ಸಾರಾಂಶ
ಆನಂದ್ ಎಂ. ಸೌದಿ
ಕನ್ನಡಪ್ರಭ ವಾರ್ತೆ ಯಾದಗಿರಿಕಲಬುರಗಿ- ಯಶವಂತಪುರ ಮಧ್ಯೆ ಸಂಚರಿಸುವ, ದೇಶದ ಮಹತ್ವಾಕಾಂಕ್ಷಿ ವಂದೇ ಭಾರತ್ ಎಕ್ಸಪ್ರೆಸ್ ರೈಲು (22231/22232) ಯಾದಗಿರಿ ನಿಲ್ದಾಣದಲ್ಲಿ ಒಂದು ನಿಮಿಷ ಕಾಲ (ಬೆ.5.44 ರಿಂದ 5.45) ನಿಲ್ಲಲು ಇಲಾಖೆ ಆದೇಶಿಸಿದೆ.
ಈ ಮೂಲಕ, ಯಾದಗಿರಿಗರ ಬಹುದಿನಗಳ ಆಸೆ ಈಡೇರಿದಂತಾಗಿದೆ. ಇದಕ್ಕಾಗಿ ನಡೆದ ನಾಗರಿಕರ ಹಾಗೂ ಕನ್ನಡಪರ ಸಂಘ ಹಾಗೂ ಸಂಸ್ಥೆಗಳ ಹೋರಾಟಗಳು, ರೈಲು ನಿಲ್ಲಿಸಲೇಬೇಕು ಎಂದು ರೈಲ್ವೆ ಸಚಿವರಿಗೆ ಇಲ್ಲಿನ ಜನಪ್ರತಿನಿಧಿಗಳ ಪತ್ರಮುಖೇನ ಮನವಿಗಳಿಗೆ ಬೆಲೆ ಸಿಕ್ಕಂತಾಗಿದೆ.ಇದೇ ಮಾ.12ರಿಂದ ಈ ರೈಲಿಗೆ ಕಲಬುರಗಿ ನಿಲ್ದಾಣದಿಂದ ವರ್ಚ್ಯುವಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಆದರೆ, ಆಗ ಯಾದಗಿರಿಯಲ್ಲಿ ಈ ರೈಲು ನಿಲುಗಡೆಗೆ ಇಲಾಖೆ ಆದೇಶಿಸಿರದ ಕಾರಣ, ಇಲ್ಲಿನ ಜನತೆ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು.
ಜಿಲ್ಲಾ ಕೇಂದ್ರವಾಗಿದ್ದೂ ಅಲ್ಲದೆ, ಇಡೀ ಗುಂತಕಲ್ ರೈಲು ವಿಭಾಗದಲ್ಲಿ ಹೆಚ್ಚಿನ ಹಣ ಸಂಗ್ರಹಿಸುವ ಇಲ್ಲಿ ರೈಲು ನಿಲ್ಲದಿರುವುದು ಜನಾಕ್ರೋಶಕ್ಕೆ ಕಾರಣವಾಗಿತ್ತು.ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ಕಾವೇರಿ, ಸಂಸದರುಗಳ ಬಗ್ಗೆ ಅಪಸ್ವರಗಳು ಮೂಡಿದೊಡನೆ ಎಚ್ಚೆತ್ತ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಹಾಗೂ ಕಲಬುರಗಿ ಸಂಸದ ಡಾ. ಉಮೇಶ ಜಾಧವ ಅವರು ರೈಲ್ವೆ ಸಚಿವರಿಗೆ ಪತ್ರ ಬರೆದು, ಸಮಧಾನ ಪಡಿಸುವ ಯತ್ನ ನಡೆಸಿದರು.
ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು, ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ರೈಲು ನಿಲುಗಡೆ ಬಗ್ಗೆ ಸಂಸದರುಗಳಿಗೆ ಮನವಿ ಮಾಡಿದ್ದರು. ಶಾಸಕ ಕಂದಕೂರು, ರೈಲು ನಿಲ್ಲದ ವಿಚಾರವನ್ನು ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರೆದುರು ಪ್ರಸ್ತಾಪಿಸಿ, ರೈಲ್ವೆ ಸಚಿವ ಅಶ್ವಿನಿ ವೃಷ್ಣವ್ ಅವರಿಗೆ ಪತ್ರ ಬರೆಯುವಂತೆ ಪ್ರೇರೇಪಿಸಿದ್ದರು. ಅಮೃತ್ ಭಾರತ್ ಯೋಜನೆಯಡಿ ಯಾದಗಿರಿ ನಿಲ್ದಾಣ ಆಯ್ಕೆಯಾಗಿದ್ದ ಕಾರ್ಯಕ್ರಮ ವೇಳೆ ಇದನ್ನು ಪ್ರಸ್ತಾಪಿಸಿ, ಬೇಸರ ವ್ಯಕ್ತಪಡಿಸಿದ್ದ ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ್, ಸಂಸದರುಗಳಿಗೆ ಈ ಬಗ್ಗೆ ಮನವಿ ಮಾಡುವುದಾಗಿ ಹೇಳಿದ್ದರು.ಇನ್ನು, ಯಾದಗಿರಿ ಜಿಲ್ಲೆಯ ನಾಗರಿಕರು ಹಾಗೂ ಕನ್ನಡಪರ ಸಂಘಟನೆಗಳ ಹೋರಾಟ ಚುರುಕು ಗೊಂಡಿತ್ತು. ರೈಲು ನಿಲ್ಲಿಸದಿದ್ದರೆ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ರೈಲು ರೋಕೋ ಚಳವಳಿ ಮಾಡುವುದಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಭೀಮುನಾಯಕ ಎಚ್ಚರಿಕೆ ನೀಡುವ ಮೂಲಕ, ಹೋರಾಟಕ್ಕೆ ಕಿಚ್ಚು ಹೆಚ್ಚಿಸಿದರು. ಕರವೇ ಉತ್ತರ ಕರ್ನಾಟಕ ವಲಯ ಸಂಚಾಲಕ ಡಾ. ಶರಣು ಗದ್ದುಗೆ ಸಹ ಇದಕ್ಕೆ ದನಿಗೂಡಿಸಿದ್ದರು.
ವಂದೇ ಭಾರತ್ಗೆ ಕಲಬುರಗಿಯಲ್ಲಿ ಚಾಲನೆ ನೀಡಿದಾಗ, ಪ್ರತಿಭಟನೆಯ ವಾಸನೆ ಅರಿತ ಇಲಾಖೆ ಹಾಗೂ ಪೊಲೀಸರು ಯಾದಗಿರಿ ರೈಲು ನಿಲ್ದಾಣದಲ್ಲಿ ಖಾಕಿ ಸರ್ಪಗಾವಲು ಹಾಕಿದ್ದರು. ಮುತ್ತಿಗೆ ಯತ್ನಿಸಿದ ಕರವೇ ಮುಖಂಡ ಭೀಮುನಾಯಕ್ ಸೇರಿದಂತೆ ಅನೇಕರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆಗೊಳಿಸಿದ್ದರು.ಅದರಂತೆ, ಯಾದಗಿರಿಯಲ್ಲಿ ಭಾರತೀಯ ವೈದ್ಯಕೀಯ ಸಂಘ (ಐಎಂಎ), ಕಿರಾಣಾ ಮರ್ಚೆಂಟ್ಸ್ ಅಸೋಶಿಯೇಷನ್, ಚೇಂಬರ್ ಆಫ್ ಕಾಮರ್ಸ್, ವಕೀಲರ ಸಂಘ, ಆಟೋ ಚಾಲಕರ ಸಂಘ, ಎಂಜನೀಯರ್ಸ್ ಅಸೋಶಿಯೇಷನ್, ಟ್ಯಾಕ್ಸಿ ಚಾಲಕರ ಸಂಘ, ಜೈ ಕರ್ನಾಟಕ ಸೇರಿದಂತೆ ಮುಂತಾದ ಸಂಘ ಸಂಸ್ಥೆಗಳು ರೈಲ್ವೆ ನಿಲ್ದಾಣದ ವ್ಯವಸ್ಥಾಪಕರ ಮೂಲಕ ಸಚಿವರಿಗೆ ಪತ್ರ ಬರೆದು, ವಂದೇ ಭಾರತ್ ನಿಲುಗಡೆಗೆ ಕೋರಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ರೈಲ್ವೆ ಸಚಿವರಿಗೆ ಮನವಿಗಳ ಮಹಾಪೂರವೇ ಹರಿದು ಹೋಯಿತು. ಈ ಎಲ್ಲ ಮನವಿ, ಹೋರಾಟಗಳ ಫಲವೇ ರೈಲ್ವೆ ಇಲಾಖೆ ಯಾದಗಿರಿ ನಿಲ್ದಾಣದಲ್ಲಿ ವಂದೇ ಭಾರತ್ ನಿಲುಗಡೆಗೆ ಆದೇಶಿಸಿದೆ. ವಂದೇ ಭಾರತ್ ರೈಲು ವೇಳಾಪಟ್ಟಿ
ಯಾದಗಿರಿ: ಪ್ರತಿದಿನ ಬೆಳಿಗ್ಗೆ 5.15ಕ್ಕೆ ಕಲಬುರಗಿಯಿಂದ ಆರಂಭವಾಗುವ ವಂದೇ ಭಾರತ್ (22231) ಎಕ್ಸಪ್ರೆಸ್ ರೈಲು, 5.45ಕ್ಕೆ ವಾಡಿ ಜಂಕ್ಷನ್ ಮಾರ್ಗವಾಗಿ, ಬೆಳಿಗ್ಗೆ 5.54ಕ್ಕೆ ಯಾದಗಿರಿ ನಿಲ್ದಾಣಕ್ಕೆ ಆಗಮಿಸಲಿದೆ. ಒಂದು ನಿಮಿಷ ಕಾಲ ಇಲ್ಲಿ ನಿಲ್ಲುವ ರೈಲು ನಂತರ, 5.55ಕ್ಕೆ ತೆರಳಲಿದ್ದು, 6.53ಕ್ಕೆ ರಾಯಚೂರಿನಲ್ಲಿ (2 ನಿಮಿಷ ಕಾಲ), 7.08ಕ್ಕೆ ಮಂತ್ರಾಲಯಂ ರೋಡ್ ಜಂಕ್ಷನ್ನಲ್ಲಿ (2 ನಿಮಿಷಗಳ ಕಾಲ), 8.25ಕ್ಕೆ ಗುಂತಕಲ್ ಜಂಕ್ಷನ್ (5 ನಿಮಿಷಗಳ ಕಾಲ), ಬೆಳಿಗ್ಗೆ 9.28ಕ್ಕೆ ಅನಂತಪುರ (2 ನಿಮಿಷಗಳ ಕಾಲ), 10.50ಕ್ಕೆ ಧರ್ಮಾವರಂ ಮಾರ್ಗವಾಗಿ ಮಧ್ಯಾಹ್ನ 12.45ಕ್ಕೆ ಯಲಹಂಕ ನಿಲ್ದಾಣಕ್ಕೆ ತೆರಳಲಿದೆ. ಇಲ್ಲಿ 2 ನಿಮಿಷಗಳ ಕಾಲದ ನಂತರ, ಮಧ್ಯಾಹ್ನ 2 ಗಂಟೆಗೆ ಬೆಂಗಳೂರು ಎಸ್ಎಂವಿ ನಿಲ್ದಾಣ ತಲುಪಲಿದೆ. ಯಾದಗಿರಿಯಿಂದ ಸುಮಾರು 7 ಗಂಟೆಯ ಅವಧಿಯಲ್ಲಿ ಯಲಹಂಕಕ್ಕೆ ತೆರಳಲಿದೆ.ಅದೇ ತೆರನಾಗಿ, ಮಧ್ಯಾನ 2.40ಕ್ಕೆ ಬೆಂಗಳೂರು ನಿಲ್ದಾಣದಿಂದ ಕಲಬುರಗಿ ಕಡೆಗೆ ಹೊರಡುವ ಈ ರೈಲು (22232), ಮಧ್ಯಾಹ್ನ 3.08ಕ್ಕೆ ಯಲಹಂಕ, 5.45 ಕ್ಕೆ ಧರ್ಮಾವರಂ ಮಾರ್ಗವಾಗಿ ಸಂಜೆ 5.58ಕ್ಕೆ ಧರ್ಮಾವರಂ, ಸಂಜೆ 7 ಗಂಟೆಗೆ ಗುಂತಕಲ್, ರಾತ್ರಿ 8.15ಕ್ಕೆ ಮಂತ್ರಾಲಯಂ ರೋಡ್, 8.45ಕ್ಕೆ ರಾಯಚೂರು, ರಾತ್ರಿ 9.45ಕ್ಕೆ ಯಾದಗಿರಿ, ರಾತ್ರಿ 11.05ಕ್ಕೆ ವಾಡಿ ಮಾರ್ಗವಾಗಿ 11.30ಕ್ಕೆ ಕಲಬುರಗಿ ರೈಲು ನಿಲ್ದಾಣ ತಲುಪಲಿದೆ.