ಸಾರಾಂಶ
ಬಡವರು, ಮಧ್ಯಮ ವರ್ಗ ಜನತೆ, ಶ್ರಮಿಕರು, ಸ್ವ- ಉದ್ಯೋಗಿಗಳು ಆರ್ಥಿಕವಾಗಿ ಪ್ರಗತಿ ಹೊಂದಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅನೇಕ ಯೋಜನೆಗಳು ಪೂರಕವಾಗಿದ್ದು, ಜನತೆ ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹಿರಿಯ ಮುಖಂಡ ಅಶೋಕ ನವಲಗುಂದ ಹೇಳಿದರು.
ರೋಣ: ಬಡವರು, ಮಧ್ಯಮ ವರ್ಗ ಜನತೆ, ಶ್ರಮಿಕರು, ಸ್ವ- ಉದ್ಯೋಗಿಗಳು ಆರ್ಥಿಕವಾಗಿ ಪ್ರಗತಿ ಹೊಂದಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅನೇಕ ಯೋಜನೆಗಳು ಪೂರಕವಾಗಿದ್ದು, ಜನತೆ ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹಿರಿಯ ಮುಖಂಡ ಅಶೋಕ ನವಲಗುಂದ ಹೇಳಿದರು. ಅವರು ಪಟ್ಟಣದ ಕೆ.ಎಸ್.ಆರ್.ಟಿ.ಸಿ. ಸಮೀಪ ಹಳೇ ಘಟಕ ಆವರಣದಲ್ಲಿ ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ, ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ವತಿಯಿಂದ ಜರುಗಿದ ಕೇಂದ್ರ ಸರ್ಕಾರದ ವಿವಿಧ ಯೋಜನೆ ಹಾಗೂ ವಿಕಸಿತ್ ಭಾರತ ಸಂಕಲ್ಪ ಯಾತ್ರಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಸದೃಢ ಭಾರತ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸಂಕಲ್ಪ ತೊಟ್ಡಿದ್ದು, ಈ ದಿಶೆಯಲ್ಲಿ ದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾಗುವಂತೆ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಭಾರತ ದೇಶದ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಪ್ರತಿಯೊಬ್ಬರು ಆರ್ಥಿಕವಾಗಿ ಸಬಲರಾಗಬೇಕು, ಸ್ವಾವಲಂಬನೆ ಬದುಕು ಸಾಗಿಸಬೇಕು ಎಂಬ ಸದುದ್ದೇಶದಿಂದ ಪಿಎಂ ಜೆಡಿಯು, ಪಿಎಂ ಜೆಜೆಪಿವೈ, ಎಪಿವೈ, ಮುದ್ರಾ, ಸ್ಟ್ಯಾಂಡ್ ಅಫ್ ಇಂಡಿಯಾ, ಪಿಎಂ ಸ್ವನಿಧಿ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಬಹುತೇಕ ಯೋಜನೆಗಳು ರಿಯಾಯಿತಿಯಲ್ಲಿ ಸಾಲ ಸೌಲಭ್ಯ ಒದಗಿಸಲಾಗುವದು. ರಾಷ್ಟ್ರೀಕೃತ ಬ್ಯಾಂಕಗಳ ಮೂಲಕ ಆರ್ಥಿಕ ನೆರವು ನೀಡಲಾಗುವದು. ಸ್ವ- ಉದ್ಯೋಗಕ್ಕಾಗಿ ಇವುಗಳ ಸೌಲಭ್ಯ ಪಡೆಯಬೇಕು ಎಂದರು. ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ತಪಾಸಣೆ, ಔಷಧೋಪಚಾರ ಶಿಬಿರ ಜರುಗಿತು. ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ, ಕೆನರಾ ಬ್ಯಾಂಕ್, ಗ್ರಾಮೀಣ ವಿಕಾಸ ಬ್ಯಾಂಕ್ ವತಿಯಿಂದ ಕೇಂದ್ರ ಸರ್ಕಾರದ ಯೋಜನೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಧನೆ ಗೈದ ಪ್ಯಾರಾ ಕ್ರೀಡಾಪಟು ಶಿವು ಕುಂಬಾರ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ. ಹಾದಿಮನಿ, ಸುಬ್ಬರಾಜ ಶುಕ್ಲಾ, ಡಿ.ಎಸ್. ಕೋಳಿವಾಡ, ಶಿವಾನಂದ ಜಿಡ್ಡಿಬಾಗಿಲ, ಮಂಜು ಕೊಪ್ಪದ, ಭರಮಗೌಡ ಲಿಂಗನಗೌಡ್ರ, ಅನೀಲ ಪಲ್ಲೇದ, ಬಸವರಾಜ ಕೊಟಗಿ ಮುಂತಾದವರು ಉಪಸ್ಥಿತರಿದ್ದರು.