ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ನಗರದ ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜ.10ರಂದು 7ನೇ ವರ್ಷದ ವೈಕುಂಠ ಏಕಾದಶಿ ಆಚರಣೆ ನಡೆಯಲಿದೆ. ಈ ಬಾರಿಯ ವಿಶೇಷವಾಗಿ ಸಾವಯವ ಕೃಷಿಯನ್ನು ಉತ್ತೇಜಿಸುವ ಉದ್ದೇಶದಿಂದ 10 ಸಾವಿರ ಮನೆಗಳಿಗೆ ಸಾವಯವ ಪದ್ಧತಿಯಲ್ಲಿ ಬೆಳೆದ ತರಕಾರಿ ಸೊಪ್ಪಿನ ಗಿಡಗಳನ್ನು ಪ್ರಸಾದ ರೂಪದಲ್ಲಿ ನೀಡಲು ದೇವಾಲಯದ ಆಡಳಿತ ಸಮಿತಿ ತೀರ್ಮಾನಿಸಿದೆ.ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಈ ಬಾರಿ ದೇವಳವನ್ನು ವಿಶೇಷವಾಗಿ ಸಾವಯವ ವಿವಿಧ ಸೊಪ್ಪುಗಳ (ಪ್ರಧಾನವಾಗಿ ಪಾಲಕ್) ಸಸಿಗಳಿಂದ ಅಲಂಕರಿಸಲಾಗುತ್ತಿದೆ. ಹರಿವೆ, ಪಾಲಕ್, ಬೆಂಡೆ, ಕೆಂಪು ತುಳಸಿ ಸಹಿತ ವಿವಿಧ ಸಸಿಗಳನ್ನು ನೈಸರ್ಗಿಕವಾಗಿ ಬೆಳೆಸಿ ಅಲಂಕಾರಕ್ಕೆ ಬಳಕೆ ಮಾಡಲಾಗಿದೆ. ಆಗಮಿಸುವ ಭಕ್ತರಿಗೆ ಸಸಿಗಳನ್ನು ಪ್ರಸಾದ ರೂಪದಲ್ಲಿ ನೀಡಲಾಗುವುದು. ಸೂರಜ್ ರಾವ್ ಅವರ ನೇತೃತ್ವದಲ್ಲಿ ಈ ಸಸಿಗಳನ್ನು ಸಿದ್ದಪಡಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ದೇವಾಲಯದ ಗಣೇಶ್ ಪ್ರವೀಣ್ ನಾಗ್ವೇಕರ್, ಪಾಲಕ್, ಹರಿವೆ, ಬೀನ್ಸ್, ಅಲಸಂಡೆ, ಬೆಂಡೆ ಸಹಿತ ಒಟ್ಟು 10 ಸಾವಿರ ಗಿಡಗಳನ್ನು ಸಿದ್ಧಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.ಕಾರ್ಯಕ್ರಮದ ವಿವರ ನೀಡಿದ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಬಿ. ಪ್ರವೀಣ್ ಶೇಟ್ ನಾಗ್ವೇಕರ್, ಜ.10ರಂದು ಶ್ರೀ ದೇವರ ಸಾನಿಧ್ಯದಲ್ಲಿ ಚೈತನ್ಯಾಭಿವೃದ್ಧಿ ಹಾಗೂ ಲೋಕ ಕಲ್ಯಾಣ ಪ್ರಾಪ್ತಿಯ ಸಂಕಲ್ಪದೊಂದಿಗೆ ನಾಮತ್ರಯ ಮಹಾಮಂತ್ರ ಜಪಯಜ್ಞ, ಪುಷ್ಪಯಾಗ ಮತ್ತು ಅಷ್ಟಾವಧಾನ ಸೇವೆ ನೆರವೇರಲಿದೆ ಎಂದರು.ಬೆಳಗ್ಗೆ 5.30ಕ್ಕೆ ಸುಪ್ರಭಾತ ಸೇವೆ, 6ಕ್ಕೆ ಸಾಮೂಹಿಕ ಪ್ರಾರ್ಥನೆ, ಅಷ್ಟಾಕ್ಷರೀ ಮಂತ್ರ ಜಪ, ಪ್ರಾತಃಪೂಜೆ, 7ರಿಂದ 8ರವರೆಗೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, 8ರಿಂದ 10ರವರೆಗೆ ನಾಮತ್ರಯ ಮಹಾಮಂತ್ರ ಜಪಯಜ್ಞ, ಮಧ್ಯಾಹ್ನ 12ಕ್ಕೆ ಮಹಾಪೂಜೆ, 1ರಿಂದ 3ರವರೆಗೆ ಭಜನಾ ಕಾರ್ಯಕ್ರಮ, 3ರಿಂದ 4ರವರೆಗೆ ವೈದಿಕರಿಂದ ವೇದ ಪಾರಾಯಣ, ಡೊಂಗರಕೇರಿ ಕಟ್ಟೆಯಿಂದ ಪುಷ್ಪಯಾಗದ ಹೂವಿನ ವಿಶೇಷ ಮೆರವಣಿಗೆ, ಸಂಜೆ 4.30ರಿಂದ ಪುಷ್ಪಯಾಗ ಆರಂಭ, ಅಷ್ಟಾವಧಾನ ಸೇವೆ, ರಾತ್ರಿ 9ಕ್ಕೆ ದೀಪಾರಾಧನೆ, ಮಹಾಪೂಜೆ, 10 ಗಂಟೆಗೆ ವಿಠೋಬ ದೇವರ ಸನ್ನಿಧಿಯಲ್ಲಿ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ ಎಂದರು.ದೇವಳದ ಟ್ರಸ್ಟಿಗಳಾದ ಬಿ.ಸಾಯಿದತ್ ನಾಯಕ್, ವಿನಾಯಕ ಶೇಟ್ ಇದ್ದರು.