ಸಮಾಜದ ಅಭಿವೃದ್ಧಿಗೆ ಸಂಘಟನೆ ಮತ್ತು ಸಮರ್ಥ ಮುಂದಾಳತ್ವ ಅತ್ಯವಶ್ಯ. ಸಮಾಜವನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಶ್ರಮಿಸಬೇಕು.
ಹೂಗಾರ ಮಾದಯ್ಯ ಜಯಂತಿ, ಪ್ರತಿಭಾ ಪುರಸ್ಕಾರ ಸಮಾರಂಭ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಸಮಾಜದ ಅಭಿವೃದ್ಧಿಗೆ ಸಂಘಟನೆ ಮತ್ತು ಸಮರ್ಥ ಮುಂದಾಳತ್ವ ಅತ್ಯವಶ್ಯ. ಸಮಾಜವನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ನಗರದ ಅಕ್ಕಿಹೊಂಡ ಹನ್ನೆರಡು ಮಠದಲ್ಲಿ ಭಾನುವಾರ ಹೂಗಾರ ಸಮಾಜದ ತಾಲೂಕು ಘಟಕದಿಂದ ಆಯೋಜಿಸಿದ್ದ ಕುಲಗುರು ಹೂಗಾರ ಮಾದಯ್ಯ ಜಯಂತಿ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.ಅತ್ಯಂತ ಚಿಕ್ಕ ಸಮಾಜವಾಗಿರುವ ಹೂಗಾರ ಸಮುದಾಯದ ಶ್ರೇಯೋಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಸಮಾಜಕ್ಕೆ ಏನು ಬೇಕು ಎನ್ನುವುದರ ಜತೆಗೆ ಸಮಾಜಕ್ಕೆ ನಮ್ಮಿಂದ ಏನು ಕೊಡುಗೆ ನೀಡಲು ಸಾಧ್ಯ ಎಂಬುದನ್ನು ಅರಿತು ಮುನ್ನಡೆಯಬೇಕು. ಸಮಾಜದಲ್ಲಿ ಗಂಡು ಮತ್ತು ಹೆಣ್ಣು ಎಂಬ ಎರಡು ವರ್ಗಗಳಷ್ಟೇ ಇರುವಾಗ ಜಾತಿ ಹೆಸರಿನಲ್ಲಿ ವಿಷಬೀಜ ಬಿತ್ತುವುದು ಸರಿಯಲ್ಲ. ಇಂತಹ ಭೇದಭಾವಗಳನ್ನು ಮೆಟ್ಟಿ ನಿಂತು ಸಮಾಜದ ಪ್ರಗತಿಗೆ ಶ್ರಮಿಸಬೇಕು ಎಂದರು.
ಸಮಾಜದ ಅಭಿವೃದ್ಧಿಗೆ ಸರ್ಕಾರದಿಂದ ಹಾಗೂ ವೈಯಕ್ತಿಕವಾಗಿ ಎಲ್ಲ ರೀತಿಯ ನೆರವು ನೀಡಲಾಗುವುದು. ಹೂಗಾರ ಸಮಾಜದವರಿಗೆ 2ಎ ಪ್ರಮಾಣಪತ್ರ ಪಡೆಯುವಲ್ಲಿ ಎದುರಾಗುತ್ತಿರುವ ತೊಂದರೆಗಳ ಕುರಿತು ಮುಖಂಡರು ಗಮನ ಸೆಳೆದಿದ್ದು, ಈ ಕುರಿತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಸಮಾಜದ ಭವನ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ₹1 ಲಕ್ಷ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರು.ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಕುಲಗುರುಗಳನ್ನು ಸ್ಮರಿಸುವುದರ ಜತೆಗೆ ಸಮಾಜದ ಸಾಧಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸುತ್ತಿರುವುದು ಶ್ಲಾಘನೀಯ. ಹೂಗಾರ ಸಮಾಜದವರು ಇಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದು, ಪತ್ರಿಕೋದ್ಯಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಹೆಮ್ಮೆಯ ಸಂಗತಿ. ಸಮಾಜದವರು ಎಲ್ಲ ಕ್ಷೇತ್ರಗಳಲ್ಲೂ ಗುರುತಿಸಿಕೊಳ್ಳುವಂತಾಗಬೇಕು. ಸಮಾಜದ ಏಳಿಗೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಸಮಾಜದ ಮುಖಂಡ ಸುರೇಶ ಹೂಗಾರ, ಮಹಿಳಾ ಮುಖಂಡರಾದ ಸರೋಜಾ ಹೂಗಾರ ಮಾತನಾಡಿದರು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು, ಸಮಾಜದ ಕಲಾವಿದರು ಮತ್ತು ಹಿರಿಯ ಮಹಿಳೆಯರನ್ನು ಸನ್ಮಾನಿಸಲಾಯಿತು.ತಾಲೂಕು ಘಟಕದ ಅಧ್ಯಕ್ಷ ಸೋಮಲಿಂಗಪ್ಪ ಹೂಗಾರ ಅಧ್ಯಕ್ಷತೆ ವಹಿಸಿದ್ದರು. ಕಲ್ಮೇಶ ಹೂಗಾರ, ನಾಗರತ್ನಾ ಹೂಗಾರ, ಹನುಮಂತಪ್ಪ ಹೂಗಾರ, ಎಂ.ಎಂ. ಹೂಗಾರ, ರವಿ ಹೂಗಾರ, ಗುರುರಾಜ ಹೂಗಾರ, ಅಶೋಕ ಹೂಗಾರ, ಡಾ. ವಿಜಯಮಹಾಂತೇಶ ಪೂಜಾರ, ರವಿ ಸಂಗಳಕರ, ಪ್ರಭು ಹೂಗಾರ, ಪೂರ್ಣಿಮಾ ಪೂಜಾರ, ಹೊಳಬಸಪ್ಪ ಹೂಗಾರ, ಜಯಶ್ರೀ ಹೂಗಾರ, ಗಿರಿಜಾ ಹೂಗಾರ, ಶಶಿಕಲಾ ಹೂಗಾರ, ಲಲಿತಾ ಹೂಗಾರ, ಬಸಪ್ಪ ಹೂಗಾರ, ಫಕ್ಕಿರಮ್ಮ ಹೂಗಾರ ಸೇರಿದಂತೆ ಹಲವರಿದ್ದರು. ನಾಗರಾಜ ಸಂಗಳಕರ ಸ್ವಾಗತಿಸಿದರು. ಪ್ರಿಯಾಂಕಾ ಪೂಜಾರ ಪ್ರಾರ್ಥಿಸಿದರು. ಬಸವರಾಜ ಹೂಗಾರ ನಿರೂಪಿಸಿದರು.