ಸಾರಾಂಶ
ಕನ್ನಡಪ್ರಭ ವಾರ್ತೆ ಸವದತ್ತಿ
ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ಚುನಾವಣೆಯನ್ನು ಪಕ್ಷಾತೀತ ಮತ್ತು ಜ್ಯಾತ್ಯಾತೀತವಾಗಿ ಸಹಕಾರ ತತ್ವದಡಿಯಲ್ಲಿ ಮಾಡಲಾಗುತ್ತಿದ್ದು, ಸವದತ್ತಿ ಭಾಗದ ಪಿಕೆಪಿಎಸ್ ಅಭ್ಯರ್ಥಿಯನ್ನಾಗಿ ವಿರುಪಾಕ್ಷ ಮಾಮನಿಯವರನ್ನು ಎಲ್ಲರ ಸಹಮತದೊಂದಿಗೆ ನಮ್ಮ ಪೆನಲ್‌ನ ಅಭ್ಯರ್ಥಿಯನ್ನಾಗಿ ಮಾಡಲಾಗುತ್ತಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.ಪಟ್ಟಣದ ಎಪಿಎಂಸಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.೧೯ರಂದು ನಡೆಯುವ ಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ಸತೀಶ ಜಾರಕಿಹೊಳಿ, ಪ್ರಭಾಕರ ಕೋರೆ, ರಮೇಶ ಜಾರಕಿಹೊಳಿ, ಅಣ್ಣಾಸಾಬ ಜೊಲ್ಲೆ, ಲಕ್ಷ್ಮಣ ಸವದಿಯವರೆಲ್ಲರೂ ಸೇರಿ ಒಂದು ಗ್ರುಪ್ ಮಾಡಿ ಪ್ರಚಾರವನ್ನು ಆರಂಭಿಸಲಾಗಿದೆ ಎಂದರು. ₹೮ ಸಾವಿರ ಕೋಟಿ ಠೇವಣಿ ಹೊಂದಿರುವ ಈ ಬ್ಯಾಂಕಿನಿಂದ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ₹೩,೪೦೦ ಕೋಟಿಗಳಷ್ಟು ಸಾಲವನ್ನು ನೀಡಲಾಗಿದ್ದು, ಬರುವಂತ ದಿನಗಳಲ್ಲಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದರು.ಯರಗಟ್ಟಿ ಸೇರಿದಂತೆ ಇನ್ನೂ ಕೆಲವು ಕಡೆಗೆ ಅಭ್ಯರ್ಥಿಗಳನ್ನು ನಿಲ್ಲಿಸುವ ವಿಚಾರ ಇನ್ನೂ ತೀರ್ಮಾನವಾಗಿಲ್ಲ. ಆಯಾ ಸಂದರ್ಭವನ್ನು ನೋಡಿಕೊಂಡು ಅಭ್ಯರ್ಥಿಗಳ ಘೋಷಣೆ ಮಾಡಲಾಗುವುದು. ಅಥಣಿ, ಕಾಗವಾಡ, ಹುಕ್ಕೇರಿ ಮತ್ತು ಚಿಕ್ಕೋಡಿಯಲ್ಲಿ ಚುನಾವಣೆ ಮಾಡುವ ವಿಚಾರವನ್ನು ಇನ್ನು ಮಾಡಿಲ್ಲ. ಚಿಕ್ಕೋಡಿ ಭಾಗದಲ್ಲಿ ಸತೀಶ ಜಾರಕಿಹೊಳಿ, ಪ್ರಭಾಕರ ಕೋರೆ ಮತ್ತು ಪ್ರಕಾಶ ಹುಕ್ಕೇರಿಯವರು ನಿರ್ಣಯದಂತೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುವುದು ಎಂದರು. ಮುಖಂಡ ವಿರುಪಾಕ್ಷ ಮಾಮನಿ ಮಾತನಾಡಿ, ಬಿಡಿಸಿಸಿ ಬ್ಯಾಂಕಿನ ಚುನಾವಣಾ ಅಭ್ಯರ್ಥಿಯನ್ನಾಗಿ ನನ್ನನ್ನು ಗುರುತಿಸಲಾಗಿದ್ದು, ಎಲ್ಲರ ಸಹಕಾರ ನನಗೆ ಅವಶ್ಯವಾಗಿದೆ. ರೈತರ ಆರ್ಥಿಕ ಅಭಿವೃದ್ಧಿಗೊಸ್ಕರ ಡಿಸಿಸಿ ಬ್ಯಾಂಕಿನ ನಿರ್ದೇಶಕನಾಗಿ ಪ್ರಾಮಾಣಿಕವಾದ ಸೇವೆ ಮಾಡುವ ಗುರಿ ಹೊಂದಲಾಗಿದೆ ಎಂದರು.ಮಾಜಿ ಶಾಸಕ ಮಹಾಂತೇಶ ದೊಡಗೌಡ್ರ, ರಾಜು ಅಂಕಲಗಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಬ ಕುಲಗೋಡ, ರತ್ನಾ ಆನಂದ ಮಾಮನಿ, ಜಗದೀಶ ಶಿಂತ್ರಿ, ಬಿ.ವಿ.ಮಲಗೌಡ್ರ, ಬಸವರಾಜ ಕಾರದಗಿ, ಸಿ.ಬಿ.ದೊಡಗೌಡ್ರ, ಜಗದೀಶ ಕೌಜಗೇರಿ ಇತರರು ಉಪಸ್ಥಿತರಿದ್ದರು. ಬಸವರಾಜ ಪುಟ್ಟಿ ನಿರೂಪಿಸಿ, ವಂದಿಸಿದರು.ಸವದತ್ತಿ ಭಾಗದ ಪಿಕೆಪಿಎಸ್ ಅಭ್ಯರ್ಥಿಯಾಗಿರುವ ವಿರುಪಾಕ್ಷ ಮಾಮನಿಯವರಿಗೆ ನಮ್ಮೆಲ್ಲರ ಸಂಪೂರ್ಣ ಬೆಂಬಲವಿದ್ದು, ಎಲ್ಲರೂ ಸಹಕಾರ ನೀಡಬೇಕು. ಚುನಾವಣೆಯ ಸಂದರ್ಭದಲ್ಲಿ ಅನೇಕ ಉಹಾಪೋಹಗಳು ಕಂಡು ಬರುತ್ತಿದ್ದು, ಅವುಗಳತ್ತ ಗಮನ ಹರಿಸದೇ ರಾಜ್ಯದಲ್ಲಿಯೇ ಅತಿ ದೊಡ್ಡದಾಗಿರುವ ಬಿಡಿಸಿಸಿ ಬ್ಯಾಂಕಿನ ಅಭಿವೃದ್ಧಿಗೊಸ್ಕರ ಎಲ್ಲ ಮುಖಂಡರೆಲ್ಲ ಸೇರಿಕೊಂಡು ಒಂದು ತೀರ್ಮಾನಕ್ಕೆ ಬರಲಾಗಿದೆ.
-ಬಾಲಚಂದ್ರ ಜಾರಕಿಹೊಳಿ, ಶಾಸಕರು.ಬಿಡಿಸಿಸಿ ಬ್ಯಾಂಕಿನ ಚುನಾವಣಾ ಅಭ್ಯರ್ಥಿಯನ್ನಾಗಿ ನನ್ನನ್ನು ಗುರುತಿಸಲಾಗಿದ್ದು, ಎಲ್ಲರ ಸಹಕಾರ ನನಗೆ ಅವಶ್ಯವಾಗಿದೆ. ರೈತರ ಆರ್ಥಿಕ ಅಭಿವೃದ್ಧಿಗೊಸ್ಕರ ಡಿಸಿಸಿ ಬ್ಯಾಂಕಿನ ನಿರ್ದೇಶಕನಾಗಿ ಪ್ರಾಮಾಣಿಕವಾದ ಸೇವೆ ಮಾಡುವ ಗುರಿ ಹೊಂದಲಾಗಿದೆ.
-ವಿರುಪಾಕ್ಷ ಮಾಮನಿ, ಮುಖಂಡರು.