ಸಾರಾಂಶ
ರಾಣಿಬೆನ್ನೂರು: ನೈತಿಕ ಮೌಲ್ಯಗಳನ್ನು ಹೊಂದಿರುವ ನಮ್ಮ ಸಂಸ್ಕೃತಿಯನ್ನು ನಮ್ಮ ಮುಂದಿನ ಪೀಳಿಗೆಗೆ ವರ್ಗಾಯಿಸಬೇಕಾಗಿದೆ. ವಿಚಾರಗಳಲ್ಲಿ ಆರಂಭಿಸಿ ಆಚಾರಗಳಲ್ಲಿ ಅವುಗಳನ್ನು ಆಚರಣೆಗೆ ತರಬೇಕು ಎಂದು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ನುಡಿದರು.ಇಲ್ಲಿಯ ಮೃತ್ಯುಂಜಯ ನಗರದ ಚೆನ್ನೇಶ್ವರ ಮಠದ ಸಭಾಭವನದಲ್ಲಿ ಗುರುವಾರ ಸಂಜೆ ಹೊನ್ನಾಳಿ ಚೆನ್ನಮಲ್ಲಿಕಾರ್ಜುನಸ್ವಾಮಿ ಸಂಸ್ಕೃತಿ ಪ್ರಸಾರ ಪರಿಷತ್ತು ಹಾಗೂ ಸ್ಥಳೀಯ ಚೆನ್ನೇಶ್ವರ ಮಠದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮಾಸಿಕ ಧರ್ಮಸಭೆ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಕಾರ್ಯಕ್ರಮಗಳ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಮನಸ್ಸು, ಬುದ್ಧಿಯನ್ನು ಅನ್ಯ ವಿಚಾರಗಳಿಂದ ತುಂಬಿಸಿಕೊಳ್ಳದೆ ಸತ್ಸಂಗ ಸದಾಚಾರಗಳಿಂದ ತುಂಬಿಸಿಕೊಳ್ಳಬೇಕು. ಅತ್ಯಂತ ಕಷ್ಟ ಕಾಲದಲ್ಲಿ ಪೀಠವನ್ನು ಮುನ್ನಡೆಸಿದ ಹಿರಿಮೆ ಕಾಶಿ ವಿಶ್ವೇಶ್ವರ ಜಗದ್ಗುರು ಹಾಗೂ ವಾಗೀಶ ಪಂಡಿತಾರಾಧ್ಯರದು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ವರ್ತಕರ ಸಂಘದ ಅಧ್ಯಕ್ಷ ಗದಿಗೆಪ್ಪ ಹೊಟ್ಟಿಗೌಡ್ರ ಮಾತನಾಡಿ, ರಾಣಿಬೆನ್ನೂರು ಸಾಹಿತ್ಯ, ಸಂಸ್ಕೃತಿಯ ವಾಹಕವಾಗಿದೆ. ಸಾಹಿತ್ಯ ಹಾಗೂ ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳು. ದತ್ತಿ ಕಾರ್ಯಕ್ರಮಗಳ ಮೂಲಕ ದತ್ತಿದಾನಿಗಳು ಸಾಹಿತ್ಯ ಪರಂಪರೆಯನ್ನು ಉಳಿಸುವಲ್ಲಿ ಮಹತ್ವದ ಪಾತ್ರವನ್ನು ಹೊಂದಿದ್ದಾರೆ ಎಂದರು.ವಸಂತಾ ಹುಲ್ಲತ್ತಿ ಮಾತನಾಡಿ, ಸಮಾಜ, ಧರ್ಮ, ಶಿಕ್ಷಣ ಹಾಗೂ ಸಂಸ್ಕೃತಿಗೆ ನೀಡಿದ ಕೊಡುಗೆ ಹಾಗೂ ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಪರಿಚಯ ಹಾಗೂ ಧರ್ಮ ಸಂದೇಶಗಳನ್ನು ತಿಳಿಸಿದರು.ಇದೇ ಸಂದರ್ಭದಲ್ಲಿ ಜನಸಿರಿ ಫೌಂಡೇಶನ್‌ನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಗದೀಶ ಮಳೇಮಠ ಹಾಗೂ ಪುರುಷೋತ್ತಮ ಬಾಲಾಜಿ ಇವರನ್ನು ಸನ್ಮಾನಿಸಲಾಯಿತು. ಕಲಾವಿದರಾದ ಗುಡ್ಡಪ್ಪ ಹಿಂದಲಮನಿ, ಮೌನೇಶ ತ್ರಾಸದ, ರಜನಿ ಕರಿಗಾರ, ಯುವರಾಜ ಹಿರೇಮಠ ಸಂಗೀತ ಸೇವೆಯನ್ನ ಸಲ್ಲಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರಭಾಕರ ಶಿಗ್ಲಿ, ಕೊಟ್ರೇಶಪ್ಪ, ವೀರಣ್ಣ ಮಳೆಮಠ, ಕಸ್ತೂರೆಮ್ಮ ಪಾಟೀಲ, ವೀರಣ್ಣ ಪಂಚಾಕ್ಷರಯ್ಯ ತೋಗರ್ಸಿಮಳೆಮಠ, ಆರ್.ಎಸ್.ಆರಾಧ್ಯಮಠ, ದೇವೇಂದ್ರಪ್ಪ ಬೇಲೂರು, ಉಮೇಶ್ ಗುಂಡಗಟ್ಟಿ, ಪ್ರಭುಲಿಂಗಪ್ಪ ಹಲಗೇರಿ, ಮೃತ್ಯುಂಜಯ ಪಾಟೀಲ, ಜ್ಯೋತಿ ಬಣ್ಣದ, ಚನ್ನವೀರಗೌಡ ಪಾಟೀಲ್, ಗುಡ್ಡಪ್ಪ ಮಾಳಗುಡ್ಡಪ್ಪನವರ, ಚಂದ್ರಶೇಖರ ಮಡಿವಾಳರ, ಸೋಮನಾಥ ಹಿರೇಮಠ, ರಾಚಯ್ಯ ಶಾಸ್ತ್ರಿಗಳು, ಎಂ ಕೆ ಹಾಲಸಿದ್ದಯ್ಯಶಾಸ್ತಿçಗಳು, ಸುನಂದಮ್ಮ ತಿಳುವಳ್ಳಿ, ವಿದ್ಯಾವತಿ ಮಳಿಮಠ, ಗಾಯತ್ರಿ ಕುರುವತ್ತಿ ಮತ್ತಿತರು ಇದ್ದರು.