ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಸಮಾಜ ಕಲ್ಯಾಣ ಇಲಾಖೆ ಅಧೀನದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ನೂರಾರು ವಿದ್ಯಾರ್ಥಿನಿಯರಿಗೆ ನೀಡುವ ತಿಂಡಿ, ಊಟ ವನ್ನು ಕಾಂಪೌಂಡ್ ಹಿಂದೆ ಬಕೆಟ್‌ಗಳಲ್ಲಿ ತುಂಬಿ ಸುರಿಯುತ್ತಿದ್ದ ಬಗ್ಗೆ ‘ಕನ್ನಡಪ್ರಭ’ ವರದಿ ಮಾಡಿದ್ದ ಬೆನ್ನಲ್ಲೇ ಇದೀಗ ಘಟನೆಗೆ ತಿಪ್ಪೆ ಸಾರುವ ಕೆಲಸವನ್ನು ಸ್ವತಃ ಇಲಾಖೆ ಮಾಡಿದೆಯೆಂಬ ಆರೋಪ ಕೇಳಿ ಬರುತ್ತಿದೆ.ನಗರದ ಎಂಸಿಸಿಬಿ ಬ್ಲಾಕ್‌ನ ಭಾರತ ಸೇವಾದಳ ಕಚೇರಿ ಹಿಂಭಾಗದಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿಯರು ಹಾಸ್ಟೆಲ್ ಊಟ, ತಿಂಡಿಯನ್ನು ನೆಚ್ಚಿಕೊಳ್ಳದೇ, ಸಮೀಪದ ಹೊಟೆಲ್, ಕ್ಯಾಂಟೀನ್ ಗೆ ಅವಲಂಬಿತವಾಗಿದ್ದು, ಹಾಸ್ಟೆಲ್‌ನಲ್ಲಿ ಸರ್ಕಾರ ನೀಡಿದ ದಿನಸಿ, ಆಹಾರ ಪದಾರ್ಥ ಗಳಿಂದ ಮಾಡಿದ್ದ ಆಹಾರವನ್ನು ನಿತ್ಯ ಹಾಸ್ಟೆಲ್ ಹಿಂಭಾಗದಲ್ಲಿ ಸುರಿಯುತ್ತಿದ್ದ ಬಗ್ಗೆ ಕನ್ನಡಪ್ರಭ ಫೆ.20ರ ಸಂಚಿಕೆಯಲ್ಲಿ ಸಚಿತ್ರ ವರದಿ ಪ್ರಕಟಿಸಿತ್ತು.
ಹಾಸ್ಟೆಲ್‌ನ ಆಹಾರವನ್ನು ಫೆ.19ಕ್ಕೆ ಮುಂಚೆ 20-25 ದಿನಗಳ ಮುಂಚೆಯಿಂದಲೂ ಕಾಂಪೌಂಡ್ ಹಿಂದೆ ಸುರಿಯುತ್ತಿದ್ದು, ಅದು ದುರ್ನಾತ ಬೀರುತ್ತಿತ್ತು. ಸುಮಾರು 150 ವಿದ್ಯಾರ್ಥಿನಿಯರು ಹಾಸ್ಟೆಲ್‌ನಲ್ಲಿದ್ದು, ಅಲ್ಲಿನ ಊಟ, ತಿಂಡಿ ಬಗ್ಗೆ ಸರ್ಕಾರದ ನಿಯಮಾನುಸಾರ ಮೆನು ಪಾಲನೆ ಮಾಡಬೇಕು. ಆದರೆ, ಮಾಡಿದ ಅಡುಗೆ ಯನ್ನೇ ಮಕ್ಕಳು ಮುಟ್ಟುತ್ತಿಲ್ಲ, ನಿತ್ಯವೂ ಅಷ್ಟೊಂದು ಆಹಾರವನ್ನು ಸುರಿಯುತ್ತಿದ್ದ ಬಗ್ಗೆ ಗಮನ ಹರಿಸಿ, ಸಮಸ್ಯೆಯ ಮೂಲ ಸರಿಪಡಿಸಬೇಕಾದ ಇಲಾಖೆಯೇ ಹಾಸ್ಟೆಲ್ ಅಧಿಕಾರಿ, ಸಿಬ್ಬಂದಿ ಲೋಪ ಮುಚ್ಚಿಕೊಳ್ಳಲು ತಿಪ್ಪೆ ಸಾರುವ ಕೆಲಸ ಮಾಡಿದ್ದಾರೆಂದು ಕರುನಾಡ ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಟಿ.ಗೋಪಾಲಗೌಡ ಆರೋಪಿಸಿದ್ದಾರೆ.ನಿತ್ಯವೂ ಹಾಸ್ಟೆಲ್ ಆಹಾರವನ್ನು ಕಾಂಪೌಂಡ್ ಹಿಂದೆ ಸುರಿಯುತ್ತಿರುವುದನ್ನು ಕಂಡಿದ್ದೇವೆ. ಫೋಟೋ, ವೀಡಿಯೋಗಳೂ ಸಾಕಷ್ಟು ಇವೆ. ನಾವು ಸ್ಥಳದಲ್ಲಿ ದ್ದಾಗಲೇ ಅಡುಗೆ, ಸ್ವಚ್ಛತಾ ಸಿಬ್ಬಂದಿ ಕಸವನ್ನು ತಂದು ಸುರಿಯುತ್ತಿದ್ದನ್ನೂ ಸೆರೆ ಹಿಡಿದಿದ್ದೇವೆ. ಅಲ್ಲಿ ನಿಲ್ಲಲೂ ಆಗದಷ್ಟು ಮುಸುರೆ, ಕೊಳತೆ ಆಹಾರದಿಂದ ದುರ್ನಾತ ಹೊರ ಹೊಮ್ಮುತ್ತಿತ್ತು. ಆದರೆ, ಈಗ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಸ್ಥಳ ವರಿಶೀಲನೆ ಮಾಡಿ, ಮೇಲಾಧಿಕಾರಿಗಳಿಗೆ ನೀಡಿದ ವರದಿಯು ಕಣ್ಣೊರೆಸುವ ತಂತ್ರವಾಗಿದೆಯಲ್ಲದೇ, ಇಡೀ ಲೋಪವನ್ನು ಮುಚ್ಚಿ ಹಾಕುವ ಕೆಲಸವನ್ನು ಜವಾಬ್ಧಾರಿಯುತ ಸ್ಥಾನದಲ್ಲಿರುವ ಅಧಿಕಾರಿಗಳು ಮಾಡಿ ದ್ದಾರೆ ಎಂದವರು ದೂರಿದ್ದಾರೆ.
ಸರ್ಕಾರಿ ಮೆಟ್ರಿಕ್ ಪೂರ್ವ ಬಾಕರಿರ ವಿದ್ಯಾರ್ಥಿ ನಿಲಯದ ಒಂದೇ ಕಟ್ಟಡದಲ್ಲಿ 2 ಹಾಸ್ಟೆಲ್ ನಡೆಯುತ್ತಿವೆ. 2 ದಿನಕ್ಕೊಮ್ಮೆ ಮುಸುರೆ ತೆಗೆದುಕೊಂಡು ಹೋಗುವ ವರು ಬಾರದ ಹಿನ್ನೆಲೆಯಲ್ಲಿ ಡಿ ಗ್ರೂಪ್ ಸಿಬ್ಬಂದಿ ಕಾಂಪೌಂಡ್ ಹೊರಗಡೆ ಖಾಲಿ ಜಾಗದಲ್ಲಿ ಹಾಕಿರುವುದು ತಪ್ಪಾಗಿರುವುದರಿಂದ ತಕ್ಷಣವೇ ಅದನ್ನು ಸ್ವಚ್ಛಗೊಳಿಸಿ, ಪುನಾ ಇಂತಹ ಘಟನೆ ಮರುಕಳಿಸದಂತೆ ಡಿ ಗ್ರೂಪ್ ಸಿಬ್ಬಂದಿಗೆ ಸೂಚನೆ ನೀಡಿ ಕ್ರಮ ಕೈಗೊಂಡಿರುವುದಾಗಿ ವಾರ್ಡನ್ ಹೇಳಿದ್ದಾರೆ. ಮಕ್ಕಳಿಗೆ ಊಟ, ತಿಂಡಿ ವ್ಯಯ ಮಾಡದಂತೆ ಸಲಹೆ ನೀಡಿರುವುದಾಗಿ ಸಮಜಾಯಿಷಿ ನೀಡಿದ್ದಾರೆಂದು, ಸ್ವತಃ ತಾವೂ ಫೆ.23ರಂದು ಖುದ್ದು ಭೇಟಿ ನೀಡಿ, ಇಂತಹ ಘಟನೆಗಳು ಮರುಕಳಿಸ ದಂತೆ ಎಚ್ಚರಿಕೆ ಸೂಚನೆ ನೀಡಿ, ಕ್ರಮ ವಹಿಸಿರುವುದಾಗಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಿಗೆ ಇಲಾಖೆಯ ಸಹಾಯಕ ನಿರ್ದೇಶಕರ (ಗ್ರೇಡ್-1) ಕಚೇರಿಯ ಸಹಾಯಕ ನಿರ್ದೇಶಕರು ವರದಿ ನೀಡಿರುವುದು ಮತ್ತಷ್ಟು ಪ್ರಶ್ನೆಗೆ ಕಾರಣವಾಗಿದೆ ಎಂದು ಗೋಪಾಲಗೌಡ ಹೇಳಿದ್ದಾರೆ.ಒಬ್ಬರು, ಇಬ್ಬರಲ್ಲ ಅಷ್ಟೊಂದು ಮಕ್ಕಳು ಹಾಸ್ಟೆಲ್ ತಿಂಡಿ, ಊಟ ಮಾಡುವುದಿಲ್ಲವೆಂದರೆ ಅಲ್ಲಿ ಅಡುಗೆ ಸರಿ ಇರುವುದಿಲ್ಲವೆಂದರ್ಥ. ರುಚಿ ಇಲ್ಲವೆಂದೇ ಅರ್ಥ. ನಿತ್ಯವೂ ಅಷ್ಟೊಂದು ಆಹಾರವನ್ನು ಮುಸುರಿಗೆ ಹಾಕಿ ವ್ಯರ್ಥ ಮಾಡುವುದೇಕೆ? ಕನ್ನಡಪ್ರಭದಲ್ಲಿ ವರದಿ ಬಂದ ನಂತರ ಮುಸುರಿ ಒಯ್ಯುವವರು ಬಂದಿಲ್ಲವೆಂಬ ಹಾರಿಕೆ ವರದಿ ನೀಡಲಾಗಿದೆ. ಈ ಬಗ್ಗೆ ಮೇಲಾಧಿಕಾರಿಗಳು, ಜನ ಪ್ರತಿನಿಧಿಗಳು ಖುದ್ದಾಗಿ ಪರಿಶೀಲಿಸಿ, ಅಲ್ಲಿನ ಮಕ್ಕಳಿಂದಲೇ ಗೌಪ್ಯವಾಗಿ ಮಾಹಿತಿ ಪಡೆಯುವ ಮೂಲಕ ಮುಂದೆ ಅಂತಹ ಘಟನೆ ಮರುಕಳಿಸದಂತೆ ತಡೆಯಲಿ. ಅಲ್ಲದೇ, ಸಮಾಜ ಕಲ್ಯಾಣ ಇಲಾಖೆ ಬೆಂಗಳೂರು ಕಚೇರಿಗೂ ಈ ವಿಚಾರವನ್ನು ತಂದಿದ್ದೇನೆ ಎಂದು ಕೆ.ಟಿ.ಗೋಪಾಲಗೌಡ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ್ದಾರೆ.