ಸಾವಯವ ಕೃಷಿ ಪ್ರಾತ್ಯಕ್ಷಿಕೆ, ಮಾಹಿತಿ ನೀಡುವ ಕಾರ್ಯಾಗಾರ

| Published : Feb 10 2025, 01:47 AM IST

ಸಾರಾಂಶ

ಉಪ್ಪಿನಂಗಡಿ ಸರ್ಕಾರಿ ಮಾದರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಇಕೋ ಕ್ಲಬ್ ನ ವಿದ್ಯಾರ್ಥಿಗಳಿಗೆ ಬಳ್ಳಿ ಆಯುರ್ ಗ್ರಾಮದಲ್ಲಿ ಗಿಡಮೂಲಿಕೆ ಸಸ್ಯಗಳು ಹಾಗೂ ಸಾವಯವ ಕೃಷಿಯ ತರಕಾರಿಗಳ ವಿಷಯದ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ನೀಡುವ ಕಾರ್ಯಾಗಾರ ನಡೆಯಿತು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಇಲ್ಲಿನ ಸರ್ಕಾರಿ ಮಾದರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಇಕೋ ಕ್ಲಬ್ ನ ವಿದ್ಯಾರ್ಥಿಗಳಿಗೆ ಬಳ್ಳಿ ಆಯುರ್ ಗ್ರಾಮದಲ್ಲಿ ಗಿಡಮೂಲಿಕೆ ಸಸ್ಯಗಳು ಹಾಗೂ ಸಾವಯವ ಕೃಷಿಯ ತರಕಾರಿಗಳ ವಿಷಯದ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ನೀಡುವ ಕಾರ್ಯಾಗಾರ ನಡೆಯಿತು.

ಬಳ್ಳಿ ಆಯುರ್ ಗ್ರಾಮದ ಮಾಲಕ, ವೈದ್ಯ ಡಾ. ಸುಪ್ರೀತ್ ಲೋಬೋ ಔಷಧೀಯ ಗಿಡಮರಗಳ ಹಾಗೂ ಸಾವಯಕ ಕೃಷಿಯ ಬಗೆಗಿನ ಮಾಹಿತಿ ನೀಡಿದರು. ಔಷಧಿ ಗಿಡವಾದ ವಿವಿಧ ತಳಿಗಳ ಮಂದಾರ ಹೂವಿನ ಸಸ್ಯಗಳು, ನಿರ್ಗಳ, ರೆಂಜ, ಬೀಟ್, ಪತರಂಗ, ರಕ್ತ ಚಂದನ, ಗಂಧ ,ತ್ರಿ ಫಲ, ವಿಭೀತಕೆ, ಸೊರಗೆ 12 ಬಗೆಯ ಬಿಲ್ವ ಪತ್ರದ ಗಿಡಗಳು, ಅಶ್ವಥ, ನೆಲ್ಲಿ, ಕುದುಕಬಚಿರೆ, ಅಧಾರಿ, ಮಂತ್ರೋಲಿ, ಕಾಂತಲಿ, ರುದ್ರಾಕ್ಷ ಮರ, ರಾಮನ ಪತ್ರೆ, ಪರಸ, ನಾಗಸಂಪಿಗೆ, ಕುಕ್ಕುಂಡ ಮರ, ಸಪ್ತಪುರಾದ ಮರ, ಸೋಂಕುಮರ, ಮಾಂಫಲಮರ, ಕೊಟ್ಟೆ ಮುಳ್ಳು, ಮಕರಟೆ ಮುಳ್ಳು, ಹತ್ತಿ , ವಿವಿಧ ರುಚಿಯ ಪುನರ್ಪುಳಿ ಮಾದರಿಯ ಹಣ್ಣುಗಳ ಬಗ್ಗೆ ಮಾಹಿತಿ ಅವುಗಳ ಪ್ರಯೋಜನವನ್ನು ತಿಳಿಸಲಾಯಿತು. ಹಲವಾರು ಭಾರತೀಯ ತಳಿಗಳ ದನ ಕರುಗಳನ್ನು ವೀಕ್ಷಣೆ, ಜೇನು ಸಾಕಣೆಯ ವೈವಿಧ್ಯತೆಯ ಬಗ್ಗೆ ಅರಿವು , ತುಳಸಿ ಗಿಡದಲ್ಲಿ ಒಂದು ಚಟುವಟಿಕೆ ನಡೆಸಲಾಯಿತು.

ಸಾವಯವ ತರಕಾರಿಗಳ ಗಿಡಗಳನ್ನು ಬೆಳೆಸುವ ರೀತಿ, ಸಾವಯವ ಕೃಷಿಯ ಉತ್ಪನ್ನದಿಂದ ಆಗುವ ದೈಹಿಕ ಲಾಭಗಳು, ರಾಸಾಯನಿಕ ಸಿಂಪಡಿಸಿದ ತರಕಾರಿಗಳ ಸೇವನೆಯಿಂದ ಆಗಬಹುದಾದ ಅನಾಹುತಗಳು ಮುಂತಾದ ಮಾಹಿತಿಗಳನ್ನು ನೀಡಲಾಯಿತು.

ಹೂಕೋಸು, ಹರಿವೆ, ಪಾಲಕ್ ಸೊಪ್ಪು, ತೊಂಡೆ, ಬೆಂಡೆ, ಬಸಳೆ, ನೆಲಬಸಳೆ, ಬೀನ್ಸ್ ಹೀಗೆ ಹತ್ತು ಹಲವು ಬಗೆಯ ತರಕಾರಿಯ ಕೃಷಿ, ವಿವಿಧ ತೆರನಾದ ಹಣ್ಣು ಹಂಪಲುಗಳ ಕೃಷಿ ಪರಿಚಯಿಸಿ ಅವುಗಳ ಔಷಧಿಯ ಗುಣಗಳ ಬಗ್ಗೆ ವಿವರಿಸಲಾಯಿತು.