ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲಶಿವಮೊಗ್ಗ ಜಿಲ್ಲೆಯ ಲಲಿತಮ್ಮ (44) ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಅವರ ಮನೆಯವರು ಅವರ ಅಂಗಾಂಗಳನ್ನು ದಾನ ಮಾಡಿ ಉದಾರ ಮಾನವೀಯತೆಯನ್ನು ಮೆರಿದ್ದಾರೆ.
ಅಪಘಾತಕ್ಕೊಳಗಾಗಿದ್ದ ಅವರಿಗೆ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ವೈದ್ಯರ ಸಂಪೂರ್ಣ ಪ್ರಯತ್ನದ ನಂತರವೂ ಅವರು ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳು ಕಂಡು ಬರಲಿಲ್ಲ. ಅವರ ಕುಟುಂಬ ಸದಸ್ಯರು ಇತರ ರೋಗಿಗಳ ಜೀವ ಉಳಿಸಲು ಸಾಧ್ಯವಾಗುವುದಾದರೇ ಅಂಗಗಳನ್ನು ದಾನ ಮಾಡವ ಇಚ್ಛೆಯನ್ನು ವ್ಯಕ್ತಪಡಿಸಿದರು.ಮಾನವ ಅಂಗಾಂಗ ಕಸಿ ಕಾಯ್ದೆ 1994 ರ ಅನುಸಾರ ಲಲಿತಮ್ಮ ಅವರನ್ನು ಎರಡು ಬಾರಿ ಪರಿಶೀಲಿಸಿ, ಅಧಿಕೃತವಾಗಿ ಪರಿಣಿತ ವೈದ್ಯರ ತಂಡವು ಅವರ ಮೆದುಳು ನಿಷ್ಕ್ರೀಯಗೊಂಡಿದೆ ಎಂದು ಘೋಷಿಸಿದರು.ನಂತರ ಜೀವಸಾರ್ಥಕತೆ ಕಾನೂನು ಶಿಷ್ಟಾಚಾರಗಳನ್ನು ಪೂರೈಸಿ ಅವರ ಅಂಗಾಂಗಳನ್ನು ಪಡೆಯಲಾಯಿತು. ಹೀಗೆ ದಾನ ಮಾಡಿದ ಶ್ವಾಸಕೋಶಗಳನ್ನು ಕಿಮ್ಸ್ ಆಸ್ಪತ್ರೆ ಹೈದರಾಬಾದ್ , ಯಕೃತ್ ಅನ್ನು ಸ್ಪರ್ಶ ಆಸ್ಪತ್ರೆ ಬೆಂಗಳೂರು ಮತ್ತು ಒಂದು ಮೂತ್ರಪಿಂಡ ಯುನಿಟಿ ಆಸ್ಪತ್ರೆ ಮಂಗಳೂರಿಗೆ ಕಳುಹಿಸಲಾಯಿತು. ಒಂದು ಮೂತ್ರಪಿಂಡ ಮತ್ತು ಎರಡು ಕಾರ್ನಿಯಾಗಳನ್ನು ಮಣಿಪಾಲದಲ್ಲಿನ ನೋಂದಾಯಿತ ರೋಗಿಗಳಿಗೆ ಬಳಸಲಾಯಿತು.ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ‘ಜೀವ ಉಳಿಸುವ ನಿಟ್ಟಿನಲ್ಲಿ ಅಂಗದಾನ ಶ್ರೇಷ್ಟವಾದ ಕೆಲಸವಾಗಿದ್ದು, ಲಲಿತಮ್ಮ ಮನೆಯವರು ಮಹತ್ಕಾರ್ಯವನ್ನು ನಡೆಸಿದ್ದಾರೆ. ಅತ್ಯಂತ ಶ್ರೇಷ್ಠವಾದ ಇಂತಹ ಉತ್ತಮ ಕಾರ್ಯಗಳಿಗೆ ಜನರು ಮುಂದೆ ಬಂದು ಪ್ರೋತ್ಸಾಹಿಸಬೇಕು, ಬೇರೆ ರೋಗಿಗಳ ಉಳಿಸಬೇಕು’ ಎಂದು ಅಂಗ ದಾನ ಮಾಡಲು ನಿರ್ಧರಿಸಿದ ಲಲಿತಮ್ಮ ಕುಟುಂಬಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.