ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಮ್ಮ ರಾಜ್ಯ ಎಷ್ಟೇ ಅಭಿವೃದ್ಧಿ ಆಗಿದೆ ಎಂದು ನಾವು ಹೇಳಿಕೊಂಡರೂ, 100ಕ್ಕೆ 63ರಷ್ಟು ಜನ ಸರ್ಕಾರಿ ಕಚೇರಿ ಕೆಲಸ ಮಾಡಿಸಿಕೊಳ್ಳಲು ಲಂಚ ಕೊಡುತ್ತಾರೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವೇ? ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಬೇಸರ ವ್ಯಕ್ತಪಡಿಸಿದರು.ಮಂಗಳವಾರ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಸಿ.ಎಚ್ ಜಾಧವ್, ರಾಜಶೇಖರ್ ಟಿ.ಬಿ ಹಾಗೂ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ರಶ್ಮಿ ಜಾಧವ್ ಬರೆದಿರುವ ‘ಲಾ ರಿಲೇಟಿಂಗ್ ಟು ಕರಪ್ಷನ್ ಆ್ಯಂಡ್ ಪೊಸೆಷನ್ ಆಫ್ ಡಿಸ್‌ಪ್ರೊಪೋರ್ಷನೇಟ್ ಅಸ್ಸೆಟ್ಸ್’ 2ನೇ ಆವೃತ್ತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಜನ ಸಾಮಾನ್ಯರನ್ನು ಕಿತ್ತು ತಿನ್ನುವ, ಲೂಟಿ ಹೊಡೆಯುವ ಸಂಘಟಿತ ಭ್ರಷ್ಟಾಚಾರವನ್ನು ಇಡೀ ವ್ಯವಸ್ಥೆಯಾಗಿ ನಾವು ತಡೆಯದಿದ್ದರೆ ಪ್ರಜಾಪ್ರಭುತ್ವಕ್ಕೆ ಅಪಾಯ ಎಂದರು.
ಸಿಬಿಐನಲ್ಲಿ 7,072 ಭ್ರಷ್ಟಾಚಾರ ಪ್ರಕರಣಗಳು ಬಾಕಿ ಉಳಿದಿವೆ. ಅದರಲ್ಲಿ 5,500ಕ್ಕೂ ಹೆಚ್ಚು ಪ್ರಕರಣಗಳು 10ರಿಂದ 20 ವರ್ಷಗಳಿಂದ ಬಾಕಿ ಉಳಿದುಕೊಂಡಿವೆ. ಈ ಪ್ರಮಾಣದಲ್ಲಿ ಪ್ರಕರಣಗಳು ಬಾಕಿ ಉಳಿದರೆ ಯಾರಿಗೇ ತಾನೇ ಕಾನೂನಿನ ಬಗ್ಗೆ ಭಯ ಇರುತ್ತದೆ? ಇನ್ನು ನ್ಯಾಯಾಂಗ ವ್ಯವಸ್ಥೆ ಕೂಡ ಭ್ರಷ್ಟರಿಗೆ ಕಾನೂನಿನ ಭಯ ಸೃಷ್ಟಿಸುವಲ್ಲಿ ವಿಫಲವಾಗಿದೆ. ಇಂದಿನ ದಿನಗಳಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಹೀಗಾಗಿ, ಇಡೀ ವ್ಯವಸ್ಥೆಯಾಗಿ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಎಚ್.ಕೆ. ಪಾಟೀಲ್ ಹೇಳಿದರು.ರಾಜ್ಯದಲ್ಲಿ 78,000 ಕೋಟಿ ರು. ಮೌಲ್ಯದ ಅಕ್ರಮ ಗಣಿಗಾರಿಕೆಯಾಗಿದೆ ಎಂದು ಸಚಿವ ಸಂಪುಟ ಉಪ ಸಮಿತಿ ವರದಿ ನೀಡಿತ್ತು. ಅಷ್ಟು ಪ್ರಮಾಣದ ಅಕ್ರಮ ಅದಿರು ವಿದೇಶಕ್ಕೆ ಹೋಗಿದೆ ಎಂದು ಗೊತ್ತಾಗಿತ್ತು. ಲಕ್ಷಾಂತರ ಕೋಟಿ ರು. ಮೌಲ್ಯದ ಅಕ್ರಮ ಗಣಿಗಾರಿಕೆ ನಡೆದು, ದೇಶದ ಸಂಪತ್ತು ಲೂಟಿಯಾದರೂ ನಾವೆಲ್ಲ ಮೌನವಾಗಿರುವುದು ದುರದೃಷ್ಟಕರ. 15-20 ವರ್ಷಗಳ ಹಿಂದಿನ ಆ ಅಕ್ರಮವನ್ನು ಇಂದಿನ ಮಾರುಕಟ್ಟೆ ಬೆಲೆಗೆ ಪರಿಗಣಿಸಿದರೆ 8 ಲಕ್ಷ ಕೋಟಿ ರು. ಆಗುತ್ತದೆ. ಅದನ್ನು ಮರು ವಶಕ್ಕೆ ಪಡೆಯಲು ಸಾಧ್ಯವಾಗಿಲ್ಲ. ಈ ಸಂಬಂಧಿಸಿದ 15,000 ಪ್ರಕರಣಗಳ ಪೈಕಿ ಶೇ.0.01ರಷ್ಟು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ಆಗಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ಬೇಸರ ವ್ಯಕ್ತಪಡಿಸಿದರು.
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಮಾತನಾಡಿ, ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಗ್ಯಾಂಗ್ ಕಟ್ಟಿಕೊಂಡು ಅಮಾಯಕ ಜನರ ಸುಲಿಗೆ ಮಾಡಲಾಗುತ್ತಿದೆ. ಜನರ ನ್ಯಾಯಯುತ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಸರ್ಕಾರಿ ಕಚೇರಿಗೆ ಬರುವ ಜನರನ್ನು ಹರಿದು ತಿನ್ನುವಂತೆ ಭ್ರಷ್ಟಾಚಾರ ನಡೆಯುತ್ತಿದೆ. ವಿವಿಧ ಸರ್ಕಾರಿ ಕಚೇರಿಗಳ ಮೇಲೆ ದಾಳಿ ನಡೆಸಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ನೂರಾರು ಕೇಸ್‌ಗಳನ್ನು ದಾಖಲಿಸಲಾಗಿದೆ. ಭ್ರಷ್ಟಾಚಾರ ನಿಯಂತ್ರಣಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಅಗ್ನಿಶಾಮಕ ಇಲಾಖೆಯ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.