ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಸ್ಮಶಾನವೆಂದರೆ ಭಯಪಡುವ ಇಂದಿನ ದಿನಗಳಲ್ಲಿ ಶಿವರಾತ್ರಿ ಹಬ್ಬದ ನಿಮಿತ್ತ ಶಿವನ ಪ್ರತಿಮೆ ಲೋಕಾರ್ಪಣೆಯ ನೆಪದಲ್ಲಿ ಸ್ಮಶಾನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿರುವುದು ವಿನೂತನ ಮತ್ತು ಮೌಢ್ಯತೆಯ ವಿರುದ್ಧ ಸಂದೇಶ ಸಾರುವ ಕಾರ್ಯಕ್ರಮ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.ಪಟ್ಟಣದ ಬಸವೇಶ್ವರ ನಗರದ ಸಾರ್ವಜನಿಕ ಮುಕ್ತಿಧಾಮದಲ್ಲಿ ನಿರ್ಮಾಣಗೊಂಡ 25 ಅಡಿ ಎತ್ತರದ ಧ್ಯಾನಾಸಕ್ತ ಶಿವನ ಪ್ರತಿಮೆಯನ್ನು ಭಾನುವಾರ ಲೋಕಾರ್ಪಣೆ ಮಾಡಿ ಮಾತನಾಡಿ, ಸ್ಮಶಾನದ ಗೇಟ್ ಹತ್ತಿರ ಬಂದರೆ ಭಯಪಡುವ ಸಂದರ್ಭದಲ್ಲಿ ನೀವು ಸ್ಮಶಾನದಲ್ಲಿ ಕಾರ್ಯಕ್ರಮ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸಬೇಕು. ನಾನು ಒಮ್ಮೆಯೂ ಸ್ಮಶಾನದ ಕಾರ್ಯಕ್ರದ ವೇದಿಕೆ ಹತ್ತಿರಲಿಲ್ಲ. ಇದು ಪ್ರಥಮ ಅನುಭವ.ಮುಂದಿನ ದಿನಗಳಲ್ಲಿಸ್ಮಶಾನದ ಅಭಿವೃದ್ಧಿಗೆ ಹೆಚ್ಚಿನ ಅನುದಾನಳೊದಗಿಸಿ ವ್ಯವಸ್ಥಿತ ಮುಕ್ತಿಧಾಮ ಮಾಡಲು ಪ್ರಯತ್ನಿಸುವೆ ಎಂದು ಭರವಸೆ ನೀಡಿದರು.
ಸಾನಿಧ್ಯ ವಹಿಸಿದ್ದ ಗುರುಸಿದ್ದೇಶ್ವರ ಮಠದ ಗುರುಸಿದ್ದ ಶಿವಾಚಾರ್ಯರ ಶ್ರೀಗಳು ಮಾತನಾಡಿ, ಸ್ಮಶಾನದಲ್ಲಿ ಕಾರ್ಯಕ್ರಮ ಮಾಡಬೇಕೆಂಬುದು ನನ್ನ ಇಚ್ಛೆಯಾಗಿತ್ತು. ಅದನ್ನು ನೀವೆಲ್ಲ ಸೇರಿ ನೆರವೇರಿಸಿದ್ದು ಸಂತಸ ತಂದಿದೆ. ಬೇರೆ ಊರುಗಳ ಸ್ಮಶಾನಗಳಿಗೆ ಹೋಲಿಕೆ ಮಾಡಿದರೆ ಇದು ತುಂಬಾ ವಿಭಿನ್ನ ಎನ್ನಿಸುತ್ತದೆ. ಸುತ್ತಲೂ ಗಿಡಗಳು, ಹಕ್ಕಿಗಳ ಕಲರವ, ನೀರಿನ ವ್ಯವಸ್ಥೆ, ಶಿವನ ಪ್ರತಿಮೆ ಮನಸ್ಸಿಗೆ ನೆಮ್ಮದಿ, ಪ್ರಶಾಂತತೆ ನೀಡಿದವು. ಈ ಸ್ಮಶಾನ ಭಯ ತರಿಸುವುದಿಲ್ಲ. ಸುತ್ತಲೂ ಮನೆಗಳಿದ್ದು, ಎಲ್ಲರೂ ನಿರ್ಭಯದಿಂದ ಬದುಕುತ್ತಿದ್ದಾರೆ. ಇದು ಉಳಿದೆಲ್ಲ ಊರುಗಳಿಗೆ ಮಾದರಿಯಾಗಿದೆ ಎಂದರು.ಇದೇ ವೇಳೆ ಸ್ಮಶಾನ ಅಭಿವೃದ್ಧಿಗೆ ಧನ ಸಹಾಯ ಮಾಡಿದ ದಾನಿಗಳಿಗೆ ಶಾಸಕರು ಸನ್ಮಾನಿಸಿದರು. ಸ್ಮಶಾನ ನಿರ್ವಹಣೆ ಮಾಡುವ ಸಿಬ್ಬಂದಿಗೆ ಅಧಿಕೃತವಾದ ನೇಮಕಾತಿ ಆದೇಶಪತ್ರ ಶಾಸಕರು ನೀಡಿದರು.
ವೇದಿಕೆ ಮೇಲೆ ಪುರಸಭೆ ಮುಖ್ಯಾಧಿಕಾರಿ ಎ.ಎಚ್. ಮುಜಾವರ, ಪಂಚ ಗ್ಯಾರಂಟಿ ಅನುಷ್ಟಾನ ಯೋಜನೆ ತಾಲೂಕು ಅಧ್ಯಕ್ಷ ವೈ.ಆರ್. ಹೆಬ್ಬಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ಶಿವನಯ್ಯ ಮಳಿಮಠ, ಹನಮಂತ ಕಟಗೇರಿ ಚಿದಾನಂದ ಕಾಟವಾ, ಪುರಸಭೆ ಮಾಜಿ ಉಪಾಧ್ಯಕ್ಷ ರಾಜು ಹೆಬ್ಬಳ್ಳಿ, ವ್ಯವಸ್ಥಾಪಕ ಎ.ಎಚ್. ಮುದ್ದೇಬಿಹಾಳ, ಜಿಎಸ್‌ಡಬ್ಲ್ಯೂ ಅಧ್ಯಕ್ಷ ವಿಷ್ಣು ಬಳಿಗೇರ, ಶ್ರೀಕಾಂತ ಧಾರವಾಡ, ರಮೇಶ ಪದಕಿ, ಡಾ.ಸುರೇಶ ಪರ್ವತೀಕರ, ರಮೇಶ ಚಿಲ್ಲಾಪೂರ, ಫಕೀರಪ್ಪ ತಳವಾರ, ರಾಜು ತಾಪಡಿಯಾ, ರಾಜು ಸಂಗಮ, ಮೋತಿಲಾಲ ರಾಠೋಡ, ಕೊಪ್ಪಳ ಸೇರಿದಂತೆ ಪುರಸಭೆ ಸಿಬ್ಬಂದಿ, ಜಿಎಸ್ ಡಬ್ಲ್ಯೂ ಪದಾಧಿಕಾರಿಗಳು, ಮಹಿಳೆಯರು, ಮಕ್ಕಳು ಇದ್ದರು.