ಗಣಿ ಬಾಧಿತ ಪ್ರದೇಶಗಳಲ್ಲಿ ಅದಿರು ಸಾಗಾಣಿಕೆ ಲಾರಿ ಓಡಾಟ ಬೇಡ: ಆಪ್‌ ಮನವಿ

| Published : Mar 31 2024, 02:04 AM IST

ಸಾರಾಂಶ

ಗಣಿ ಬಾಧಿತ ಪ್ರದೇಶದಲ್ಲಿ ಅದಿರು ಸಾಗಾಣಿಕ ಲಾರಿಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಬಾರದೆಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗಗಣಿಬಾಧಿತ ಪ್ರದೇಶಗಳಲ್ಲಿ ಅದಿರು ಸಾಗಾಣಿಕೆ ಲಾರಿಗಳು ಓಡಾಡುವುದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷದ ವತಿಯಿಂದ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.

ಭೀಮಸಮುದ್ರ, ಬೊಮ್ಮನಹಳ್ಳಿ, ಕಡ್ಲೆಗುದ್ದು ಗ್ರಾಮಗಳು ಗಣಿಗಾರಿಕೆ ಪ್ರದೇಶಗಳಾಗಿದ್ದು, ಅದಿರು ಸಾಗಾಣಿಕೆ ಲಾರಿಗಳ ಓಡಾಟದಿಂದ ಇಲ್ಲಿನ ಗಾಳಿ ನೀರು ಗುಣ ಮಟ್ಟ ಇಲ್ಲದಂತಾಗಿದೆ. ಈ ಭಾಗದ ಜನರ ಆರೋಗ್ಯ ಹದಗೆಟ್ಟಿದ್ದು ಯಾರೋ ಕಂಪನಿಗಳ ಮಾಲೀಕರ ಉದ್ಧಾರಕ್ಕೆ ಜನ ಆರೋಗ್ಯ ಕೆಡಿಸಿಕೊಳ್ಳುವಂತಾಗಿದೆ ಎಂದು ಪಕ್ಷವು ದೂರಿದೆ.

ಈ ಭಾಗದಲ್ಲಿ ಬಹುತೇಕ ಹಿಂದುಳಿದವರು ಹೆಚ್ಚು ವಾಸಿಸುತ್ತಿದ್ದು, ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಗಣಿಗಾರಿಕೆಯಿಂದ ಆರೋಗ್ಯ ಹದಗೆಟ್ಟರೆ ಆಸ್ಪತ್ರೆಗಳಿಗೆ ಎಡತಾಕುವಷ್ಟು ಆರ್ಥಿಕ ಚೈತನ್ಯ ಅವರುಗಳಿಗಿಲ್ಲ. ಕಳೆದ ವರ್ಷ 01-06-2023 ರಿಂದ ಫೆಬ್ರವರಿ 2024 ತನಕ ಅದಿರು ಲಾರಿಗಳನ್ನು ನಿಷೇಧಿಸಿದ್ದು, ಗ್ರಾಮದ ನೈರ್ಮಲ್ಯ ಹಾಗೂ ಆರೋಗ್ಯ ಸುಧಾರಿಸಿತ್ತು. ಮತ್ತೆ ಅದಿರು ಸಾಗಾಣಿಕೆ ಲಾರಿಗಳಿಗೆ ಅವಕಾಶ ಕೊಟ್ಟಿರುವುದರಿಂದ ಲಾರಿಗಳ ಧೂಳು ಗ್ರಾಮಗಳ ಆವರಿಸಿತ್ತು ಜನಜೀವನ ಸಂಕಷ್ಟದಲ್ಲಿದೆ. ಮಹಿಳೆಯರಿಗೆ ಪ್ರತಿ ದಿನ ದಿನ ಧೂಳು ಸ್ವಚ್ಚ ಮಾಡುವ ಕಾಯಕವಾಗಿದೆ. ಪ್ರತಿ ಗ್ರಾಮಗಳಲ್ಲಿ ಶಾಲಾ ಕಾಲೇಜುಗಳು ಇದ್ದು ಅದಿರು ಸಾಗಾಟದಿಂದ ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಕಳೆದ 10 ತಿಂಗಳಿಂದ ಎಲ್ಲಾ ಅದಿರು ಸಾಗಾಣಿಕಾ ಮೈನಿಂಗ್ ಲೈಸೆನ್ಸ್ ಮಾಲೀಕರುಗಳು ಅದಿರನ್ನು ರೈಲ್ವೆ ಮುಖಾಂತರ ಸಾಗಿಸುತ್ತಿದ್ದಾರೆ. ಇದರಿಂದ ಗ್ರಾಮಗಳಲ್ಲಿ ಪರಿಸರ ಮಾಲಿನ್ಯವಾಗಿರಲಿಲ್ಲ.ಈಗ ಅದಿರು ಸಾಗಾಣಿಕೆಗೆ ಪರವಾನಿಗೆ ಕೊಟ್ಟಿದ್ದು ಆನಾರೋಗ್ಯ ಪೀಡಿತ ಕುಟುಂಬಗಳ ಸಂಖ್ಯೆ ಜಾಸ್ತಿಯಾಗುತ್ತಿವೆ. ರಾಜಕೀಯ ವ್ಯಕ್ತಿಗಳು ಸಾಮಾನ್ಯ ಜನರಿಗೆ ತೊಂದರೆ ಮಾಡಿಸುತ್ತಿದ್ದಾರೆ. ಕಾನೂನು ಬದ್ದ ರೀತಿಯಲ್ಲಿ ಅದಿರು ಸಾಗಾಣಿಕೆ ಮಾಡಲೆಂದೆ ರೈಲ್ವೆ ಮಾರ್ಗ ನಿರ್ಮಿಸಲಾಗಿದೆ. ಈ ಮಾರ್ಗವ ಮೂಲೆ ಗುಂಪು ಮಾಡಿ ರಸ್ತೆ ಮಾರ್ಗದಲ್ಲಿ ಲಾರಿಗಳನ್ನು ಚಲಾಯಿಸಲು ಗ್ರಾಮಪಂಚಾಯಿತಿ ಜೊತೆಗೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತಿರುವುದು ಸರಿಯಲ್ಲ. ರಾಜಕೀಯ ವ್ಯಕ್ತಿಗಳು ಗ್ರಾಮಸ್ಥರೊಂದಿಗೆ ಸಭೆ ನಡೆಸದೆ ಜನರಿಗೆ ತೊಂದರೆ ಮಾಡುತ್ತಿದ್ದಾರೆ. ಅದಿರು ಸಾಗಾಣಿಕೆಯ ಈ ಗಣಿ ಬಾದಿತ ಪ್ರದೇಶಗಳಲ್ಲಿ ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು.ಸಾರ್ವಜನಿಕ ಹಿತಸಾಕ್ತಿ ಕಾಪಾಡುವ ಸಲುವಾಗಿ ಸ್ಥಳ ತನಿಖೆ ನಡೆಸಬೇಕು. ವರದಿ ತರಿಸಿಕೊಂಡು ಜನಾರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗೆ ಸಲ್ಲಿಸಲಾದ ವರದಿಯಲ್ಲಿಆಗ್ರಹಿಸಲಾಗಿದೆ.ಆಮ್ ಆದ್ಮಿ ಪಾರ್ಟಿಯ ಜಿಲಾಧ್ಯಕ್ಷ ಜಗದೀಶ್, ರಾಮಣ್ಣ, ರವಿ, ಲೋಕೇಶ್, ಹುಲ್ಲೂರು ರಾಜಣ್ಣ, ಲೋಹಿತ್ ಉಪಸ್ಥಿತರಿದ್ದರು.