ಕಲಬುರಗಿ: ಇಂದಿನಿಂದ ಸಾವಯವ ಕೃಷಿ ಜಾತ್ರೆ

| Published : Jul 27 2024, 12:49 AM IST

ಕಲಬುರಗಿ: ಇಂದಿನಿಂದ ಸಾವಯವ ಕೃಷಿ ಜಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಎಪಿಎಂಸಿಯಲ್ಲಿ ಭರದ ಸಿದ್ಧತೆ ನಡೆದಿದ್ದು, ಕೆಕೆಸಿಸಿಐ ನೇತೃತ್ವದಲ್ಲಿ 3 ದಿನ ಜಾತ್ರೆ ನಡೆಯಲಿದೆ. ಸುಮಾರು 1 ಲಕ್ಷಕ್ಕೂ ಹೆಚ್ಚು ರೈತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸಂಜೆ 5 ಗಂಟೆಗೆ ಕೃಷಿಯಲ್ಲಿ ವಿನೂತನ ಆವಿಷ್ಕಾರ ಮಾಡಿದ ರೈತರಿಗೆ ಪ್ರಶಸ್ತಿ ವಿತರಣೆ ಹಾಗೂ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಜಾತ್ರೆಯಲ್ಲಿ ಸಾಕು ನಾಯಿ, ಬೆಕ್ಕು, ಕುದುರೆ ಹಾಗೂ ಜಾನುವಾರುಗಳ ಪ್ರದರ್ಶನ ಏರ್ಪಡಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ವಿಪರೀತವಾಗಿ ರಸಾಯನಿಕಗಳನ್ನು ಬಳಸುತ್ತಿರುವ ಜಿಲ್ಲೆಗಳಲ್ಲಿ ಪ್ರಮುಖವಾಗಿರುವ ಕಲಬುರಗಿ ಕೃಷಿ ರಂಗದಲ್ಲಿ ಸಾವಯವ ಪದ್ಧತಿಯನ್ನು ರೈತರಿಗೆ ತಿಳಿ ಹೇಳಲು ಇಲ್ಲಿನ ಕಲ್ಯಾಣ ಕರ್ನಾಟಕ ಕೈಗಾರಿಕಾ ಹಾಗೂ ವಾಣಿಜ್ಯೋದ್ಯಮ ಸಂಸ್ಥೆ ಮುಂದಾಗಿದೆ.

ಸಂಸ್ಥೆಯ ಈ ಚಿಂತನೆಯ ಫಳವಾಗಿಯೇ ತೊಗರಿ ಕಣಜ ಕಲಬುರಗಿ ಮೂರು ದಿನಗಳ ಕೃಷಿ ಜಾತ್ರೆಗೆ ಸಜ್ಜಾಗಿದೆ. ಶನಿವಾರದಿಂದ ಜು.29 ರ ಸೋಮವಾರದವರೆಗೆ ಜಾತ್ರೆಯು ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯ ಅಂಗಳದಲ್ಲಿ ನಡೆಯುತ್ತಿದೆ.

ಈ ಭಾಗದ ಉದ್ಯಮಗಳ ಯೋಗಕ್ಷೇಮದ ಸಂಸ್ಥೆಯಾಗಿರುವ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಂಸ್ಥೆ ಕೆಕೆಸಿಸಿಐ ಇದೇ ಮೊದಲ ಬಾರಿಗೆ ಕೃಷಿ ಹೈಗೂ ರೈತರ ಸಂಬಂಧಿ ವಿಷಯ ಹಿಡಿದುಕೊಂಡು ಇಂತಹ ಕೃಷಿ ಜಾತ್ರೆಗೆ ಮುಂದಾಗಿರೋದು ರೈತರ ಸಂತಸಕ್ಕೆ ಕಾರಣವಾಗಿದೆ.

ಕೃಷಿ ಕ್ಷೇತ್ರದಲ್ಲಿ ರೈತರಿಗೆ ಸುಸ್ಥಿರ ಮತ್ತು ಸಾವಯವ ಕೃಷಿಯ ಕುರಿತು ಅರಿವು ಮೂಡಿಸುವುದೇ ಜಾತ್ರೆಯ ಉದ್ದೇಶವೆಂದು ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಶಶಿಕಾಂತ ಪಾಟೀಲ್‌, ಕಾರ್ಯದರ್ಶಿ ಮಂಜುನಾಥ ಜೇವರ್ಗಿ ಹೇಳುತ್ತಾರೆ.

“ರೈತರ ನಡೆ, ಸಾವಯವ ಕೃಷಿ ಕಡೆ” ಎನ್ನುವ ಘೋಷವಾಕ್ಯದಡಿ ಈ ಮೂರು ದಿನಗಳ ಕೃಷಿ ಜಾತ್ರೆಯನ್ನು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ರಾಯಚೂರು, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್‌, ಶರಣಬಸವೇಶ್ವರ ವಿಶ್ವವಿದ್ಯಾಲಯ, ಕೇಂದ್ರೀಯ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ ಕಲಬುರಗಿ, ಕೃಷಿ ಇಲಾಖೆ, ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ, ಪಶುಸಂಗೋಪನೆ ಇಲಾಖೆ, ರೇಷ್ಮೆ ಇಲಾಖೆ, ಮೀನುಗಾರಿಕೆ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಆಹಾರ ಧಾನ್ಯ ಮತ್ತು ಬೀಜ ವರ್ತಕರ ಸಂಘ, ದಾಲ್ ಮಿಲ್ಲರ್‌ ಅಸೋಸಿಯೇಷನ್, ಅಕ್ಕಿ ವ್ಯಾಪಾರಸ್ಥರ ಸಂಘ, ಕೃಷಿ ಪರಿಕರ ಮಾರಾಟಗಾರರ ಸಂಘ, ವಿಕಾಸ ಆಕಾಡೆಮಿ ಸಹಯೋಗದಲ್ಲಿ ಸಾವಯವ ಕೃಷಿ ಜಾತ್ರೆ ಆಯೋಜಿಸಲಾಗಿದೆ.ಸಾವಯವ ಕೃಷಿ ಜಾತ್ರೆಯ ಉದ್ದೇಶಗಳು

1) ಕಲಬುರಗಿ ಸರಿದಂತೆ ಕಲ್ಯಾಣದ ರೈತರಲ್ಲಿ ಸಾವಯವ ಕೃಷಿ ಬಗ್ಗೆ ಆಸಕ್ತಿ ಹೆಚ್ಚಿಸುವುದು

2) ರೈತರನ್ನು ಬೇಸಾಯಕ್ಕೆ, ಮರಳಿ ಹೊಲಕ್ಕೆ ಬನ್ನಿರೆಂದು ಪ್ರೋತ್ಸಾಹಿಸಿ, ಆಹ್ವಾನ ನೀಡೋದು

3) ಸುಸ್ಥಿರ ಕೃಷಿ, ಕೃಷಿಯಲ್ಲಿ ಆವಿಷ್ಕಾರ, ತೋಟಗಾರಿಕೆ, ಹೈನುಗಾರಿಕೆ, ಪಶು ಸಂಗೋಪನೆಗೆ ಸೆಳೆಯುವುದು

4) ಜೇನು ಸಾಕಣಿಕೆ, ರೇಷ್ಮೆಕೃಷಿ, ಮಾರುಕಟ್ಟೆ, ಬೆಳೆ ಮೌಲ್ಯವರ್ಧನೆ, ಔಷಧಿ, ಪರಿಮಳ ದ್ರವ್ಯ ಸಸ್ಯಗಳ ಪರಿಚಯ ಮಾಡುವುದಾಗಿದೆ.ಕನ್ಹೇರಿ ಮಠದ ಗುರುಗಳಿಂದ ಚಾಲನೆ: ಶನಿವಾರ ಬೆಳಗ್ಗೆ 10 ಗಂಟೆಗೆ ಸಾವಯವ ಕೃಷಿಯಲ್ಲಿ ಕ್ರಾಂತಿ ಮಾಡಿರುವ ಕನ್ಹೇರಿಯ ಸಿದ್ಧಗಿರಿ ಮಹಾಸಂಸ್ಥಾನ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಜಾತ್ರೆಗೆ ಚಾಲನೆ ನೀಡಿ ರೈತರನ್ನುದ್ದೇಶಿಸಿ ಹಿತವಚನ ನೀಡಲಿದ್ದಾರೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್.ಅಪ್ಪ, ಮುತ್ಯಾನ ಬಬಲಾದ ಮಠದ ಗುರುಪಾದಲಿಂಗ ಮಹಾಶಿವಯೋಗಿಗಳು, ಬೆಳಗುಂಪಾದ ಅಭಿನವ ಪರುತೇಶ್ವರ ಶಿವಾಚಾರ್ಯರು ಸಮಾರಂಭದ ಸಾನ್ನಿಧ್ಯ ವಹಿಸುವರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಕೃಷಿ ಸಚಿವ ಎನ್. ಚೆಲುವರಾಯ ಸ್ವಾಮಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಸಚಿವ ಶರಣಬಸಪ್ಪ ದರ್ಶನಾಪೂರ, ಸಚಿವ ಈಶ್ವರ ಖಂಡ್ರೆ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ್, ಸಂಸದರು, ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಕೃಷಿ ಜಾತ್ರೆಯಲ್ಲಿವೆ ಗೋಷ್ಠಿಗಳು, ನಾಟಕ ಪ್ರದರ್ಶನ: ಶನಿವಾರ ಮಧ್ಯಾಹ್ನ 1 ರಿಂದ 4ರ ವರೆಗೆ ಜೇನು ಸಾಕಣಿಕೆ ಕುರಿತು ಶಿರಸಿಯ ಮಧುಕೇಶ್ವರ ಹೆಗಡೆ, ಸಮಗ್ರ ಕೃಷಿ ಪದ್ಧತಿಯ ಕುರಿತು ಕಾಶಿಲಿಂಗಯ್ಯ ವೀರಯ್ಯ, ಹೊಲದಲ್ಲಿಯೇ ಸಾವಯವ ಗೊಬ್ಬರ ತಯಾರಿಕೆ ಕುರಿತು ದೀಪಕ್ ಸೋಮಯ್ಯಜೀ ವಿಶೇಷ ಉಪನ್ಯಾಸ ಹಾಗೂ ರೈತರಿಗೆ ಉಪಯುಕ್ತ ಮಾಹಿತಿ ನೀಡುವರು.

ಎಪಿಎಮ್‌ಸಿ ಆವರಣದಲ್ಲಿ ಸುಮಾರು 170 ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ವೀಕ್ಷಿಸಲು ಅವಕಾಶ ಒದಗಿಸಲಾಗಿದೆ. ಸಂಜೆ 5 ಗಂಟೆಗೆ ಖ್ಯಾತ ಹಾಸ್ಯ ಕಲಾವಿದರಾದ ಬಸವರಾಜ ಮಹಾಮನಿ ಮತ್ತು ಗುಂಡಣ್ಣ ಡಿಗ್ಗಿಯವರಿಂದ ಹಾಸ್ಯ ಚಟಾಕಿ ಕಾರ್ಯಕ್ರಮ, ಕೃಷಿ ವಿಜ್ಞಾನ ಕೇಂದ್ರ ಕಲಬುರಗಿ ವಿದ್ಯಾರ್ಥಿಗಳಿಂದ ಸಾಲದ ಹೊರೆ ನಾಟಕ ಪ್ರದರ್ಶನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಶನಿವಾರ ಬೆಳಗ್ಗೆ 10 ಗಂಟೆಗೆ ಔಷಧಿ ಮತ್ತು ಸುಂಗಂಧ ಸಸ್ಯಗಳ ಕುರಿತು ಚರ್ಚೆಗೋಷ್ಠಿಯ ಸಾನ್ನಿಧ್ಯವನ್ನು ನಂದಿವೇರಿ ಮಠ, ಕಪ್ಪತಗುಡ್ಡ, ಡೋಣಿ ಗದಗದ ಶಿವಕುಮಾರ ಸ್ವಾಮೀಜಿ ವಹಿಸಲಿದ್ದಾರೆ. ಚಿನಮಗೇರಿಯ ಸಿದ್ಧರಾಮ ಶಿವಾಚಾರ್ಯರು ಉಪಸ್ಥಿತರಿರುವರು. ಮಧ್ಯಾಹ್ನ 12 ರಿಂದ 3ರ ವರೆಗೆ ಸಾವಯವ ಕೃಷಿಯಲ್ಲಿ ಯಂತ್ರಗಳ ಮಹತ್ವದ ಕುರಿತು ಡಾ. ಸಿ. ನಾಗರಾಜ್, ಸಾವಯವ ಕೃಷಿಯಲ್ಲಿ ತ್ಯಾಜ್ಯ ನಿರ್ವಹಣೆ ಕುರಿತು ಬಾಲಚಂದ್ರ ಜಾಬಶೆಟ್ಟಿ, ಬಾಳೇ ಕಾಂಡದಿಂದ ಬಟ್ಟೆ ತಯಾರಿಕೆ ಕುರಿತು ದೇವರಾಜ ನಾಯಕ ಹಾಗೂ ಕೋಳಿ ಸಾಕಾಣಿಕೆ ಕುರಿತು ನಿತಿನ್ ರಂಗದಾಳ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಸಂಜೆ 5 ಗಂಟೆಗೆ ಕೃಷಿಯಲ್ಲಿ ವಿನೂತನ ಆವಿಷ್ಕಾರ ಮಾಡಿದ ರೈತರಿಗೆ ಪ್ರಶಸ್ತಿ ವಿತರಣೆ ಹಾಗೂ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಜಾತ್ರೆಯಲ್ಲಿ ಸಾಕು ನಾಯಿ, ಬೆಕ್ಕು, ಕುದುರೆ ಹಾಗೂ ಜಾನುವಾರುಗಳ ಪ್ರದರ್ಶನ ಏರ್ಪಡಿಸಲಾಗಿದೆ.