ಹಿಂದೂ ರಾಷ್ಟ್ರ ನಿರ್ಮಾಣವೇ ನಮ್ಮ ಗುರಿ: ಸಂಸದ ಅನಂತಕುಮಾರ ಹೆಗಡೆ

| Published : Jan 21 2024, 01:30 AM IST / Updated: Jan 21 2024, 01:31 AM IST

ಹಿಂದೂ ರಾಷ್ಟ್ರ ನಿರ್ಮಾಣವೇ ನಮ್ಮ ಗುರಿ: ಸಂಸದ ಅನಂತಕುಮಾರ ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ದೇಶಕ್ಕೆ ಈಗ ಬಿಜೆಪಿ ಬೇಕಾಗಿದೆ. ನರೇಂದ್ರ ಮೋದಿ ಅವರ ನೇತೃತ್ವದ ಎರಡು ಅವಧಿಯ ಸರ್ಕಾರ ಉತ್ತಮ ಪರಿಣಾಮ ನೀಡಿದೆ. ಅಂತಿಮ ಗೆಲುವಿನವರೆಗೂ ನಾವೇ ಗೆಲ್ಲುತ್ತಿರಬೇಕು.

ಶಿರಸಿ:

ಹಿಂದೂ ರಾಷ್ಟ್ರ ನಿರ್ಮಾಣವೇ ನಮ್ಮ ಗೆಲುವಿನ ಉದ್ದೇಶ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.ಇಲ್ಲಿನ ಕಾನಸೂರಿನಲ್ಲಿ ಶನಿವಾರ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.ದೇಶಕ್ಕೆ ಈಗ ಬಿಜೆಪಿ ಬೇಕಾಗಿದೆ. ನರೇಂದ್ರ ಮೋದಿ ಅವರ ನೇತೃತ್ವದ ಎರಡು ಅವಧಿಯ ಸರ್ಕಾರ ಉತ್ತಮ ಪರಿಣಾಮ ನೀಡಿದೆ. ಅಂತಿಮ ಗೆಲುವಿನವರೆಗೂ ನಾವೇ ಗೆಲ್ಲುತ್ತಿರಬೇಕು. ದೆಹಲಿ ಸಿಂಹಾಸನ, ಖುರ್ಚಿ ನಮ್ಮ ಉದ್ದೇಶವಲ್ಲ. ಹಿಂದೂ ರಾಷ್ಟ್ರ ನಿರ್ಮಾಣವಾದರೆ ಜಾತಿ, ಧರ್ಮದ ಸಮಸ್ಯೆ, ವ್ಯವಸ್ಥೆಯೂ ಸರಿ ಹೋಗಲಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಹತ್ತು ವರ್ಷಗಳಲ್ಲಿಯೇ ದೇಶದ ಆರ್ಥಿಕತೆ ಸುಧಾರಿಸಿದೆ ಎಂದರು.ಲಾಲ್ ಬಹಾದ್ದೂರ ಶಾಸ್ತ್ರಿ ಹತ್ಯೆ ಆದ ಕೇವಲ 15 ದಿನಗಳಲ್ಲಿ ಹೋಮಿ ಜಹಾಂಗೀರ್ ಬಾಬಾ, ಸಾರಾಬಾಯಿ ಅವರ ಕೊಲೆ ಆಗಿದೆ. ಇದಾವುದೂ ಸಹಜ ಸಾವಲ್ಲ. ಮುಂದಿನ ದಿನಗಳಲ್ಲಿ ಆತಂಕಕಾರಿ ಘಟನೆಗಳು ಸರಣಿಯಾಗಿ ನಡೆದಿವೆ. ಈ ದೇಶವನ್ನು ಸಂಪೂರ್ಣವಾಗಿ ಮುಗಿಸಲು ಸರಣಿ ಪ್ರಕ್ರಿಯೆ ನಡೆದಿವೆ ಎಂದು ಇತಿಹಾಸ ಕೆದಕಿದರು.2014ರ ಬಳಿಕ ಈ ಪ್ರಕ್ರಿಯೆಗಳಿಗೆಲ್ಲ ತೊಂದರೆ ಉಂಟಾಗಿದೆ. ಅದುವರೆಗೂ ನಮ್ಮ ಪ್ರಧಾನಿ, ಸರ್ಕಾರ ನಮ್ಮ ದೇಶದ ಕಂಟ್ರೋಲ್‌ನಲ್ಲಿ ಇರಲಿಲ್ಲ. ದೇಶದ ಪರಿಸ್ಥಿತಿಯ ಅಂತರಾಳ ಯಾರಿಗೂ ಗೊತ್ತಾಗುತ್ತಿರಲಿಲ್ಲ. 2014ರಲ್ಲಿ ರಾಷ್ಟ್ರೀಯ ಸರ್ಕಾರ ಬಂದು ಎಲ್ಲ ಚಟುವಟಿಕೆಗೆ ತೆರೆ ಬಿದ್ದಿದೆ. ಸರ್ಕಾರ ಯಾವುದೇ ಇರಲಿ, ರಾಷ್ಟ್ರೀಯತೆಯಲ್ಲಿ ಎಂದಿಗೂ ಹೊಂದಾಣಿಕೆ ಆಗಬಾರದು. ದೇಶ ಆರ್ಥಿಕವಾಗಿ ಸುಭದ್ರವಾಗಬೇಕು ಎಂದ ಸಂಸದರು, ರಾಜ್ಯದ ಬಿಜೆಪಿಯಲ್ಲಿ ಸ್ವಲ್ಪ ಹಿನ್ನಡೆ ಆಗಿದ್ದು ನಿಜ, ಈಗ ಅದನ್ನೆಲ್ಲ ತುಂಬಿಕೊಂಡು ಮುನ್ನಡೆಯಿಡಬೇಕಿದೆ. ರಾಜ್ಯದಲ್ಲಿ ದುರಹಂಕಾರಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ನಮ್ಮವರ ಮೇಲೆ ಅನ್ಯಾಯ ಜಾಸ್ತಿ ಆಗಿದೆ. ಯಾರು ಎಷ್ಟೇ ಕೂಗಾಡಿದರೂ ಈ ಅನ್ಯಾಯ ನಿಲ್ಲಿಸುವ, ಸರಿಪಡಿಸುವ ಶಕ್ತಿಯನ್ನು ಭಗವಂತ ನಮಗೆ ನೀಡಿದ್ದಾನೆ ಎಂದರು.ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷ ಬೇಕು, ಆದರೆ ಅದೊಂದು ಒಳ್ಳೆಯ ವಿರೋಧ ಪಕ್ಷ ಆಗಿರಬೇಕೇ ಹೊರತೂ ದೇಶದ್ರೋಹಿ ಪಕ್ಷವಾಗಿರಬಾರದು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಿಂದಿನ ಎಲ್ಲ ದಾಖಲೆಗಳನ್ನು ಮೀರಿದ ವಿಜಯ ಪಡೆಯುವ ಜತೆ ವಿರೋಧಿಗಳನ್ನು ನೆಲ ಕಚ್ಚಿಸಬೇಕಾಗಿದೆ ಎಂದು ಹೇಳಿದರು.

ಕಳೆದ ಎರಡು ವರ್ಷಗಳಿಂದ ನಾನು ಕ್ಷೇತ್ರದಲ್ಲಿ ಓಡಾಟ ಕಡಿಮೆ ಮಾಡಿದ್ದೆ. ಕನಸು ಕಾಣುವವರು, ಭ್ರಮೆಯಲ್ಲಿ ಇರುವವರು ನಮ್ಮ ಕ್ಷೇತ್ರದಲ್ಲಿ ಜಾಸ್ತಿ ಇದ್ದಾರೆ. ಭಗವಂತನ ಇಚ್ಛೆಯಂತೆ ಆಗುತ್ತದೆ. ಕ್ಷೇತ್ರದಲ್ಲಿ ಬಿಜೆಪಿ ಮತ್ತೊಮ್ಮೆ ಜಯಭೇರಿ ಬಾರಿಸಲಿದೆ ಎಂದು ಹೆಗಡೆ ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಪ್ರಮುಖ ಕೆ.ಜಿ. ನಾಯ್ಕ ಮಾತನಾಡಿ, ಅನಂತಕುಮಾರ ಹೆಗಡೆ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿಲ್ಲ ಎಂಬುದಿತ್ತು. ನಾವು ಅವರನ್ನು ಭೇಟಿ ಮಾಡಿ ವಿನಂತಿ ಮಾಡಿದ್ದೆವು. ರಾಷ್ಟ್ರೀಯ ಭದ್ರತೆ ಬಗ್ಗೆ ನಾವು ಮೊದಲ ಆದ್ಯತೆ ನೀಡಬೇಕು. ನಮ್ಮ ದೇಶದಲ್ಲಿ ಹೊರಗಡೆಗಿಂತ ಒಳಗಡೆಯೇ ಶತ್ರುಗಳು ಜಾಸ್ತಿ ಇದ್ದಾರೆ. ಹೀಗಾಗಿ ವಿಶ್ವದ ನಾಯಕನಾದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇನ್ನೊಮ್ನೆ ಆರಿಸುವ ಗಟ್ಟಿ ನಿಲುವವನ್ನು ತೆಗೆದುಕೊಳ್ಳಬೇಕು ಎಂದರು.

ನಾಗರಾಜ ನಾಯ್ಕ, ಚಂದ್ರು ಎಸಳೆ, ಎಸ್ ಕೆ ಮೇಸ್ತಾ, ಪ್ರಸನ್ನ ಹೆಗಡೆ ಇತರರಿದ್ದರು.