ಸಾರಾಂಶ
ಚಳ್ಳಕೆರೆ: ತಾಲೂಕಿನ ಗಡಿಭಾಗದಲ್ಲಿರುವ ಸರ್ಕಾರಿ ಪ್ರೌಢಶಾಲೆಗಳಿಗೆ ಸರ್ಕಾರ ಅವಶ್ಯಕತೆಗೆ ತಕ್ಕಂತೆ ಅನುದಾನ ನೀಡಲು ಸಾಧ್ಯವಾಗುವುದಿಲ್ಲ. ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ನೀಡುವ ದೇಣಿಗೆಯೊಂದಿಗೆ ಕೆಲವೊಂದು ಅಗತ್ಯ ಸೌಲಭ್ಯಗಳನ್ನು ಶಾಲೆಗೆ ಒದಗಿಸಬೇಕಾಗುತ್ತದೆ. ಈ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಗ್ರಾಮ ಪಂಚಾಯಿತಿ ಆಡಳಿತ ಅಂದಾಜು ೪೯ ಸಾವಿರ ರು. ವೆಚ್ಚದಲ್ಲಿ ವಿಜ್ಞಾನ ಮತ್ತು ಗಣಿತ ಪ್ರಯೋಗಾಲಯದ ವಸ್ತುಗಳನ್ನು ಕೊಡುಗೆಯಾಗಿ ನೀಡುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಿದ್ದು, ಶಿಕ್ಷಣ ಇಲಾಖೆ ಪರವಾಗಿ ಗ್ರಾಮ ಪಂಚಾಯಿತಿ ಅಡಳಿತವನ್ನು ಅಭಿನಂದಿಸುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ತಿಳಿಸಿದರು.
ಅವರು, ಗುರುವಾರ ತಿಪ್ಪಾರೆಡ್ಡಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಮ ಪಂಚಾಯಿತಿ ಆಡಳಿತ ನೀಡಿದ ಪ್ರಯೋಗಾಲಯವನ್ನು ಉದ್ಘಾಟಿಸಿ ಮಾತನಾಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭಕ್ಕೆ ಕೆಲವೇದಿನಗಳಿದ್ದು ಪ್ರಯೋಗಾಲಯದ ಸಹಕಾರದಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಉಪಯುಕ್ತವಾಗುತ್ತದೆ. ವಿಶೇಷವೆಂದರೆ ಗ್ರಾಮದ ಈ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಜ್ಯ ಮತ್ತು ರಾಷ್ಟçಮಟ್ಟದಲ್ಲಿ ವಿಜ್ಞಾನ ವಿಷಯದಲ್ಲಿ ಪ್ರಶಸ್ತಿ ಪಡೆದ ಮುಖ್ಯ ಶಿಕ್ಷಕ ಶ್ರೀನಿವಾಸ್‌ಮೂರ್ತಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳು ಸಹ ಶ್ರಮವಹಿಸಿ ಅಭ್ಯಾಸ ಮಾಡಿ, ಶೈಕ್ಷಣಿಕ ಪ್ರಗತಿ ಸಾಧಿಸಲು ಸಂಕಲ್ಪ ಮಾಡಬೇಕೆಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯ ಶಿಕ್ಷಕ ಶ್ರೀನಿವಾಸ್ ಮೂರ್ತಿ, ಗ್ರಾಮದ ಪ್ರೌಢಶಾಲೆಗೆ ವಿಜ್ಞಾನ ಮತ್ತು ಗಣಿತ ಪ್ರಯೋಗಾಲಯದ ಅವಶ್ಯಕತೆಯ ಬಗ್ಗೆ ಗ್ರಾಮ ಪಂಚಾಯಿತಿಗೆ ಪತ್ರ ನೀಡಿದ ಕೂಡಲೇ ಹಣವನ್ನು ಮಂಜೂರು ಮಾಡಿ ಪ್ರಯೋಗಾಲಯದ ಕಾರ್ಯಾರಂಭಕ್ಕೆ ಸಹಕರಿಸಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಾಂಜನೇಯ, ಉಪಾಧ್ಯಕ್ಷ, ಸದಸ್ಯರು, ಪಿಡಿಒ ರಜನಿಕಾಂತ್‌ರವರನ್ನು ಅಭಿನಂದಿಸುವುದಾಗಿ ತಿಳಿಸಿದರು. ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ತಿಮ್ಮಾರೆಡ್ಡಿ, ರೈತ ಮುಖಂಡ ರಾಮಚಂದ್ರರೆಡ್ಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮ್ಯಾಥಮಿಟಿಕ್ಸ್ ಅಕಾಡೆಮೆ ಸಂಚಾಲಕ ಎಚ್.ಮಂಜುನಾಥ, ಚಿತ್ರದುರ್ಗ ಸೈನ್ಸ್ ಫೌಂಡೇಷನ್ ಸಂಚಾಲಕ ಎಚ್.ಎಸ್.ತಿಪ್ಪೇಸ್ವಾಮಿ, ಲತೀಫ್‌ಸಾಬ್, ವಿಜ್ಞಾನ ಸಂಪನ್ಮೂಲ ವ್ಯಕ್ತಿಗಳಾದ ನಾಗೇಶ್, ರಂಗನಾಥ, ರಶ್ಮಿ, ವಿಜಯ್, ರಾಘವರೆಡ್ಡಿ, ಪ್ರೌಢಶಾಲಾ ಸಹ ಶಿಕ್ಷಕರ ತಾಲ್ಲೂಕು ಅಧ್ಯಕ್ಷ ಬಿ.ರಾಜಕುಮಾರ್, ಶಿಕ್ಷಕರಾದ ಶಿವಣ್ಣ, ತೇಜಸ್ವಿನಿ, ಇಫ್ರಾನ್, ಅತಿಥಿ ಶಿಕ್ಷಕರಾದ ಧನಂಜಯ, ಆಶಾ, ರಾಘವ, ಹೂಸ್ನ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.