ಸಾರಾಂಶ
- ವಿಮಾ ಸಂಸ್ಥೆಗಳ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗ ತೀರ್ಪು
- - - ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಎಸ್.ಎಸ್. ರಸ್ತೆಯ ಗೋಲ್ಡನ್ ಸ್ಪೂನ್ ರೆಸ್ಟೋರೆಂಟ್ 2021ರ ಜನವರಿ 7ರಂದು ಬೆಂಕಿಗೆ ಆಹುತಿಯಾಗಿ ಅನುಭವಿಸಿದ ನಷ್ಟಕ್ಕೆ ವಿಮಾ ಸಂಸ್ಥೆಗಳಾದ ನ್ಯೂ ಇಂಡಿಯಾ ಮತ್ತು ನ್ಯಾಷನಲ್ ಇನ್ಶೂರೆನ್ಸ್ ವಿಮಾ ಸಂಸ್ಥೆಗಳಿಂದ ನಷ್ಟ ಪರಿಹಾರವಾಗಿ ಒಟ್ಟು ₹42,40,000 ವನ್ನು ವಿಮಾದಾರರಿಗೆ ಕೊಡುವಂತೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.ಎಸ್.ಎಸ್. ಲೇಔಟ್‌ನಲ್ಲಿ 2019ರಲ್ಲಿ ಪ್ರಾರಂಭ ಗೋಲ್ಡನ್ ಸ್ಪೂನ್ ರೆಸ್ಟೋರೆಂಟ್ 2021ರಲ್ಲಿ ಬೆಂಕಿಗೆ ಆಹುತಿಯಾಗಿ ಸಂಪೂರ್ಣ ಸುಟ್ಟುಹೋಗಿತ್ತು. ಈ ರೆಸ್ಟೋರೆಂಟ್ ತನ್ನ ಒಟ್ಟು ಪರಿಕರಗಳ ಮೇಲೆ ನ್ಯೂ ಇಂಡಿಯಾ ಮತ್ತು ನ್ಯಾಷನಲ್ ಇನ್ಶೂರೆನ್ಸ್ ವಿಮಾ ಸಂಸ್ಥೆಗಳಿಂದ ವಿಮೆಗೆ ಒಳಪಟ್ಟಿತ್ತು. ವಿಮಾ ಸಂಸ್ಥೆಗಳು ರೆಸ್ಟೋರೆಂಟ್ ಮಾಲೀಕರ ಅಹವಾಲಿನ ಹೊರತಾಗಿಯೂ ವಿಮಾ ಹಣ ಪಾವತಿಸಲು ನಿರಾಕರಿಸಿತ್ತು. ಆದ್ದರಿಂದ ಹೋಟೆಲ್ ಮಾಲೀಕರಾದ ಸುಮ, ಈ ಮೇಲ್ಕಾಣಿಸಿದ 2 ವಿಮಾ ಸಂಸ್ಥೆಗಳ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ಸಲ್ಲಿಸಿದರು.
ಪ್ರಕರಣದಲ್ಲಿ ಹೋಟೆಲ್‌ಗೆ ಹಣಕಾಸಿನ ನೆರವು ನೀಡಿದ್ದ ಕೆನರಾ ಬ್ಯಾಂಕ್‌ನವರನ್ನೂ ಎದುರುದಾರ ಪಕ್ಷಗಾರರನ್ನಾಗಿ ಸೇರಿಸಲಾಗಿತ್ತು. ಆಯೋಗದ ನೋಟಿಸ್‌ಗೆ ಎದುರುದಾರ ವಿಮಾ ಸಂಸ್ಥೆ ಮತ್ತು ಬ್ಯಾಂಕ್‌ಗಳು ತಮ್ಮ ವಕೀಲರ ಮುಖಾಂತರ ಹಾಜರಾಗಿ ಆಯೋಗದಲ್ಲಿ ತಕರಾರನ್ನು ಸಲ್ಲಿಸಿ, 2 ವಿಮಾ ಸಂಸ್ಥೆಗಳು ತಮ್ಮ ಪಾಲಿನ ಒಟ್ಟು ಮೊತ್ತ ₹16,000 ಮಾತ್ರ ಕೊಡಬಹುದು ಮತ್ತು ಹಣಕಾಸಿನ ನೆರವು ನೀಡಿದ ಕೆನರಾ ಬ್ಯಾಂಕಿಗೆ ಪಾವತಿಸುವುದಾಗಿ ತಕರಾರು ಸಲ್ಲಿಸಿದ್ದರು.ಪ್ರಕರಣ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಎದುರುದಾರರ ವಿಮಾ ಸಂಸ್ಥೆಯು, ದೂರುದಾರರು ಕೆನರಾ ಬ್ಯಾಂಕಿನಲ್ಲಿ ಪಡೆದ ಸಾಲಕ್ಕೆ ಭದ್ರತೆ ರೂಪದಲ್ಲಿ ವಿಮೆ ನೀಡಿರುವುದರಿಂದ ಈ ವಿಮಾ ಮೊತ್ತ ₹17,00,000 ವನ್ನು ಬ್ಯಾಂಕಿಗೆ ಜಮಾ ಮಾಡಬೇಕು ಮತ್ತು ಇನ್ನುಳಿದ ಹೋಟೆಲ್‌ನ ಆಸ್ತಿ ಮೇಲೆ ಒಟ್ಟು ₹48,20,000 ವಿಮೆ ನೀಡಿದ್ದ, 2ನೇ ಎದುರುದಾರ ನ್ಯಾಷನಲ್ ಇನ್ಸೂರೆನ್ಸ್ ವಿಮಾ ಸಂಸ್ಥೆ ದೂರುದಾರರಾದ ಹೋಟೆಲ್ ಮಾಲೀಕರಿಗೆ ಒಟ್ಟು ₹35,40,000 ವನ್ನು ಶೇ.18ರ ಬಡ್ಡಿ ದರದಂತೆ ಘಟನೆ ನಡೆದ ದಿನದಿಂದ ಕೊಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯೆ ಬಿ.ಯು.ಗೀತಾ ತೀರ್ಪು ನೀಡಿ, ಆದೇಶಿಸಿದ್ದಾರೆ.
- - - (-ಸಾಂದರ್ಭಿಕ ಚಿತ್ರ)