕಾರಣವಾಗಿದೆ. ಕೋವಿಡ್ ಆರಂಭದಲ್ಲಿ ಮಾಸ್ಕ್ ಧರಿಸದೇ ಇರುವವರನ್ನು, ರಸ್ತೆಯಲ್ಲಿ ಎಲ್ಲಿಬೇಕಲ್ಲಿ ಉಗುಳುವವರನ್ನು ಬೆಂಬಲಿಸಿ ಕೋವಿಡ್ ಸಾವಿನ ಸಂಖ್ಯೆ ಹೆಚ್ಚಳವಾಗಲು ಕಾಂಗ್ರೆಸ್ಸೇ ಕಾರಣವಾಗಿದೆ. ಕೋವಿಡ್ ಲಸಿಕೆ ವಿಚಾರದಲ್ಲಿಯೂ ಆರಂಭದಲ್ಲಿ ಕಾಂಗ್ರೆಸ್ ಅಪಪ್ರಚಾರ ಮಾಡಿತ್ತು. ಇವರ ಸರ್ಕಾರವಿದ್ದಾಗ ಕೋವಿಡ್ ಆಗಿದ್ದರೆ ಇವರು ಇನ್ನೂ ಏನೇನು ಮಾಡುತ್ತಿದ್ದರೋ? ಕೋವಿಡ್ ವಿಚಾರದಲ್ಲಿ ಕಾಂಗ್ರೆಸ್ ಅನೈತಿಕವಾಗಿ ನಡೆದುಕೊಂಡಿದೆ ಎಂದು ಅವರು ಆರೋಪಿಸಿದರು.ಕಳೆದ ಹತ್ತು ವರ್ಷದಲ್ಲಿ ಬೇರೆ ಬೇರೆ ವಸತಿ ಯೋಜನೆ ಅಡಿಯಲ್ಲಿ ಎಂಟು ಸಾವಿರ ಮನೆ, ಸ್ಲಂ ಬೋರ್ಡ್ ವತಿಯಿಂದ ಎರಡು ಸಾವಿರ ಮನೆ ಕಟ್ಟಿಸಿದ್ದೇನೆ. ಈ ಸರ್ಕಾರ ಬಂದು ಯಾವುದೇ ಮನೆಗೆ ಹಣ ನೀಡಿಲ್ಲ. ಫಲಾನುಭವಿಗಳೆ ಸ್ವಯಂಪ್ರೇರಿತರಾಗಿ ಬೊಮ್ಮಾಯಿಯವರು ನಮಗೆ ಮನೆ ಕಟ್ಟಿಸಿಕೊಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ. ಇವತ್ತು ಹಿರೇಮಣಕಟ್ಟಿಗೆ ಹೋದಾಗ ಅಲ್ಲಿನ ಫಲಾನುಭವಿ ಮಹಿಳೆ ತಮಗೆ ಮನೆ ಕಟ್ಟಿಸಿರುವುದನ್ನು ತೋರಿಸಿದರು. ಆದ್ದರಿಂದ ಸಿಎಂ ಸಿದ್ದರಾಮಯ್ಯ ಯಾರೋ ಕಾರ್ಯಕರ್ತರು ಹೇಳಿರುವ ಮಾತು ಕೇಳದೇ ಕ್ಷೇತ್ರದಲ್ಲಿ ತಿರುಗಾಡಿ ವಾಸ್ತವ ತಿಳಿದುಕೊಳ್ಳಲಿ ಎಂದು ಹೇಳಿದರು.ಸ್ವಾಮೀಜಿಗಳನ್ನು ಬೊಮ್ಮಾಯಿ ಪ್ರಚಾರಕ್ಕೆ ಹೋಗಬಾರದು ಎಂದು ಸಿಎಂ ಹೇಳಿದ್ದಾರೆಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿ ಹಾಗೂ ಸಿದ್ದರಾಮಯ್ಯ ಅವರ ನಡುವಿನ ಸಂಬಂಧದ ಬಗ್ಗೆ ನನಗೆ ಗೊತ್ತಿಲ್ಲ. ನನಗೆ ಸ್ವಾಮೀಜಿಯವರ ಬಗ್ಗೆ ಭಕ್ತಿ, ಗೌರವ ಇದೆ. ಸ್ವಾಮೀಜಿಗಳನ್ನು ಚುನಾವಣಾ ವಿಚಾರದಲ್ಲಿ ತರುವಷ್ಟು ಕಾಂಗ್ರೆಸ್ ವೀಕ್ ಆಗಿದಿಯಾ ಎಂದು ಪ್ರಶ್ನಿಸಿದರು.