ಸಬ್‌ರಿಜಿಸ್ಟ್ರಾರ್ ಕಚೇರಿ ಸ್ಥಳಾಂತರಕ್ಕೆ ವಿರೋಧ

| Published : Jul 25 2024, 01:31 AM IST

ಸಬ್‌ರಿಜಿಸ್ಟ್ರಾರ್ ಕಚೇರಿ ಸ್ಥಳಾಂತರಕ್ಕೆ ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

ಈಗಿರುವ ಸಬ್‌ ರಿಜಿಸ್ಟ್ರಾರ್ ಕಚೇರಿ ನಗರದ ಎಲ್ಲಾ ಭಾಗದ ಸಾರ್ವಜನಿಕರಿಗೆ ಅನುಕೂಲಕರವಾಗಿದ್ದು, ಸುಗಮ ವ್ಯವಸ್ಥೆ ಇದೆ, ಹೀಗಿದ್ದ ಮೇಲೆ ಸ್ಥಳಾಂತರಿಸಬಾರದು ಎಂದು ಭಗತ್‌ಸಿಂಗ್ ಕನ್ನಡ ಯುವಕರ ಸಂಘದ ಅಧ್ಯಕ್ಷ ರಾಜಶೇಖರ್ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಬ್‌ರಿಜಿಸ್ಟ್ರಾರ್ ಕಚೇರಿಯನ್ನು ಸ್ಥಳಾಂತರಿಸಬಾರದು ಈಗಿರುವ ಕಚೇರಿಗೆ ಇನ್ನೂ ಹೆಚ್ಚಿನ ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂದು ಭಗತ್‌ಸಿಂಗ್ ಕನ್ನಡ ಯುವಕರ ಸಂಘದ ಅಧ್ಯಕ್ಷ ರಾಜಶೇಖರ್ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹಾಲಿ ಇರುವ ಸಬ್‌ ರಿಜಿಸ್ಟ್ರಾರ್ ಕಚೇರಿ ನಗರದ ಎಲ್ಲಾ ಭಾಗದ ಸಾರ್ವಜನಿಕರಿಗೆ ಅನುಕೂಲಕರವಾಗಿದ್ದು, ಸುಗಮವಾದ ರಸ್ತೆಯ ಸಂಪರ್ಕ ಮತ್ತು ಸಾರಿಗೆ ವ್ಯವಸ್ಥೆ ಇದೆ. ಲಿಫ್ಟ್‌ ವ್ಯವಸ್ಥೆ ಕೂಡ ಈ ಕಟ್ಟಡದಲ್ಲಿ ಕಲ್ಪಿಸಲಾಗಿದ್ದು, ವಯಸ್ಸಾದವರಿಗೆ ಹಾಗೂ ಅಂಗವಿಕಲರಿಗೆ ಅನುಕೂಲಕರವಾಗಿದೆ ಎಂದರು.

ಶುದ್ಧ ಕುಡಿಯುವ ನೀರಿನ ಸೌಲಭ್ಯ, ಕುಳಿತುಕೊಳ್ಳಲು ಸ್ಥಳಾವಕಾಶ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾದ ಶೌಚಾಲಯದ ವ್ಯವಸ್ಥೆ ಅವಶ್ಯಕತೆ ಇದ್ದು, ಈ ಎಲ್ಲಾ ಸೌಲಭ್ಯಗಳನ್ನು ಒದಗಿಸಿದರೆ ಹಾಲಿ ಇರುವ ಸಬ್‌ ರಿಜಿಸ್ಟ್ರಾರ್ ಕಚೇರಿ ಎಲ್ಲರಿಗೂ ಅನುಕೂಲವಾಗುತ್ತದೆ ಮತ್ತು ಅದನ್ನೇ ನಂಬಿ ಹಲವಾರು ಬಡವರು ವ್ಯವಹಾರ ಮಾಡುತ್ತಿದ್ದು, ಏಕಾಏಕಿ ಕಚೇರಿಯನ್ನು ಸ್ಥಳಾಂತರ ಮಾಡಿದರೆ ಹಲವು ಕುಟುಂಬಗಳು ಬೀದಿಗೆ ಬೀಳುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಾಸ್ತಾವಿತ ಎಪಿಎಂಸಿ ಯಾರ್ಡ್‌ನಲ್ಲಿ ನೂತನವಾಗಿ ನಿರ್ಮಾಣಗೊಂಡ ಕಟ್ಟಡಕ್ಕೆ ಸಬ್‌ ರಿಜಿಸ್ಟ್ರಾರ್ ಕಚೇರಿಯನ್ನು ಸ್ಥಳಾಂತರಗೊಳಿಸಿದರೆ ಬೇರೆ ಬೇರೆ ಭಾಗಗಳಿಂದ ಕಚೇರಿಗೆ ಬರುವ ಸಾರ್ವಜನಿಕರಿಗೆ ಅನಾನುಕೂಲ ವಾಗುತ್ತದೆ. ಸಾಗರ ರಸ್ತೆಯಲ್ಲಿ ಅತಿಯಾದ ವಾಹನ ಸಂಚಾರ ದಟ್ಟಣೆ ಇರುವುದರಿಂದ ಕಚೇರಿಯನ್ನು ಅಲ್ಲಿಗೆ ಸ್ಥಳಾಂತರಿಸಿದರೆ ಅಪಘಾತದ ಸಂಭವ ಹೆಚ್ಚಾಗಿದ್ದು, ಹಾಲಿ ಸಬ್‌ ರಿಜಿಸ್ಟ್ರಾರ್ ಕಚೇರಿ ಇರುವ ಜಾಗದಲ್ಲೇ ಮುಂದುವರೆಸಿಕೊಂಡು ಹೋಗಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಆರ್.ಕೆ.ದೇವದಾಸ್, ಸುಧಾಕರ್, ರಾಜಣ್ಣ, ಮಣಿ, ಶಿವಕುಮಾರ್, ಪ್ರಕಾಶ್, ಸೋಮಶೇಖರ್, ಶಂಕರ್, ಆರ್‍ಮುಗಂ, ಆರ್.ಕಿರಣ್ ಇದ್ದರು