ಸಾರಾಂಶ
ಕನ್ನಡಪ್ರಭ ವಾರ್ತೆ ಹಳೆಬೀಡು
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಿಮ್ಹಾನ್ಸ್, ಆಶ್ರಯ ಹಸ್ತ ಟ್ರಸ್ಟ್ ಸಹಯೋಗದೊಂದಿಗೆ ಮಾನಸಿಕ ಆರೋಗ್ಯ ಚಿಕಿತ್ಸೆ ನಡೆಯುತ್ತಿದ್ದು, ಇಲ್ಲಿಗೆ ಪ್ರತಿ ಬುಧವಾರ ನಿಮ್ಹಾನ್ಸ್ ವೈದ್ಯರು ಭೇಟಿ ನೀಡಿ ರೋಗಿಗಳ ತಪಾಸಣೆ ನಡೆಸುತ್ತಾರೆ.ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಉತ್ತರಾಖಂಡ ರಾಜ್ಯದ ಪಿತೋರ್ ಘರ್ ಜಿಲ್ಲೆಯ ಮುನ್ಸಿಯಾರಿ ತಾಲೂಕು ಮತ್ತು ಕರ್ನಾಟಕದ ಹಾಸನ ಜಿಲ್ಲೆಯ ಬೇಲೂರು ತಾಲೂಕುಗಳನ್ನು ಆಯ್ಕೆ ಮಾಡಲಾಗಿದೆ. ಈ ಯೋಜನೆಗೆ "ನಮನ್ " ಎಂಬ ಹೆಸರನ್ನು ಇಡಲಾಗಿದೆ. ಈ ಎರಡು ತಾಲೂಕುಗಳ ಇಡೀ ಜನಸಂಖ್ಯಾ ಮಾನಸಿಕ ಆರೋಗ್ಯ ಅಗತ್ಯತೆಗಳನ್ನು ಪೂರೈಸಲು ಮಾದರಿ ಯೋಜನೆಯನ್ನು ಸಿದ್ಧಪಡಿಸಲಾಗಿದೆ.
ಇದು ಜನರಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಪ್ರಚಾರ ಮತ್ತು ಇದನ್ನು ತಡೆಗಟ್ಟುವ ತಂತ್ರಗಳು, ಮಾನಸಿಕ ಅಸ್ವಸ್ಥತೆಗೆ ಒಳಗಾಗಲು ಕಾರಣ, ಒಳಗಾದವರ ಜೀವನಶೈಲಿ, ಸಮಾಜದಲ್ಲಿ ಅವರನ್ನು ಹೇಗೆ ಗುರುತಿಸುವುದು, ಚಿಕಿತ್ಸೆ ಹೇಗೆ ನಿಡಬೇಕು, ಪುನರ್ವಸತಿಗಳ ಸಮಗ್ರ ಮಾಹಿತಿಗಳ ಬಗ್ಗೆ ಚರ್ಚಿಸಲಾಗಿದೆ.ಆಯ್ಕೆಯಾಗಿರುವ ಕರ್ನಾಟಕದ ಬೇಲೂರು ಮತ್ತು ಉತ್ತರಾಖಂಡನ ಮುನ್ಸಿಯಾರಿ ತಾಲೂಕುಗಳ ಇಡೀ ಜನಸಂಖ್ಯಾ ಮಾನಸಿಕ ಆರೋಗ್ಯ ಅಗತ್ಯತೆ ಪೂರೈಸಲು ಕಾರ್ಯಕ್ರಮವು ಗರ್ಭಾಶಯದಿಂದ ಸಮಾಧಿಯವರೆಗೆ ಇಡೀ ಜನಸಂಖ್ಯೆಯನ್ನು ಒಳಗೊಳ್ಳುವ ವಿಧಾನ ಅನುಸರಿಸಲು ಯೋಜಿಸಿದೆ. ಈ ಯೋಜನೆಯಲ್ಲಿ ತಾಲೂಕಿನ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಕಾರ್ಯಕರ್ತರನ್ನು ನೇಮಿಸಲಾಗಿದೆ. ತಾಲೂಕಿನಲ್ಲಿರುವ ಸಮುದಾಯ ಕೇಂದ್ರಗಳಾದ ಹಳೇಬೀಡಿನಲ್ಲಿ ಬುಧವಾರ ಮತ್ತು ಅರೆಹಳ್ಳಿಯಲ್ಲಿ ಸೋಮವಾರದಂದು ವೈದ್ಯರು ಲಭ್ಯವಿರುತ್ತಾರೆ. ಮಂಗಳವಾರ ಗುರುವಾರ ,ಶುಕ್ರವಾರದಂದು ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಲಭ್ಯವಿರುತ್ತಾರೆ.
ಡಾ ಕೃತಿಕಗೌಡ, ಹೆಲ್ತ್‌ವರ್ಕರ್‌ಗಳಾದ ಎಚ್.ಎಸ್.ಅಜೆಯ್, ಎ.ವಿ. ಪುನೀತ್, ವಿದ್ಯಾ, ದಿವ್ಯಾ, ಮಾನಸಿಕ ಸಲಹೆಗಾರ ಪಲ್ಲವಿ ಹಾಜರಿದ್ದರು.