ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವ ಮೆಟ್ರೋ 3ನೇ ಹಂತ : ಹೊರವರ್ತುಲ ರಸ್ತೆಗೆ ಕಿತ್ತಳೆ ಮೆಟ್ರೋ ಸಂಪರ್ಕ

| Published : Aug 17 2024, 01:55 AM IST / Updated: Aug 17 2024, 05:41 AM IST

ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವ ಮೆಟ್ರೋ 3ನೇ ಹಂತ : ಹೊರವರ್ತುಲ ರಸ್ತೆಗೆ ಕಿತ್ತಳೆ ಮೆಟ್ರೋ ಸಂಪರ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವ ಮೆಟ್ರೋ 3ನೇ ಹಂತವು ಹೊರ ವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸಲಿದೆ.

 ಬೆಂಗಳೂರು :  ಕೇಂದ್ರ ಸರ್ಕಾರದ ಅನುಮತಿ ಪಡೆದಿರುವ ನಮ್ಮ ಮೆಟ್ರೋ 3ನೇ ಹಂತದ ಯೋಜನೆ ‘ಕಿತ್ತಳೆ ಮಾರ್ಗ’ ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್‌ ಸಂಕಷ್ಟಗಳಿಗೆ ಪರಿಹಾರ ಕಲ್ಪಿಸಲಿದೆ. 2029ಕ್ಕೆ ಜನಸಂಚಾರಕ್ಕೆ ಮುಕ್ತವಾಗಿಸುವ ಗುರಿಯಿರುವ 44.65 ಕಿ.ಮೀ. ಉದ್ದದ ಮಾರ್ಗವನ್ನು ಡಬ್ಬಲ್‌ ಡೆಕ್ಕರ್‌ ಆಗಿಸಲೂ ರಾಜ್ಯ ಸರ್ಕಾರ ಅಧ್ಯಯನ ನಡೆಸುತ್ತಿದೆ.

ವೆಚ್ಚ ಕಡಿತ:

ಆರಂಭದಲ್ಲಿ 2022ರಲ್ಲಿ ರಾಜ್ಯ ಸರ್ಕಾರ ಈ ಮಾರ್ಗಕ್ಕಾಗಿ ₹16,328 ಕೋಟಿ ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಿತ್ತು. ಆದರೆ, ಯೋಜನಾ ವೆಚ್ಚ ಹೆಚ್ಚಾದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯ ಕೆಲ ಬದಲಾವಣೆ ಸೂಚಿಸಿತ್ತು. ಬಳಿಕ ಯೋಜನಾ ವೆಚ್ಚವನ್ನು ₹15611 ಕೋಟಿಗೆ ತಗ್ಗಿಸಲಾಗಿದೆ.

ಮಾಗಡಿ ರೋಡ್‌ ಕಾರಿಡಾರ್‌ ಮಾರ್ಗದಲ್ಲಿ ಆರು ಬೋಗಿಗಳ ರೈಲಿನ ಬದಲಾಗಿ ಮೂರು ಬೋಗಿಗಳ ರೈಲು ಸಂಚಾರ ಮಾಡಲಿದೆ. ಆದರೆ ಭವಿಷ್ಯದ ದೃಷ್ಟಿಯಿಂದ ಎಲ್ಲಾ ರೈಲ್ವೆ ನಿಲ್ದಾಣಗಳು 6 ಬೋಗಿಗಳ ರೈಲು ನಿಲ್ಲುವ ಸಾಮರ್ಥ್ಯ ಹೊಂದಿರಲಿವೆ.

ಡಬ್ಬಲ್‌ ಡೆಕ್ಕರ್:

ಆದರೆ ಈ ನಡುವೆ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮೆಟ್ರೋ ಕಾರಿಡಾರ್‌ಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್‌ಗಳನ್ನು ನಿರ್ಮಿಸುವ ಬಗ್ಗೆ ರಾಜ್ಯ ಸರ್ಕಾರ ಆಸಕ್ತಿ ತೋರಿದೆ. ಈಗಾಗಲೇ ಕಾರಿಡಾರ್‌- 1 (29.2 ಕಿ.ಮೀ.) ಜೆ.ಪಿ.ನಗರ 4ನೇ ಹಂತದಿಂದ ಹೆಬ್ಬಾಳದವರೆಗೆ ಮತ್ತು ಕಾರಿಡಾರ್‌- 2 (11.45 ಕಿ.ಮೀ.) ಹೊಸಹಳ್ಳಿಯಿಂದ ಕಡಬಗೆರೆಯವರೆಗೆ. ಕಾರಿಡಾರ್‌- 3 (14 ಕಿ.ಮೀ.) ಸರ್ಜಾಪುರದಿಂದ ಇಬ್ಬಲೂರು ಮತ್ತು ಕಾರಿಡಾರ್‌- 4 (2.45 ಕಿ.ಮೀ.) ಅಗರದಿಂದ ಕೋರಮಂಗಲ 3ನೇ ಬ್ಲಾಕ್‌ವರೆಗೆ ಡಬಲ್‌ ಡೆಕ್ಕರ್‌ ಫ್ಲೈಓವರ್‌ ನಿರ್ಮಿಸುವ ಬಗ್ಗೆ ಕಾರ್ಯಸಾಧ್ಯತಾ ವರದಿ ರೂಪಿಸಲು ಟೆಂಡರ್‌ ನೀಡಲಾಗಿದೆ.

ಹೀಗಾಗಿ ಮೂರನೇ ಹಂತದ ಟೆಂಡರ್ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆಯೂ ಇದೆ. ಡಬಲ್‌ ಡೆಕ್ಕರ್‌ಗೆ ಬಿಬಿಎಂಪಿ ಕೂಡ ಅನುದಾನದ ಪಾಲುದಾರಿಕೆ ವಹಿಸಿಕೊಳ್ಳಲಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಭೂಸ್ವಾಧೀನ ಆರಂಭ

ಮೂರನೇ ಹಂತದ ಈ ಮಾರ್ಗ ಕೆಂಪಾಪುರದಿಂದ- ಜೆ.ಪಿ.ನಗರ ನಾಲ್ಕನೇ ಹಂತವನ್ನು ಸಂಪರ್ಕ ಕಲ್ಪಿಸಲಿದೆ. ಈ ಮಾರ್ಗದ ಭೂ ಸ್ವಾಧೀನಕ್ಕೆ ಸುಮಾರು ₹1,900 ಕೋಟಿ ಮೊತ್ತವನ್ನು ಬಿಎಂಆರ್‌ಸಿಎಲ್‌ ಅಂದಾಜಿಸಿದೆ. ಎಲಿವೇಟೆಡ್‌ ಕಾರಿಡಾರ್‌ ಎಂದು ಗುರುತಿಸಲಾದ ಈ ಮಾರ್ಗದ ಭೂಸ್ವಾದೀನಕ್ಕೆ ಜಂಟಿ ಸಮೀಕ್ಷೆಯು ನಡೆದಿದೆ.

ಮೊದಲ ಮಾರ್ಗದ ಎಡಲಿವೆಟೆಡ್ ಕಾಡಿರಾಡ್‌ ಒಆರ್‌ಆರ್‌ ಮಧ್ಯೆ ಸಾಗಲಿದೆ. ಮಾರ್ಗದ ಉದ್ದಕ್ಕೂ ಅಗತ್ಯವಿರುವ 777 ಆಸ್ತಿ ಕಾರಿಡಾರ್ ಒಂದರ ಮಾರ್ಗಕ್ಕಾಗಿ 1,29,743 ಚದರ ಮೀಟರ್‌ ಸ್ಥಳವನ್ನು ಗುರುತಿಸಲಾಗಿದೆ. ಕೆಐಎಡಿಬಿ ಮೂಲಕ ಇವುಗಳ ಸ್ವಾಧೀನಕ್ಕೆ ಮುಂದಾಗಲಾಗಿದೆ. ಇದರಲ್ಲಿ ಖಾಲಿ ಭೂಮಿ, ಕಟ್ಟಡಗಳು ಕೂಡ ಒಳಗೊಂಡಿವೆ. ಗುರುತಿಸಲಾದ ಸ್ವತ್ತುಗಳ ಪೈಕಿ ಮೂರ್ನಾಲ್ಕು ಅಂತಸ್ತಿನ ಕಟ್ಟಡಗಳಿದ್ದು, ಎತ್ತರದ ಕಟ್ಟಡಗಳಿಲ್ಲ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

4 ಇಂಟರ್‌ಚೇಂಜ್‌ ಸೌಲಭ್ಯ

ಬಿಎಂಆರ್‌ಸಿಎಲ್‌ ಉದ್ದೇಶಿತ ಕಿತ್ತಳೆ ಮಾರ್ಗವು (ಕೆಂಪಾಪುರ - ಜೆ.ಪಿ.ನಗರ 4ನೇ ಹಂತ) ಹೆಬ್ಬಾಳದಲ್ಲಿ ನೀಲಿ ಮಾರ್ಗ (ಕೆಐಎ- ರೇಷ್ಮೆ ಮಂಡಳಿ) ಮತ್ತು ಕೆಂಪು ಮಾರ್ಗ (ಸರ್ಜಾಪುರ - ಹೆಬ್ಬಾಳ) ಬೆಸೆಯಲಿದೆ. ಅಲ್ಲದೆ, ಉಪನಗರ ರೈಲು ಸಂಪರ್ಕವೂ ಲಭ್ಯವಾಗಲಿದೆ.

ತುಮಕೂರು ರಸ್ತೆಯ ಹಸಿರು ಮಾರ್ಗದ ಪೀಣ್ಯ ನಿಲ್ದಾಣ ಮತ್ತು ಜೆಪಿ ನಗರ ನಿಲ್ದಾಣ, ನೇರಳೆ ಮಾರ್ಗದ ಮೈಸೂರು ರಸ್ತೆ ನಿಲ್ದಾಣ ಹಾಗೂ ಹೊಸಹಳ್ಳಿ- ಕಡಬಗೆರೆ ಮಾರ್ಗದ ಸುಮನಹಳ್ಳಿ ಇಂಟರ್‌ಚೇಂಜ್‌ ಸಂಪರ್ಕವನ್ನು ಈ ಮಾರ್ಗ ಬೆಸೆಯಲಿದೆ.

ಕನಕಪುರ ರಸ್ತೆಯಲ್ಲಿ ಇದು ಜೆಪಿ ನಗರ ಮೆಟ್ರೋ ನಿಲ್ದಾಣದೊಂದಿಗೆ ಸಂಪರ್ಕಗೊಳ್ಳಲಿದೆ. ಬನ್ನೇರುಘಟ್ಟ ರಸ್ತೆಯಲ್ಲಿ ಜೆ.ಪಿ. ನಗರ ನಾಲ್ಕನೇ ಹಂತದಲ್ಲಿ ಇಂಟರ್‌ಚೇಂಜ್‌ ನಿಲ್ದಾಣದೊಂದಿಗೆ ಈ ಮಾರ್ಗ ಅಂತ್ಯವಾಗಲಿದೆ.

ಈ ಮಾರ್ಗದಲ್ಲಿ ಬಿಎಂಆರ್‌ಸಿಎಲ್‌ 75 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡು ಡಿಪೋ ನಿರ್ಮಿಸಲು ನಿರ್ಧರಿಸಿದೆ.

1ನೇ ಕಾರಿಡಾರ್‌ 21 ನಿಲ್ದಾಣ

ಜೆ.ಪಿ. ನಗರ 4ನೇ ಹಂತ, ಜೆ.ಪಿ ನಗರ 5ನೇ ಹಂತ, ಜೆ.ಪಿ ನಗರ, ಕದಿರೇನ ಹಳ್ಳಿ, ಕಾಮಾಕ್ಯ ಬಸ್‌ ನಿಲ್ದಾಣ, ಹೊಸಕೆರೆ ಹಳ್ಳಿ ಕ್ರಾಸ್‌, ಪಿಇಎಸ್‌ ಕಾಲೇಜು, ಮೈಸೂರು ರಸ್ತೆ, ನಾಗರಬಾವಿ ವೃತ್ತ, ವಿನಾಯಕ ಲೇಔಟ್‌, ಅಂಬೇಡ್ಕರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌, ಬಿಡಿಎ ಕಾಂಪ್ಲೆಕ್ಸ್‌, ಸುಮನಹಳ್ಳಿ ಕ್ರಾಸ್‌, ಚೌಡೇಶ್ವರಿ ನಗರ, ಫ್ರೀಡಂ ಫೈಟರ್‌ ಕ್ರಾಸ್‌, ಕಂಠೀರವ ಸ್ಟೇಡಿಯಂ, ಪೀಣ್ಯ, ಬಾಹುಬಲಿನಗರ, ಬಿಇಎಲ್‌ ವೃತ್ತ, ಪಟೇಲಪ್ಪ ಲೇಔಟ್‌, ಹೆಬ್ಬಾಳ, ಕೆಂಪಾಪುರ

2ನೇ ಕಾರಿಡಾರ್‌ 9 ನಿಲ್ದಾಣ: ಹೊಸಹಳ್ಳಿ, ಕೆಎಚ್‌ಬಿ ಕಾಲೋನಿ, ವಿನಾಯಕ ನಗರ, ಸುಮನ ಹಳ್ಳಿ ಕ್ರಾಸ್‌, ಸುಂಕದ ಕಟ್ಟೆ, ಹೇರೋಹಳ್ಳಿ, ಬ್ಯಾಡರಹಳ್ಳಿ, ಫಾರೆಸ್ಟ್‌ ಗೇಟ್‌, ಕಡಬಗೆರೆ.