ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಸಂಘಟನಾ ಸೃಜನ್ ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಈ ಮೂಲಕ ಜಿಲ್ಲಾಧ್ಯಕ್ಷರ ನೂತನ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಎಐಸಿಸಿ ವೀಕ್ಷಕರಾದ ಶರತ್ ತಿಳಿಸಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಎಐಸಿಸಿ ಅಹಮದಾಬಾದ್‌ನಲ್ಲಿ ನಡೆದ ಸಭೆಯಲ್ಲಿ ಸಂಘಟನಾ ಸೃಜನ್ ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲು ನಿರ್ಣಯಿಸಲಾಗಿದೆ. ಇಡೀ ದೇಶದಲ್ಲಿ ಎಐಸಿಸಿ ವೀಕ್ಷಕರ ಮೂಲಕ ಜಿಲ್ಲಾಧ್ಯಕ್ಷರ ನೂತನ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತಿದೆ ಎಂದರು.
ದೇಶದ ಎಲ್ಲ ರಾಜ್ಯಗಳಲ್ಲೂ ಶೇ. 80ರಂದು ಈಗಾಗಲೇ ಆಯ್ಕೆ ಪ್ರಕ್ರಿಯೆ ನಡೆದಿದೆ. ಕರ್ನಾಟಕ, ಉತ್ತರ್‌ಪ್ರದೇಶ್ ಸೇರಿದಂತೆ ನಾಲ್ಕೈದು ರಾಜ್ಯಗಳಲ್ಲಿ ಮಾತ್ರ ಆಯ್ಕೆ ಪ್ರಕ್ರಿಯೆ ಬಾಕಿಯಿದೆ. ನನಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ನೀಡಿದ್ದಾರೆ. ಇಲ್ಲಿ ಎಲ್ಲ ಹಾಲಿ ಮತ್ತು ಮಾಜಿ ಸಂಸದರು, ಶಾಸಕರು ಮತ್ತು ಜಿಲ್ಲಾ ಪ್ರಮುಖರು ಹಾಗೂ ಕಾಂಗ್ರೆಸ್‌ನ ಜನಪ್ರತಿನಿಧಿಗಳ ಹಾಗೂ ಹಿರಿಯ-ಕಿರಿಯ ಕಾರ್ಯಕರ್ತರ, ಪಕ್ಷದ ಮುಖಂಡರ ಅಭಿಪ್ರಾಯವನ್ನು ಪ್ರತ್ಯೇಕವಾಗಿ ಪಡೆದು, ಎಐಸಿಸಿಗೆ ವರದಿಯನ್ನು ಕಳುಹಿಸಲಾಗುವುದು. ಈ ಅಭಿಯಾನಕ್ಕೆ ಶಿವಮೊಗ್ಗದಲ್ಲಿ ಇಂದಿನಿಂದಲೇ ಚಾಲನೆ ನೀಡಿ, ಫಾರಂನ್ನು ವಿತರಿಸಲಾಗಿದೆ. ಆಸಕ್ತರು ಫಾರಂನ್ನು ತುಂಬಿ ಕೊಡಬಹುದಾಗಿದೆ. ಎಲ್ಲ ಸಕ್ರೀಯ ಕಾರ್ಯಕರ್ತರಿಗೂ ಅವಕಾಶವಿದೆ ಎಂದರು.ಯುವಕರು, ಮಹಿಳೆಯರು, ಅಲ್ಪಸಂಖ್ಯಾತರು, ಎಸ್ಸಿ, ಎಸ್ಟಿಗಳು ಈ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದ್ದು, ಸಾಮಾಜಿಕ ಜಾಲತಾಣದಿಂದಲೂ ಪ್ರತಿಯೊಬ್ಬರ ಅಭಿಪ್ರಾಯವನ್ನು ಪಡೆಯುತ್ತೇವೆ. ಇನ್ನೂ 12 ದಿನಗಳ ಕಾಲ ನಾನು ಶಿವಮೊಗ್ಗದಲ್ಲಿದ್ದು ಪಕ್ಷವನ್ನು ಸದೃಢವಾಗಿ ಕಟ್ಟಲು ಮತ್ತು ಸಂಘಟಿಸಲು ಪ್ರತಿಯೊಬ್ಬ ಕಾರ್ಯಕರ್ತರ ಅಭಿಪ್ರಾಯವನ್ನು ಪಡೆಯುತ್ತೇವೆ. ಅಂತಿಮವಾಗಿ ರಾಜ್ಯಾಧ್ಯಕ್ಷರು ಮತ್ತು ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಹಿರಿಯ ನಾಯಕರ ಅಭಿಪ್ರಾಯ ಪಡೆದು, 6 ಜನರನ್ನು ಆಯ್ಕೆ ಮಾಡಿ ಪಟ್ಟಿಯನ್ನು ಎಐಸಿಸಿಗೆ ಕಳುಹಿಸುತ್ತೇವೆ ಎಂದು ಹೇಳಿದರು.
ಕೆಪಿಸಿಸಿ ವೀಕ್ಷಕರಾದ ಲೋಕೇಶ್ ಮಾತನಾಡಿ, ಶರತ್ ಅವರಿಗೆ ಸಹಾಯಕರಾಗಿ ನಾಲ್ಕು ಜನರನ್ನು ನೇಮಿಸಲಾಗಿದೆ. ನಾವೆಲ್ಲರೂ ಸೇರಿ 6 ಜನರ ಆಯ್ಕೆಮಾಡಿ ಪಟ್ಟಿ ಕಳುಹಿಸುತ್ತೇವೆ. ಪ್ರತಿ ಬೂತ್ ಮಟ್ಟದ ಬಿಎಲ್‌ಎ-2ನ್ನು ಕೂಡ ಸಂಪರ್ಕಿಸುತ್ತೇವೆ. ಪಕ್ಷಕ್ಕಾಗಿ ದುಡಿಯುವ ಕಟ್ಟಕಡೆಯ ವ್ಯಕ್ತಿಗೂ ಸ್ಥಾನಮಾನ ಕೊಡಬೇಕೆಂಬುದು ರಾಹುಲ್ ಗಾಂಧಿಯವರ ಕನಸಾಗಿದೆ ಎಂದರು.
ಇನ್ನೋರ್ವ ವೀಕ್ಷಕರಾದ ಜ್ಯೋತಿ ಪಾಟೀಲ್ ಮಾತನಾಡಿ, ಪ್ರತಿ ಜಿಲ್ಲೆಯಲ್ಲೂ ಕೇಡರ್ ಬೇಸ್ ಪಾರ್ಟಿ ಮಾಡಲು ಈ ಅಭಿಯಾನ ಹಮ್ಮಿಕೊಂಡಿದ್ದೇವೆ. ಇದು ಸಂಪೂರ್ಣವಾಗಿ ಪಾರದರ್ಶಕ ಪ್ರಕ್ರಿಯೆಯಾಗಿರುತ್ತದೆ. ಸಂಘಟನಾ ಸೃಜನ್ ಅಭಿಯಾನದಿಂದ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಯಾಗಲಿದೆ. ಮೈನಾರಿಟಿ, ಓಬಿಸಿ ಸೇರಿದಂತೆ ಎಲ್ಲಾ ವರ್ಗಕ್ಕೂ ನ್ಯಾಯ ಸಿಗಲಿದೆ ಎಂದರು.
ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಅಲೆಮಾರಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ, ಜವಳಿ ನಿಗಮದ ಅಧ್ಯಕ್ಷರಾದ ಕೆ. ಚೇತನ್, ಪ್ರಮುಖರಾದ ಎನ್. ರಮೇಶ್, ಕಲಗೋಡು ರತ್ನಾಕರ್, ರವಿಕುಮಾರ್, ಎಚ್.ಸಿ. ಯೋಗೀಶ್, ಕಲೀಂಪಾಷಾ, ಶಿವಕುಮಾರ್, ಮಧುಸೂದನ್, ಪಿ.ಓ. ಶಿವಕುಮಾರ್, ಆದರ್ಶ್, ವಿಜಯ್, ಶಿವಣ್ಣ, ಶ್ವೇತಾಬಂಡಿ, ಕವಿತಾ ತೋರದ್, ಹಾಲಪ್ಪ, ಶಿವಾನಂದ್ ಮತ್ತಿತರರಿದ್ದರು.----------------------
ಪೋಟೋ: 26ಎಸ್‌ಎಂಜಿಕೆಪಿ02ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ವೀಕ್ಷಕರಾದ ಶರತ್ ಮಾತನಾಡಿದರು.