ಯೋಜನೆಯಲ್ಲಿ 100-120 ದಿನಕ್ಕೆ ಹೆಚ್ಚಿಸಿ ಸಣ್ಣ ಪುಟ್ಟ ಬದಲಾವಣೆ ಮಾಡಿ ಪಂಚಾಯತಿ ಅಧಿಕಾರ ಬದಲಾವಣೆ ಮಾಡಿಲ್ಲ
ಕೊಪ್ಪಳ: ವಿಬಿ ರಾಮ್ ಜಿಗೆ ಕಾಂಗ್ರೆಸ್ ವಿರೋಧ ಮಾಡುತ್ತಿರುವುದು ಹಾಸ್ಯಾಸ್ಪದ. ಕಾಂಗ್ರೆಸ್‌ನವರು ಯೋಜನೆಗಳಲ್ಲಿನ ಅಂಶಕ್ಕೆ ವಿರೋಧವೋ ಅಥವಾ ಹೆಸರಿಗೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸುಳ್ಳಿನ ಸರಮಾಲೆ ಹೇಳುತ್ತಿದೆ. ಗ್ರಾಪಂ ಹಕ್ಕುಗಳನ್ನು ಕಸಿದುಕೊಳ್ಳಲು ಹೊರಟಿದೆ ಎನ್ನುತ್ತಾರೆ. ಯೋಜನೆಯಲ್ಲಿ 100-120 ದಿನಕ್ಕೆ ಹೆಚ್ಚಿಸಿ ಸಣ್ಣ ಪುಟ್ಟ ಬದಲಾವಣೆ ಮಾಡಿ ಪಂಚಾಯತಿ ಅಧಿಕಾರ ಬದಲಾವಣೆ ಮಾಡಿಲ್ಲ. ಸಿಎಂ ಸೇರಿ ಎಲ್ಲರೂ ಸರಿಯಾಗಿ ಓದಬೇಕು ಎಂದರು.ಈ ಯೋಜನೆಗೆ 2013-14ರಲ್ಲಿ ₹33 ಸಾವಿರ ಕೋಟಿ ಇತ್ತು. ಈಗ ₹2.86 ಲಕ್ಷ ಕೋಟಿ ಅನುದಾನ ನೀಡಲಾಗಿದೆ. ಎಲ್ಲ ರೀತಿಯಿಂದ ಬಡವರಿಗೆ ಅನುಕೂಲವಾಗುವ ಯೋಜನೆ ಬದಲಾವಣೆಯಾಗಿದೆ. ನರೇಗಾದಲ್ಲಿ 10 ಲಕ್ಷ ದೂರು ಬಂದಿದ್ದವು. ಈಗ ದೂರುಗಳ ಸಂಖ್ಯೆ ಕಡಿಮೆಯಾಗಿದೆ. ಇನ್ನೂ ಬದಲಾವಣೆ ತರಲಾಗುವುದು. ಬಯೋಮೆಟ್ರಿಕ್, ಎಐ ಟೆಕ್ನಾಲಾಜಿ ಬಳಕೆ ಮಾಡಿ ನಿಗಾ ವಹಿಸಲಾಗಿದೆ. ಹಲವಾರು ಯೋಜನೆ, ಸಂಘ ಸಂಸ್ಥೆಗಳು ನಕಲಿ ಗಾಂಧಿ ಹೆಸರಿನಲ್ಲಿವೆ. ರಾಜ್ಯದ ಪಾಲನ್ನು 60-40 ಮಾಡಿದ್ದರೆ ತಪ್ಪಿಲ್ಲ. ರಾಜ್ಯ ಸರ್ಕಾರವು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ತನ್ನ ಪಾಲಿನ ₹370 ಕೋಟಿ ಕೊಡಬೇಕು. ಇಲ್ಲಿ ಯಾಕೆ ರಾಜ್ಯದವರು ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಇನ್ನು ಬಳ್ಳಾರಿ ಘಟನೆಗೆ ಸಂಬಂಧಿಸಿದಂತೆ ರಾಜ್ಯಾಧ್ಯಕ್ಷರು ಹೋರಾಟ ಮಾಡುತ್ತಾರೆ. ಕೇಂದ್ರದವರೊಂದಿಗೆ ಚರ್ಚೆ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ಒಗ್ಗಟ್ಟಾಗಿ ತೀರ್ಮಾನ ಮಾಡುತ್ತೇವೆ. ಜಿಲ್ಲಾಡಳಿತ ಪರವಾನಗಿ ಪಡೆದು ಹೋರಾಟ ಮಾಡುತ್ತೇವೆ ಎಂದರು.ಗೃಹಲಕ್ಷ್ಮಿ ಯೋಜನೆಯಲ್ಲಿ ಹಣ ನೀಡದೆ ಇರುವ ಕುರಿತು ಅಧಿವೇಶನದಲ್ಲಿ ಮಾತನಾಡಿದೆ. ಎರಡು ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನೂ ಹೋಗಿಲ್ಲ. ಆ ಹಣ ಎಲ್ಲಿದೆ? ಎಲ್ಲಿ ಹೋಗಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಸಚಿವರು ಹಾಗು ಸಿಎಂ ಮಧ್ಯದ ಭಿನ್ನಾಭಿಪ್ರಾಯ ಇರಬಹುದು. ತಾಂತ್ರಿಕವಾಗಿ ಈ ಹಣ ನೀಡಬೇಕು. ಈ ಕುರಿತು ಹೋರಾಟ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಪವರ್ ಶೇರಿಂಗ್ ಇದು ಆ ಪಕ್ಷದ ನಿರ್ಧಾರ. ಜನರು ಅವರಿಗೆ ಅಧಿಕಾರ ಕೊಟ್ಟಿದ್ದಾರೆ. ಆದರೆ ಅಭಿವೃದ್ಧಿ ಶೂನ್ಯ ಸರ್ಕಾರವಾಗಿದೆ. ಕಾಂಗ್ರೆಸ್ ಶಾಸಕರು ಸಹ ಅಭಿವೃದ್ಧಿಯಾಗುತ್ತಿಲ್ಲ ಎನ್ನುತ್ತಾರೆ. ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಆಗಿದೆ. ಖರ್ಚಿ ಉಳಿಸಿಕೊಳ್ಳಲು ಒಬ್ಬರು ಖುರ್ಚಿ ಕಸಿದುಕೊಳ್ಳಲು ಪ್ರಯತ್ನ ಮಾಡುತ್ತಿರುವುದರಿಂದ ಜನರು ನಿರ್ಗತಿಕರಾಗುತ್ತಿದ್ದಾರೆ ಎಂದು ಟೀಕಿಸಿದರು.ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಮಾಜಿ ಸಚಿವ ಹಾಲಪ್ಪ ಆಚಾರ, ಡಾ. ಬಸವರಾಜ ಕ್ಯಾವಟರ್, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಚಂದ್ರಶೇಖರ ಹಲಗೇರಿ, ಪ್ರಮೋದ ಕಾರಕೂನ, ಮಹೇಶ ಕ್ಯಾವಟರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.