ಶಿವರಾತ್ರಿ ಗೆ ನಂಜುಂಡೇಶ್ವರನ ಸನ್ನಿಧಿಯಲ್ಲಿ ಸಿದ್ದತೆ

| Published : Mar 08 2024, 01:47 AM IST

ಶಿವರಾತ್ರಿ ಗೆ ನಂಜುಂಡೇಶ್ವರನ ಸನ್ನಿಧಿಯಲ್ಲಿ ಸಿದ್ದತೆ
Share this Article
  • FB
  • TW
  • Linkdin
  • Email

ಸಾರಾಂಶ

ಈಗಾಗಲೇ ದೇವಾಲಯದ ಒಳಾವರಣ, ಹೊರ ಆವರಣದ ಸುತ್ತ ಹೂವಿನ ಅಲಂಕಾರ ತಳಿರು ತೋರಣಗಳಿಂದ ಹಾಗೂ ವಿದ್ಯುತ್ ದೀಪಾಲಂಕಾರದಿಂದ ದೇವಾಲಯವನ್ನು ಅಲಂಕಾರಗೊಳಿಸುವ ಕಾರ್ಯದಲ್ಲಿ ಸಿಬ್ಬಂದಿಗಳು ಕಾರ್ಯನಿರತರಾಗಿದ್ದಾರೆ. ದೇವಾಲಯದ ಮುಂಭಾಗ ಸರ್ಕಾರದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಭಾ ಕಾರ್ಯಕ್ರಮ ನಡೆಸಲು ಸಿದ್ದತೆ ಕೈಗೊಳ್ಳಲಾಗಿದೆ.

- ದೇವಾಲಯದ ಒಳಾವರಣ, ಹೊರ ಆವರಣದ ಸುತ್ತ ಹೂವಿನ ಅಲಂಕಾರ ತಳಿರು ತೋರಣರಂಗಸ್ವಾಮಿ ಎಚ್.ಡಿ.ಕನ್ನಡಪ್ರಭ ವಾರ್ತೆ ನಂಜನಗೂಡು

ದಕ್ಷಿಣಕಾಶಿ ಎಂದೇ ಪ್ರಸಿದ್ದಿ ಪಡೆದಿರುವ ಶ್ರೀ ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಮಾ. 8 ರಂದು ನಡೆಯುವ ಶಿವರಾತ್ರಿ ಜಾಗರಣೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮೂಲಕ ಸಕಲ ರೀತಿಯಲ್ಲೂ ಸಜ್ಜುಗೊಂಡಿದ್ದು, ಭಕ್ತರ ಶಿವನಾಮ ಸ್ಮರಣೆಗೆ ಸಕಲ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ.

ಈಗಾಗಲೇ ದೇವಾಲಯದ ಒಳಾವರಣ, ಹೊರ ಆವರಣದ ಸುತ್ತ ಹೂವಿನ ಅಲಂಕಾರ ತಳಿರು ತೋರಣಗಳಿಂದ ಹಾಗೂ ವಿದ್ಯುತ್ ದೀಪಾಲಂಕಾರದಿಂದ ದೇವಾಲಯವನ್ನು ಅಲಂಕಾರಗೊಳಿಸುವ ಕಾರ್ಯದಲ್ಲಿ ಸಿಬ್ಬಂದಿಗಳು ಕಾರ್ಯನಿರತರಾಗಿದ್ದಾರೆ. ದೇವಾಲಯದ ಮುಂಭಾಗ ಸರ್ಕಾರದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಭಾ ಕಾರ್ಯಕ್ರಮ ನಡೆಸಲು ಸಿದ್ದತೆ ಕೈಗೊಳ್ಳಲಾಗಿದೆ.

ದೇವಾಲಯದ ಮುಂಭಾಗದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ಜಾಗರಣೆ ಪ್ರಯುಕ್ತ ಖ್ಯಾತ ಹಿನ್ನೆಲೆ ಗಾಯಕಿ ಡಾ. ಶಮಿತಾ ಮಲ್ನಾಡ್ ಮತ್ತು ತಂಡದ ವತಿಯಿಂದ ಶಿವನಾಮಸ್ಮರಣೆಯ ಭಕ್ತಿಗೀತೆಗಳು ಸೇರಿದಂತೆ ಭರತನಾಟ್ಯ, ಹಾಸ್ಯಕಾರ್ಯಕ್ರಮ, ಹರಿಕಥೆ, ಸುಗಮ ಸಂಗೀತ ಕಾರ್ಯಕ್ರಮ, ಶಿವತಾಂಡವ ನೃತ್ಯವೈಭವ, ಸೇರಿದಂತೆ ಬೆಳಗಿನ ಜಾವದವರೆವಿಗೂ ಸಹ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.

ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ಶ್ರೀಕಂಠೇಶ್ವರಸ್ವಾಮಿಗೆ ವಿಶೇಷ ಪೂಜಾ ಕಾರ್ಯಗಳು ಜರುಗಲಿದ್ದು. ಬೆಳಗ್ಗೆಯಿಂದಲೇ ಉಷಾಕಾಲದಲ್ಲಿ ಬೆಳಗ್ಗೆ 5ಕ್ಕೆ ಕ್ಷೀರಾಭಿಷೇಕ, ಫಲ ಪಂಚಾಮೃತಾಭಿಷೇಕ, ಮಹಾನ್ಯಾಸ ಪೂರ್ವಕವಾಗಿ ಏಕದಶಾವರ ರುದ್ರಾಭಿಷೇಕ, ಅಷ್ಡೋತ್ತರ ಸಹಸ್ರನಾಮ ಬಿಲ್ವಾರ್ಚನೆ, ಮಹಾ ಮಂಗಳಾರತಿ ನೆರವೇರಿದ ಬಳಿಕ ಭಕ್ತರ ದರ್ಶನಕ್ಕೆ ಅವಕಾಶ ಕಲಿಸಲಾಗುತ್ತದೆ.

ನಂತರ 9ಕ್ಕೆ ಪ್ರಾತಃಕಾಲದ ಪೂಜೆ, ನಿತ್ಯೋತ್ಸವ, ಸಂಗಮಕಾಲ ಪೂಜೆ ಮತ್ತು 12 ಗಂಟೆಗೆ ಮಾಧ್ಯಾಹ್ನದ ಕಾಲ ಪೂಜೆ ನೆರವೇರಿಸಲಾಗುತ್ತದೆ. ತದನಂತರ ಸಂಜೆ 5.30 ಗಂಟೆಗೆ ಶಿವರಾತ್ರಿ ಅಂಗವಾಗಿ ಮೊದಲನೆ ಜಾವದ ಪೂಜೆ, ರಾತ್ರಿ 9.30ಕ್ಕೆ 2ನೇ ಜಾವದ ಪೂಜೆ, ರಾತ್ರಿ 12.30ಕ್ಕೆ 3ನೇ ಜಾವದ ಪೂಜೆ, ಮಧ್ಯರಾತ್ರಿ 3.30ಕ್ಕೆ 4ನೇ ಜಾವದ ಪೂಜೆ ನೆರವೇರಲಿದ್ದು ಪ್ರತಿ ಜಾವದ ಪೂಜೆಯಲ್ಲೂ ಕ್ಷೀರಾಭಿಷೇಕ, ಫಲ ಪಂಚಾಮೃತಾಭಿಷೇಕ, ಮಹಾನ್ಯಾಸ ಪೂರ್ವಕವಾಗಿ ಏಕದಶಾವರ ರುದ್ರಾಭಿಷೇಕ, ಅಷ್ಡೋತ್ತರ ಸಹಸ್ರನಾಮ ಬಿಲ್ವಾರ್ಚನೆ, ಮಹಾ ಮಂಗಳಾರತಿ ಪೂಜೆಗಳನ್ನು ನೆರವೇರಿಸಲಾಗುತ್ತದೆ. ನಂತರ ಕೈಲಾಸ ವಾಹನ ಉತ್ಸವದ ಮೂಲಕ ಶಿವರಾತ್ರಿ ಪೂಜೆ ಮುಕ್ತಾಯವಾಗಲಿದೆ ಎಂದು ದೇಗುಲದ ಆಗಮಿಕ ದೀಕ್ಷಿತರಾದ ನಾಗಚಂದ್ರ ಧೀಕ್ಷಿತ್ ತಿಳಿಸಿದ್ದಾರೆ.

ಶಿವರಾತ್ರಿ ಪ್ರಯುಕ್ತ ಶುಕ್ರವಾರ ರಾತ್ರಿಯಿಂದ ಮುಂಜಾನೆಯವರೆವಿಗೂ ದೇವಾಲಯದ ಬಾಗಿಲು ಭಕ್ತರ ದರ್ಶನಕ್ಕಾಗಿ ತೆರದಿರಲಿದೆ. ಯಾವುದೇ ಪೂಜಾ ಟಿಕೆಟ್ ನೀಡುವುದಿಲ್ಲ, ಅಲ್ಲದೆ ಯಾವುದೇ ಸೇವೆಗಳು ಲಭ್ಯವಿರುವುದಿಲ್ಲ ಬರೀ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ನೂಕು ನುಗ್ಗಲು ನಿಯಂತ್ರಿಸುವ ಸಲುವಾಗಿ ದೇವಾಲಯದ ಪ್ರವೇಶ ದ್ವಾರದಲ್ಲಿ ಕಬ್ಬಿಣದ ಗೇಟುಗಳನ್ನು ಅಳವಡಿಸಲಾಗುತ್ತಿದೆ. ಧರ್ಮ ದರ್ಶನಕ್ಕೆ ಪ್ರತ್ಯೇಕ ಸಾಲು ಮತ್ತು 100 ರು. ಟಿಕೆಟ್‌ ಗೆ ಪ್ರತ್ಯೇಕ ಸಾಲು ಮತ್ತು ವಿವಿಐಪಿಗಳಿಗೆ, 65 ವರ್ಷ ಮೇಲ್ಪಟ್ಟ ವಯೋವೃದ್ದರಿಗೆ ಪ್ರತ್ಯೇಕ ಸಾಲುಗಳನ್ನು ರಚನೆ ಮಾಡಲಾಗಿದೆ. ಬಿಸಿಲಿನ ತಾಪದ ಹಿನ್ನೆಲೆಯಲ್ಲಿ ನೆರಳಿನ ವ್ಯವಸ್ಥೆ, ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ, ಜೊತೆಗೆ ಶೌಚಾಲಯದ ವ್ಯವಸ್ಥೆ, ಮತ್ತು ಸುರಕ್ಷತೆ ದೃಷ್ಠಿಯಿಂದ ಸಿಸಿ ಟಿವಿ ಕ್ಯಾಮಾರಾಗಳನ್ನೂ ಅಳವಡಿಕೆ ಮಾಡಲಾಗಿದೆ. ಎಂದು ದೇವಾಲಯದ ಇಓ ಜಗದೀಶ್‌ ಕುಮಾರ್ ಹೇಳಿದ್ದಾರೆ.

ಮುಂಜಾಗ್ರತಾ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ದು. ಜಾತ್ರೆ ಹಿನ್ನೆಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಶರಣ ಸಂಗಮ ಮಠದಲ್ಲಿ 108 ಲಿಂಗಗಳ ಪ್ರದರ್ಶನ

ತಾಲೂಕಿನ ದೇವಿರಮ್ಮನಹಳ್ಳಿಯ ಶ್ರೀ ಶರಣ ಸಂಘಮ ಮಠದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ 108 ಲಿಂಗಗಳನ್ನು ಪ್ರತಿಷ್ಠಾಪಿಸಿದೆ. ಅಲ್ಲದೆ ಜಾಗರಣೆ ಪ್ರಯುಕ್ತ ಹರಿಕಥೆ, ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ತಾಲೂಕಿನ ಸುತ್ತೂರು ಮಠದಲ್ಲೂ ಸಹ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮದ ಜೊತೆಗೆ ಸಾಮಸಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಶಿವನಾಮಸ್ಮರಣೆ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಭಕ್ತರು ಶಿವಕಥೆ, ಭಕ್ತಿಗೀತೆಗಳನ್ನು ಕೇಳುತ್ತಾ ಜಾಗರಣೆ ನಡೆಸಲು ಸಕಲ ಸಿದ್ದತೆ ನಡೆಸಲಾಗಿದೆ.

---------------