ಸಂಘಟನ ಸೃಜನ್ ಅಭಿಯಾನ ಪ್ರಕ್ರಿಯೆ ಕೇವಲ ಒಬ್ಬ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಹುಡುಕುವ ಪ್ರಕ್ರಿಯೆಯಲ್ಲ.

ಉಕ ಜಿಲ್ಲಾ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷರ ಆಯ್ಕೆಗಾಗಿ ಸಮಾಲೋಚನೆ ಸಭೆ

ಕನ್ನಡಪ್ರಭ ವಾರ್ತೆ ಅಂಕೋಲಾ

ಸಂಘಟನ ಸೃಜನ್ ಅಭಿಯಾನ ಪ್ರಕ್ರಿಯೆ ಕೇವಲ ಒಬ್ಬ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಹುಡುಕುವ ಪ್ರಕ್ರಿಯೆಯಲ್ಲ. ಕಾಂಗ್ರೆಸ್ ಸಂಘಟನೆಯ ಇಲ್ಲಿನ ನೈಜ ಸ್ಥಿತಿ ಅರ್ಥಮಾಡಿಕೊಳ್ಳುವ, ಅನುಭವಿ ಕಾರ್ಯಕರ್ತರ ಧ್ವನಿ ಆಲಿಸುವ, ಕಾಂಗ್ರೆಸ್‌ನ ಶಕ್ತಿ ಮತ್ತು ಸವಾಲುಗಳನ್ನು ಪರಾಮರ್ಶಿಸುವ ಹಾಗೂ ಶಕ್ತಿಯುತ ಕಾಂಗ್ರೆಸ್ ನಿರ್ಮಾಣಕ್ಕೆ ರೋಡ್‌ಮ್ಯಾಪ್‌ ಸಿದ್ಧಪಡಿಸುವ ಮಹತ್ವದ ಅವಕಾಶವಾಗಿದೆ ಎಂದು ಎಐಸಿಸಿ ಕಾರ್ಯದರ್ಶಿ, ಅಸ್ಸಾಂ ರಾಜ್ಯದ ಮಾಜಿ ಶಾಸಕಿ ಹಾಗೂ ಆಸ್ಸಾಂ ಪ್ರದೇಶ ಕಾಂಗ್ರೆಸ್ ಕಮಿಟಿಯ ಕಾರ್ಯಾಧ್ಯಕ್ಷೆ ರೋಷಲಿನಾ ಟಿರ್ಕೆ ಹೇಳಿದರು.

ಎಐಸಿಸಿ ನಿರ್ದೇಶನದಂತೆ ಸಂಘಟನಾ ಸೃಜನ್ ಅಭಿಯಾನದಡಿ ಉಕ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರ ಆಯ್ಕೆಗಾಗಿ ಸಮಾಲೋಚನೆ ನಡೆಸಲು ಎಐಸಿಸಿ ವೀಕ್ಷಕರಾಗಿ ಆಗಮಿಸಿ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.

ತಳಮಟ್ಟದಿಂದ ಪಕ್ಷ ಬಲಪಡಿಸಲು ಎಐಸಿಸಿ ಹಮ್ಮಿಕೊಂಡಿರುವ ರಾಷ್ಟ್ರವ್ಯಾಪಿ ಸಂಘಟನಾತ್ಮಕ ಅಭಿಯಾನ ಇದಾಗಿದೆ. ಬಲವಾದ ಸಂಘಟನೆಯೇ ಬಲವಾದ ಪ್ರಜಾಪ್ರಭುತ್ವಕ್ಕೆ ಅಡಿಪಾಯ ಎಂಬುದು ಕಾಂಗ್ರೆಸ್‌ನ ಮೂಲ ತತ್ವ. ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕ ಮತ್ತು ನಿರಂತರ ಬಾಂಧವ್ಯ ಇಟ್ಟುಕೊಳ್ಳಲು ನಿಷ್ಠಾವಂತ ಕಾರ್ಯಕರ್ತರು ಮತ್ತು ಪರಿಣಾಮಕಾರಿ ಸ್ಥಳೀಯ ನಾಯಕತ್ವ ಆಯ್ಕೆ ಅಗತ್ಯ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಮಹಿಳೆಯರು, ಯುವಕರು ಹಾಗೂ ಎಲ್ಲ ವರ್ಗದವರಿಗೂ ಸೂಕ್ತ ಪ್ರಾತಿನಿಧ್ಯ ನೀಡುವುದು ಕಾಂಗ್ರೆಸ್‌ನ ತತ್ವವಾಗಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ ಮಾತನಾಡಿ, 3 ವರ್ಷದಿಂದ ಜಿಲ್ಲಾಮಟ್ಟದಲ್ಲಿ ಎಲ್ಲ ವರ್ಗದವರಿಗೂ ಸೂಕ್ತ ಪ್ರಾತಿನಿಧ್ಯ ನೀಡಿ, ಪಕ್ಷ ಸಂಘಟಿಸುವ ಕೆಲಸ ಮಾಡಿದ್ದೇನೆ ಎಂದರು.

ಕೆಪಿಸಿಸಿ ವೀಕ್ಷಕರಾಗಿ ಆಗಮಿಸಿದ ನವೀನ್ ಡಿಸೋಜಾ, ಸುಷ್ಮಾ ರೆಡ್ಡಿ, ಕೆಪಿಸಿಸಿ ಕಾರ್ಯದರ್ಶಿ ಡಾ. ರಾಘವೇಂದ್ರ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಸತೀಶ ನಾಯ್ಕ, ಕೆಪಿಸಿಸಿ ಮಹಿಳಾ ಕಾರ್ಯದರ್ಶಿ ಸುಜಾತಾ ಗಾಂವಕರ, ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಪಾಂಡುರಂಗ ಗೌಡ, ಮಾಜಿ ಶಾಸಕ ಕೆ.ಎಚ್. ಗೌಡ, ಶಿಕ್ಷಕರ ಘಟಕದ ಅಧ್ಯಕ್ಷ ಎನ್.ಬಿ. ನಾಯಕ, ಪ್ರಮುಖರಾದ ಮಂಜುಳಾ ವೆರ್ಣೇಕರ ಉಪಸ್ಥಿತರಿದ್ದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಶ್ವರ ನಾಯಕ ಸ್ವಾಗತಿಸಿದರು. ಜಿಪಂ ಮಾಜಿ ಸದಸ್ಯ ವಿನೋದ ನಾಯಕ ಕಾರ್ಯಕ್ರಮ ನಿರ್ವಹಿಸಿದರು.