ಸಹಕಾರ ಕ್ಷೇತ್ರದ ಮಾಹಿತಿ ಪ್ರತಿಯೊಬ್ಬರಿಗೂ ತಲುಪುವಂತೆ ಸಮಾವೇಶ ರೂಪಿಸಿ: ರಾಯರಡ್ಡಿ

| Published : Jan 21 2025, 12:31 AM IST

ಸಹಕಾರ ಕ್ಷೇತ್ರದ ಮಾಹಿತಿ ಪ್ರತಿಯೊಬ್ಬರಿಗೂ ತಲುಪುವಂತೆ ಸಮಾವೇಶ ರೂಪಿಸಿ: ರಾಯರಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಸಹಕಾರಿ ಕ್ಷೇತ್ರದ ಬಗ್ಗೆ ಕುಕನೂರು ಮತ್ತು ಯಲಬುರ್ಗಾ ತಾಲೂಕಿನಲ್ಲಿ ಪ್ರತಿಯೊಬ್ಬರಿಗೂ ಮಾಹಿತಿ ತಲುಪುವಂತೆ ಸಹಕಾರಿ ಜಾಗೃತಿ ಸಮಾವೇಶ ಆಯೋಜನೆ ಮಾಡಿ.

ಸಿಎಂ ಆರ್ಥಿಕ ಸಲಹೆಗಾರ ಸೂಚನೆ । ಸಹಕಾರಿ ಜಾಗೃತಿ ಸಮಾವೇಶ ಆಯೋಜನೆ ಕರಿತು ಸಭೆ

ಕನ್ನಡಪ್ರಭ ವಾರ್ತೆ ಕುಕನೂರು

ಸಹಕಾರಿ ಕ್ಷೇತ್ರದ ಬಗ್ಗೆ ಕುಕನೂರು ಮತ್ತು ಯಲಬುರ್ಗಾ ತಾಲೂಕಿನಲ್ಲಿ ಪ್ರತಿಯೊಬ್ಬರಿಗೂ ಮಾಹಿತಿ ತಲುಪುವಂತೆ ಸಹಕಾರಿ ಜಾಗೃತಿ ಸಮಾವೇಶ ಆಯೋಜನೆ ಮಾಡಿ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸಹಕಾರಿ ಜಾಗೃತಿ ಸಮಾವೇಶದ ಆಯೋಜನೆ ಕುರಿತು ಅಧಿಕಾರಿಗಳು ಹಾಗೂ ಸ್ವಾಗತ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಸಹಕಾರಿ ರಂಗದ ಮೂಲಕ ಹಲವಾರು ರೀತಿಯಲ್ಲಿ ರೈತ ವರ್ಗ ಹಾಗೂ ಜನರು ಬದುಕು ನಿರ್ಮಿಸಿಕೊಳ್ಳಬಹುದು. ಸಹಕಾರಿ ಸಂಘಗಳ ಬಗ್ಗೆ ಎಲ್ಲರಿಗೂ ಮಾಹಿತಿ ಗೊತ್ತಾಗಬೇಕು. ಆ ನಿಟ್ಟಿನಲ್ಲಿ ಸಹಕಾರ ಕ್ಷೇತ್ರದ ಮಾಹಿತಿ ಪ್ರತಿಯೊಬ್ಬರಿಗೂ ತಲುಪುವಂತೆ ಸಮಾವೇಶದ ಮೂಲಕ ತಿಳಿಸುವ ಕಾರ್ಯ ಆಗಬೇಕು. ಫೆ. 8ರಂದು ಕುಕನೂರಿನಲ್ಲಿ ಸಹಕಾರಿ ಜಾಗೃತಿ ಸಮಾವೇಶ ಆಯೋಜನೆ ಮಾಡಲು ಅಧಿಕಾರಿ ವರ್ಗದವರು ರೂಪುರೇಷೆ ಸಿದ್ಧಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.

ನಂತರ ಕಾರ್ಯಕ್ರಮ ಜರುಗುವ ಜಾಗ ಪರಿಶೀಲಿಸಿದರು.ಫೆ.೮ ರಂದು ಸಹಕಾರಿ ಕ್ಷೇತ್ರದ ಜಾಗೃತಿ ಸಮಾವೇಶ:

ರೈತರಿಗೆ ಮಾಹಿತಿಯ ಕೊರತೆಯಿಂದ ಸಹಕಾರಿ ಕ್ಷೇತ್ರದಲ್ಲಿ ಪ್ರಗತಿ ಕುಂಠಿತಗೊಂಡಿದ್ದು, ಫೆ.೮ ರಂದು ಯಲಬುರ್ಗಾ ವಿಧಾನಸಭಾ ವ್ಯಾಪ್ತಿಯಲ್ಲಿ ರಾಜ್ಯದಲ್ಲಿಯೇ ಮೊಟ್ಟಮೊದಲ ಬಾರಿಗೆ ಸಹಕಾರಿ ಕ್ಷೇತ್ರದ ಜಾಗೃತಿ ಸಮಾವೇಶ ನಡೆಸಲಾಗುವುದು ಎಂದು ವಿಭಾಗ ಮಟ್ಟದ ಸಹಕಾರಿ ಸಂಘಗಳ ಉಪ ನಿಬಂಧಕ ವಿಶ್ವನಾಥ ಮಲಕೋಡ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಸೋಮವಾರ ಮಾತನಾಡಿದ ಅವರು, ಪ್ರತಿಯೊಬ್ಬ ರೈತರಿಗೆ ಸಹಕಾರಿ ಕ್ಷೇತ್ರದ ಕುರಿತು ಸಮರ್ಪಕವಾಗಿ ಮಾಹಿತಿ ನೀಡುವ ಮೂಲಕ ಸಹಕಾರಿ ಕ್ಷೇತ್ರವನ್ನು ಬಲಿಷ್ಠಗೊಳಿಸಲು ಎಲ್ಲರ ಸಹಕಾರ ಮುಖ್ಯ. ಸಹಕಾರಿ ಕ್ಷೇತ್ರದ ಕುರಿತು ರೈತರಿಗೆ ಮಾಹಿತಿ ಕೊರತೆಯಿಂದಾಗಿ ಸಹಕಾರಿ ಕ್ಷೇತ್ರ ಪ್ರಗತಿ ಸಾಧಿಸುವಲ್ಲಿ ಹಿಂದುಳಿದಿದ್ದು, ಅಭಿವೃದ್ಧಿ ಪಡಿಸುವ ವಿನೂತನ ಮಾದರಿಯ ಸಹಕಾರ ಕ್ಷೇತ್ರದ ಕಾರ್ಯಕ್ರಮ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಸಹಕಾರಿ ಸಂಘದ ಸಮಾವೇಶ ಏರ್ಪಡಿಸಲಾಗುತ್ತಿದೆ. ನಮ್ಮ ಸಹಕಾರಿ ಸಂಘಗಳಲ್ಲಿ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುತ್ತಿದ್ದು, ಅದರ ಸದುಪಯೋಗ ಪಡೆದು ವ್ಯವಸಾಯ ನಡೆಸುವ ಜೊತೆಗೆ ಆರ್ಥಿಕವಾಗಿ ಸದೃಢರಾಗಬೇಕು ಎಂದರು.

ಫೆ. ೮ರಂದು ಕುಕನೂರು ಪಟ್ಟಣದ ಎಪಿಎಂಸಿಯಲ್ಲಿ ಜಾಗೃತಿ ಬೃಹತ್ ಸಮಾವೇಶ ನಡೆಸಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ನೀಡುವ ಯೋಜನೆಗಳು, ಪ್ರಯೋಜನ, ಸಾಲ ಹಾಗೂ ಅದರ ಸೌಲಭ್ಯಗಳ ಬಗ್ಗೆ ಮಾಹಿತಿ ಕೊರತೆ ಇದೆ. ಅನೇಕ ಸೌಲಭ್ಯಗಳು ತಾಲೂಕಿನ ಪ್ರತಿ ರೈತರಿಗೆ ತಲುಪಿಸಬೇಕು. ಅವರನ್ನು ಸಹಕಾರ ಕ್ಷೇತ್ರದತ್ತ ಸೆಳೆಯಬೇಕಿದೆ. ಇದರಿಂದ ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಅವರು ಈ ಬಗ್ಗೆ ವಿಶೇಷ ಕಾಳಜಿ ವಹಿಸಿ, ಅವರ ಮಾರ್ಗದರ್ಶನದಲ್ಲಿ ಸಹಕಾರಿ ಜಾಗೃತಿ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಸಮಾವೇಶದಲ್ಲಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಭಾಗವಹಿಸಲಿದ್ದು, ಕಾನೂನು ಸಚಿವ ಎಚ್. ಕೆ.ಪಾಟೀಲ್, ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸೇರಿದಂತೆ ಸರ್ಕಾರಿ ಸಂಘದ ಅಧಿಕಾರಿಗಳು ಭಾಗವಹಿಸುವರು ಎಂದರು.

ಸಹಕಾರಿ ಜಾಗೃತಿ ಸಮಾವೇಶದ ಕಾರ್ಯಾಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ ಮಾತನಾಡಿ, ಹಿರಿಯ ಸಹಕಾರಿಗಳಿಗೆ ವಿಶೇಷವಾಗಿ ಸನ್ಮಾನ ನಡೆಯಲಿದೆ ಎಂದರು.

ಸಹಕಾರಿ ಜಾಗೃತ ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷ ರಾಘವೇಂದ್ರಚಾರ್ಯ ಜೋಶಿ, ಕಾರ್ಯಾಧ್ಯಕ್ಷ ಶೇಖರಗೌಡ ಉಳ್ಳಾಗಡ್ಡಿ, ಉಪನಿಬಂಧಕ ಪ್ರಕಾಶ ಸಜ್ಜನ, ಪ್ರಮುಖರಾದ ಭೀಮರಡ್ಡಿ ಶಾಡ್ಲಗೇರಿ, ಮಹೇಶ ಹಳ್ಳಿ ಇತರರಿದ್ದರು.