4 ದಿನದಲ್ಲಿ 134 ಪೌರ ಕಾರ್ಮಿಕರ ನೇರ ನೇಮಕಾತಿ ಆದೇಶ ನೀಡಿ : ಶಾಸಕ ಪ್ರಸಾದ ಅಬ್ಬಯ್ಯ

| Published : Oct 07 2024, 01:46 AM IST / Updated: Oct 07 2024, 01:08 PM IST

4 ದಿನದಲ್ಲಿ 134 ಪೌರ ಕಾರ್ಮಿಕರ ನೇರ ನೇಮಕಾತಿ ಆದೇಶ ನೀಡಿ : ಶಾಸಕ ಪ್ರಸಾದ ಅಬ್ಬಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ 543 ಪೌರಕಾರ್ಮಿಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಶಾಸಕ ಪ್ರಸಾದ ಅಬ್ಬಯ್ಯ ಅವರು ಈ ಪ್ರಕ್ರಿಯೆಯನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯ 543 ಪೌರಕಾರ್ಮಿಕರ ನೇರ ನೇಮಕಾತಿಗೆ ಪಾಲಿಕೆ ಅಧಿಕಾರಿಗಳು ಕ್ರಮವಹಿಸಬೇಕು. ಈಗಾಗಲೇ ಆದೇಶ ಹೊರಡಿಸಿರುವ ಮೊದಲ ಹಂತದ 134 ಕಾರ್ಮಿಕರ ನೇಮಕಾತಿ ಅಂತಿಮ ಪಟ್ಟಿಯನ್ನು 4 ದಿನಗಳಲ್ಲಿ ಹೊರಡಿಸುವಂತೆ ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಸೂಚಿಸಿದರು.

ಇಲ್ಲಿನ ಮಹಾನಗರ ಪಾಲಿಕೆ ಆವರಣದಲ್ಲಿ ಶನಿವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

ಪೌರಕಾರ್ಮಿಕರಿಗೆ ವೇತನ, ಸಮವಸ್ತ್ರ, ಉಪಹಾರ ಹಾಗೂ ಇತರೆ ಯಾವುದೇ ಸೌಲಭ್ಯಗಳು ಕೊರತೆಯಾಗದಂತೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಪ್ರತಿ ತಿಂಗಳು 5ರ ಒಳಗಾಗಿ ವೇತನ ಪಾವತಿ, ಪೌರ ಕಾರ್ಮಿಕರ ಅನುದಾನ ಸರಿಯಾದ ರೀತಿಯಲ್ಲಿ ಸದ್ಬಳಕೆ, ಮೂರು ತಿಂಗಳಿಗೊಮ್ಮೆ ಪೌರಕಾರ್ಮಿಕರ ಸಮಸ್ಯೆ ಆಲಿಸುವ ಕುರಿತು ಸಭೆ ನಡೆಸಬೇಕು ಎಂದರು.

ಈ ಹಿಂದೆ 2013ರಿಂದ 2018ರ ವೇಳೆ ಅಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೂ ಸಿಎಂ ಸಿದ್ದರಾಮಯ್ಯ ಅವರೇ ವಿಶೇಷ ಕಾಳಜಿ ವಹಿಸಿ ಪೌರಕಾರ್ಮಿಕರ ನೇರನೇಮಕಾತಿಗೆ, ನೇರವೇತನ ಆದೇಶ ಹೊರಡಿಸಿದ್ದರು. ಹಂತ-ಹಂತವಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅದೇ ರೀತಿ ಇಂದು ಕೂಡ ಸಿದ್ದರಾಮಯ್ಯರವರೇ ಪೌರಕಾರ್ಮಿಕರ ನೇರನೇಮಕಾತಿ ಮಾಡಿಕೊಳ್ಳುವ ಮೂಲಕ ನಮ್ಮದು ಅಭಿವೃದ್ಧಿ ಪರ ಸರ್ಕಾರ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ಎಂದರು.

ಇಲ್ಲಿನ ಮಂಟೂರು ರಸ್ತೆಯಲ್ಲಿ ನಿರ್ಮಿಸುತ್ತಿರುವ ಆಶ್ರಯ ಬಡಾವಣೆಗಳ ಸಂಕೀರ್ಣದಲ್ಲಿ ಪೌರಕಾರ್ಮಿಕರಿಗಾಗಿಯೇ ನಿರ್ಮಿಸುತ್ತಿರುವ 320 ಮನೆಗಳ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಜನವರಿಯಲ್ಲಿ ಮುಖ್ಯಮಂತ್ರಿ ಕೈಯಿಂದ ಮನೆಗಳ ಹಸ್ತಾಂತರ ಮಾಡುವ ಉದ್ದೇಶವಿದ್ದು, ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಬ್ಬಯ್ಯ ಹೇಳಿದರು.

ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಪಾಲಿಕೆ ಜಂಟಿ ಆಯುಕ್ತ ಆನಂದ ಕಲ್ಲೋಳಕರ, ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯಕುಮಾರ, ಅಧಿಕಾರಿಗಳಾದ ಸಂತೋಷಕುಮಾರ ಹಾಗೂ ಇತರ ಅಧಿಕಾರಿಗಳು ಇದ್ದರು.