ಕನ್ನಡದ ಜೊತೆ ಜೊತೆಗೆ ತೆಲುಗು, ಉರ್ದು ಮಿಶ್ರಿತ ಹಿಂದಿ ಭಾಷೆಗಳನ್ನಾಡುವ, ತೆಲಂಗಾಣ, ಆಂಧ್ರಪ್ರದೇಶದ ಗಡಿಯನ್ನು ಹಂಚಿಕೊಂಡಿರುವ ಜಿಲ್ಲಾ ಕೇಂದ್ರವಾದ ರಾಯಚೂರು ನಗರದಲ್ಲಿ ಸುಮಾರು 29 ವರ್ಷಗಳ ನಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಸ್ಥಳೀಯ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನ.14 ಮತ್ತು 15 ರಂದು ನಡೆಯಲಿರುವ ಅಕ್ಷರ ಹಬ್ಬಕ್ಕೆ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಕನ್ನಡಪ್ರಭ ವಾರ್ತೆ ರಾಯಚೂರು
ಕನ್ನಡದ ಜೊತೆ ಜೊತೆಗೆ ತೆಲುಗು, ಉರ್ದು ಮಿಶ್ರಿತ ಹಿಂದಿ ಭಾಷೆಗಳನ್ನಾಡುವ, ತೆಲಂಗಾಣ, ಆಂಧ್ರಪ್ರದೇಶದ ಗಡಿಯನ್ನು ಹಂಚಿಕೊಂಡಿರುವ ಜಿಲ್ಲಾ ಕೇಂದ್ರವಾದ ರಾಯಚೂರು ನಗರದಲ್ಲಿ ಸುಮಾರು 29 ವರ್ಷಗಳ ನಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಸ್ಥಳೀಯ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನ.14 ಮತ್ತು 15 ರಂದು ನಡೆಯಲಿರುವ ಅಕ್ಷರ ಹಬ್ಬಕ್ಕೆ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.ಸಾಹಿತಿ, ಶಿಕ್ಷಣ ತಜ್ಞ ರಾಮಣ್ಣ ಹವಳೆ ಅವರ ಸಮ್ಮೇಳನಾಧ್ಯಕ್ಷರಾಗಿರುವ ರಾಯಚೂರು ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನವು ಎರಡು ದಿನಗಳ ಕಾಲ ನಡೆಯಲಿದ್ದು ಅದಕ್ಕಾಗಿ ಕೈಗೊಂಡಿರುವ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದ ಸ್ವಾಗತ ಸಮಿತಿಯ ಸದಸ್ಯರು, ಅಧಿಕಾರಿ, ಸಿಬ್ಬಂದಿ, ಮುಖಂಡರು ಬ್ಯಾನರ್ ಬಂಟ್ಟಿಗ್ಸ್, ವೇದಿಕೆ, ಅಡುಗೆ, ಪ್ರಮುಖ ರಸ್ತೆ, ವೃತ್ತ, ಐತಿಹಾಸಿಕ ಕೋಟೆ-ಕಚೇರಿಗಳಲ್ಲಿ ದೀಪದಾಲಂಕಾರ, ಕನ್ನಡ ಬಾವುಟ ಕಟ್ಟುವುದು ಸೇರಿ ವಿವಿಧ ಕಾರ್ಮಿಕರು ಕನ್ನಡ ದೊಂದಿಗೆ ತೆಲುಗು ಹಾಗೂ ಹಿಂದಿ ಭಾಷೆಗಳನ್ನಾಡುತ್ತಾ ಪ್ರತ್ಯೇಕ್ಷ ಹಾಗೂ ಪರೋಕ್ಷವಾಗಿ ಕನ್ನಡ ಸೇವೆಯು ‘అక్కడ- ఇక్కడ ఎక్కడైన మన కన్నడ’’(ಅಲ್ಲಿ-ಇಲ್ಲಿ ಎಲ್ಲಿಯಾದರು ನಮ್ಮ ಕನ್ನಡ), ‘अंदर बाहर हमारा कन्नड़ को जोहार’ (ಒಳಗೆ-ಹೊರಗೆ ನಮ್ಮ ಕನ್ನಡ ಕೋ ಜೋಹಾರ್) ಎನ್ನುವ ಘೋಷವಾಕ್ಯಗಳ ಸಂದೇಶದ ಜೊತೆಗೆ ನಾವು ತೆಲುಗು - ಹಿಂದಿ ಮಾತನಾಡಿದರೂ ನಮ್ಮ ಮನದಲ್ಲಿ ಕನ್ನಡವೇ ಸತ್ಯ-ಕನ್ನಡವೇ ನಿತ್ಯದ ನಿನಾದವೇ ಎಂಬ ಸತ್ಯ ಸಾರುತ್ತಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ರಾಯಚೂರು ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸದ್ಗುರು ವಿದ್ಯಾನಂದ ಶರಣರು ಡಬ್ಬೇರುಮಡುವು ಅವರ ಹೆಸರಿನ ವೇದಿಕೆ, ಪ್ರೊ.ಶಾಶ್ವತ ಸ್ವಾಮಿ ಮುಕ್ಕುಂದಿಮಠ ಅವರ ಮಹಾ ಮಂಟಪ ಹಾಗೂ ವಿ.ಎಸ್.ಕಾಂತನವರ ಅವರ ಮಹಾದ್ವಾರ ಮಾಡಲಾಗಿದ್ದು, ಇದರೊಟ್ಟಿಗೆ ಡಾ.ರಾಜಶೇಖರ ನೀರಮಾನ್ವಿ, ಡಾ.ಎಚ್.ಚಂದ್ರಶೇಖರ, ಜಿ.ಸುರೇಶ ಹಾಗೂ ಜಿ.ವಿ.ಶರ್ಮಾ ಅವರ ದ್ವಾರಗಳನ್ನು ರೂಪಿಸಲಾಗಿದೆ.ಎರಡು ದಿನಗಳ ಸಮ್ಮೇಳನದಲ್ಲಿ ಧ್ವಜಾರೋಹಣ, ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಉದ್ಘಾಟನಾ ಸಮಾರಂಭ,ಚಿತ್ರಕಲಾ ಪ್ರದರ್ಶನ,ವಾಣಿಜ್ಯ ಮಳಿಗೆಗಳ ಉದ್ಘಾಟನೆ, ಆದಿ ಅಮಾತೆಪ್ಪನವರ ಕೃತಿಗಳ ಬಿಡುಗಡೆ ಜೊತೆಗೆ ವಿವಿಧ ವಿಚಾರಗಳ 5 ಗೋಷ್ಠಿಗಳು,ತಲಾ 2 ಕವಿಗೋಷ್ಠಿ, ವಿಶೇಷ ಉಪನ್ಯಾಸ,ಸಾಂಸ್ಖೃತಿಕ ಕಾರ್ಯಕ್ರಮಗಳು, ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಬಹಿರಂಗ ಅಧಿವೇಶನ ಹಾಗೂ ಸಮಾರೋಪ ಮತ್ತು ಸನ್ಮಾನ ಸಮಾರಂಭಗಳನ್ನು ಆಯೋಜಿಸಲಾಗಿದೆ.
ನ.14 ಶನಿವಾರ ಬೆಳಗ್ಗೆ ರಾಷ್ಟ್ರಧ್ವಜವನ್ನು ಎನ್.ಎಸ್.ಬೋಸರಾಜು ಅವರು ನೆರವೇರಿಸಲಿದ್ದು, ನಗರದ ಮಹಿಳಾ ಸಮಾಜ ದಿಂದ ರಂಗಮಂದಿರ ತನಕ ನಡೆಯಲಿರುವ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಡಿಸಿ ಪೂವಿತಾ ಎಸ್ ಅವರು ಚಾಲನೆ ನೀಡಲಿದ್ದಾರೆ. ಸಮ್ಮೇಳನವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಲಿದ್ದು, ಆ.ಶ್ರೀ.ಮ.ವಾ. ವಿವಿ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಉಸ್ತುವಾರಿ ಸಚಿವ ಡಾ.ಅಜಯ್ ಧರಂ ಸಿಂಗ್, ಶಾಸಕರು, ಎಂಎಲ್ಸಿಗಳು, ಸಂಸದರು, ಅಧಿಕಾರಿಗಳು, ಕಸಾಪದ ಪದಾಧಿಕಾರಿಗಳು ಸೇರಿ ಅನೇಕರು ಭಾಗವಹಿಸಲಿದ್ದಾರೆ.ಮೊದಲ ಗೋಷ್ಠಿಯಲ್ಲಿ ಜಿಲ್ಲಾ ದರ್ಶನ ವಿಚಾರ, ಎರಡನೇ ಗೋಷ್ಠಿಯಲ್ಲಿ ಶೈಕ್ಷಣಿಕ ವ್ಯವಸ್ಥೆ ಮತ್ತು ಸವಾಲುಗಳು ನಂತರ ಮಹಿಳಾ ಸಶಕ್ತೀಕರಣದಲ್ಲಿ ಸಾಹಿತ್ಯ ಮತ್ತು ಆಧ್ಯಾತ್ಮಿಕತೆ ವಿಷಯದ ಕುರಿತು ವಿಶೇಷ ಉಪನ್ಯಾಸ ಹಾಗೂ ಮೂರನೇ ಗೋಷ್ಠಿಯಾಗಿ ಮಹಿಳಾ ಕವಿಗೋಷ್ಠಿ ಬಳಿಕ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಸಮ್ಮೇಳನದ ಎರಡನೇ ದಿನವಾರ 15ಕ್ಕೆ 4ನೇ ಗೋಷ್ಠಿಯಲ್ಲಿ ಸಮ್ಮೇಳನಾಧ್ಯಕ್ಷರ ಬದುಕು ಬರಹ,ಮಕ್ಕಳ ಸಾಹಿfಯದಲ್ಲಿ ಪರಿಸರ ಪ್ರಜ್ಞೆ ವಿಷಯ ವಿಶೇಷ ಉಪನ್ಯಾಸ, 5 ನೇ ಗೋಷ್ಠಿಯಲ್ಲಿ ಸಂಕೀರ್ಣ,6 ನೇ ಗೋಷ್ಠಿಯಲ್ಲಿ ಸಮ ಸಮಾಜ ಸಾರಿದ ದಾರ್ಶನಿಕರ ಕುರಿತು ಸಮಾಲೋಚನೆ ಮತ್ತು 7ನೇ ಗೋಷ್ಠಿಯಾಗಿ ಕವಿಗೋಷ್ಠಿಯನ್ನು ನಡೆಲಸಾಗುತ್ತಿದೆ. ನಂತರ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಬಹಿರಂಗ ಅಧಿವೇಶನ ಜರುಗಲಿದ್ದು, ಸಂಜೆ ಸಮಾರೋಪ ಹಾಗೂ ಸನ್ಮಾನ ಸಮಾರಂಭವು ನಡೆಯಲಿದೆ.---
13ಕೆಪಿಆರ್ಸಿಆರ್ 01: ರಾಯಚೂರು ಜಿಲ್ಲಾ 12 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ13ಕೆಪಿಆರ್ಸಿಆರ್ 02: ಸಮ್ಮೇಳನಾಧ್ಯಕ್ಷ ರಾಮಣ್ಣ ಹವಳೆ