ನಮ್ಮ, ಭೂಮಿ ಆರೋಗ್ಯ ರಕ್ಷಣೆ ಅನಿವಾರ್ಯ: ರೈತ ದಸರಾದಲ್ಲಿ ಹೊನ್ನೂರು ಪ್ರಕಾಶ್ ಮಾತು
KannadaprabhaNewsNetwork | Published : Oct 20 2023, 01:00 AM IST
ನಮ್ಮ, ಭೂಮಿ ಆರೋಗ್ಯ ರಕ್ಷಣೆ ಅನಿವಾರ್ಯ: ರೈತ ದಸರಾದಲ್ಲಿ ಹೊನ್ನೂರು ಪ್ರಕಾಶ್ ಮಾತು
ಸಾರಾಂಶ
ನಮ್ಮ ಹಾಗೂ ಭೂಮಿಯ ಆರೋಗ್ಯ ಮುಖ್ಯವಾದುದು ಎಂದು ರೈತ ಮುಖಂಡ ಹೊನ್ನೂರು ಪ್ರಕಾಶ್ ಹೇಳಿದರು. ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ಚಾಮರಾಜನಗರ ರೈತ ದಸರಾ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು
ಸಾವಯವ ಕೃಷಿಗೆ ಒತ್ತು । ಬೆಳೆಗಳಿಗೆ ನಮ್ಮದೇ ಮಾರುಕಟ್ಟೆ ಅಗತ್ಯ ಕನ್ನಡಪ್ರಭ ವಾರ್ತೆ ಚಾಮರಾಜನಗರ ಅತಿಯಾದ ರಾಸಾಯನಿಕ ಗೊಬ್ಬರ, ಕ್ರಿಮಿ ನಾಶಕಗಳ ಬಳಕೆಯಿಂದಾಗಿ ಕೃಷಿ ಭೂಮಿಯಲ್ಲಿ ಸಾವಯವ ಇಂಗಾಲ ಕಡಿಮೆಯಾಗುತ್ತಿದ್ದು ಇದೇ ರೀತಿ ಮುಂದುವರಿದರೆ ಮುಂದೆ ಆಹಾರಕ್ಕೆ ಹಾಹಾಕಾರ ಉಂಟಾಗುತ್ತದೆ. ಆದ್ದರಿಂದ ನಮ್ಮ ಹಾಗೂ ಭೂಮಿಯ ಆರೋಗ್ಯ ಮುಖ್ಯವಾದುದು ಎಂದು ರೈತ ಮುಖಂಡ ಹೊನ್ನೂರು ಪ್ರಕಾಶ್ ಹೇಳಿದರು. ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ಚಾಮರಾಜನಗರ ರೈತ ದಸರಾ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃಷಿ ಭೂಮಿಯಲ್ಲಿ ಕನಿಷ್ಠ 1.5 ಸಾವಯವ ಇಂಗಾಲ ಇರಬೇಕು. ಆದರೆ ಪ್ರಸ್ತುತ 0.1 ಮಾತ್ರ ಇದೆ. ಇದಕ್ಕೆ ನಾವು ಸಾವಯವ ಕೃಷಿ ಕೈ ಬಿಟ್ಟಿರುವುದೇ ಕಾರಣ ಎಂದರು. ನಮ್ಮ ಆರೋಗ್ಯ ಮತ್ತು ಭೂಮಿ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಚಿಂತಿಸಬೇಕಾಗಿದ್ದು, ಸಾವಯವ ಕೃಷಿಗೆ ಒತ್ತು ಕೊಡುವುದರ ಜತೆ, ಬೆಳೆಗಳಿಗೆ ನಮ್ಮದೇ ಮಾರುಕಟ್ಟೆಯಾಗಬೇಕು, ಇಂದು ಕೇಂದ್ರ ಸರ್ಕಾರ ಕೃಷಿ ಉತ್ಪನ್ನಗಳ ಘಟಕಳಿಗೆ ಶೇ. ೫೦ ಸಬ್ಸಿಡಿ ನೀಡುತ್ತಿದ್ದು, ಮಹಿಳಾ ಸಂಘಗಳು ಮುಂದೆ ಇದರ ಸದುಪಯೋಗಪಡಿಸಿಕೊಳ್ಳಬೇಕು, ನಮ್ಮದೇ ನೇರ ಮಾರುಕಟ್ಟೆಯಾದಾಗ ನಾವು ಅಭಿವೃದ್ಧಿಯಾಗುವುದರ ಜತೆಗೆ ಆತ್ಮಹತ್ಯೆಗಳನ್ನು ತಡೆಯಬಹುದು ಎಂದರು. ಜಂಟಿ ಕೃಷಿ ನಿರ್ದೇಶಕ ಅಬೀಬ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶಿವಪ್ರಸಾದ್, ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಗಿರೀಶ್, ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಂಜೇಶ್, ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ ಹನುಮೇಗೌಡ, ಮೈಸೂರು-ಚಾಮರಾಜನಗರ ಕೃಷಿ ಪರಿಕರ ಮಾರಾಟ ಸಂಘದ ಉಪಾಧ್ಯಕ್ಷ ಯೋಗರಾಜ್, ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ನಾಗರಾಜು, ಪಶು ವೈದ್ಯಾಧಿಕಾರಿ ಡಾ. ಸಿಂಧು ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ವಿವಿಧ ಜಾನಪದ ಕಲಾತಂಡಗಳು ಮತ್ತು ಎತ್ತಿನ ಗಾಡಿಗಳೊಂದಿಗೆ ರೈತರ ದಸರಾ ಮೆರವಣಿಗೆಗೆ ನಡೆಯಿತು. ಜಿಲ್ಲಾಧಿಕಾರಿ ಶಿಲ್ಪಾನಾಗ್ ಚಾಲನೆ ನೀಡಿದರು, ಸಾವಯವ ಬೆಳೆ ನಮ್ಮ ಪೂರ್ವಿಕರು ಸಾವಯವ ಕೃಷಿಗೆ ಹೆಚ್ಚು ಒತ್ತು ಕೊಟ್ಟಿದ್ದರಿಂದ ಮಳೆ, ಬೆಳೆ ಉತ್ತಮವಾಗಿತ್ತು, ಜತೆಗೆ ಆರೋಗ್ಯವಾಗಿಯೂ ಇದ್ದರು, ಇಂದಿನ ಕಲಬೆರಕೆ ಆಹಾರದಿಂದಾಗಿ ಜನರು ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದಾರೆ, ಆದ್ದರಿಂದ ಕನಿಷ್ಠ ಅರ್ಧ ಎಕರೆಯಲ್ಲಾದರೂ ಸಾವಯವ ಬೆಳೆಗಳನ್ನು ಬೆಳೆಯಬೇಕೆಂದರು. ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಎಡಿಸಿ ಗೀತಾ ಹುಡೇದ ಮಾತನಾಡಿ ರೈತರು ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಸಲಹೆ ನೀಡಿದರು. ರೈತರು ವ್ಯವಸಾಯದೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆಯನ್ನು ಸಹ ಮಾಡುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು. ಅಲ್ಲದೇ ಸರ್ಕಾರವು ಕೃಷಿ, ತೋಟಗಾರಿಕೆ ಸೇರಿದಂತೆ ಇತರೆ ಇಲಾಖೆಗಳ ಮೂಲಕ ರೈತರಿಗೆ ಅನೇಕ ಸವಲತ್ತುಗಳನ್ನು ನೀಡುತ್ತಿದ್ದು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು. ರೈತರಿಗೆ ಸನ್ಮಾನ ಇದೇ ವೇಳೆ ಮುಸುಕಿನ ಜೋಳ ಬೆಳೆಯಲ್ಲಿ ಉತ್ತಮವಾಗಿ ಇಳುವರಿ ಗಳಿಸಿದ್ದ ಜಿಲ್ಲೆಯ ಐದು ಮಂದಿ ರೈತರನ್ನು ಸನ್ಮಾನಿಸಿ ಗೌರವಿಸಲಾಯಿತು. ಚಾಮರಾಜನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ಚಾಮರಾಜನಗರ ರೈತ ದಸರಾ ವೇದಿಕೆ ಕಾರ್ಯಕ್ರಮದಲ್ಲಿ ಮುಸುಕಿನ ಜೋಳ ಬೆಳೆಯಲ್ಲಿ ಉತ್ತಮವಾಗಿ ಇಳುವರಿ ಗಳಿಸಿದ್ದ ಜಿಲ್ಲೆಯ ಐದು ಮಂದಿ ರೈತರನ್ನು ಸನ್ಮಾನಿಸಿ ಗೌರವಿಸಲಾಯಿತು. ಚಾಮರಾಜನಗರದದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ಚಾಮರಾಜನಗರ ರೈತ ದಸರಾ ಅಂಗವಾಗಿ ವಿವಿಧ ಜಾನಪದ ಕಲಾತಂಡಗಳು ಮತ್ತು ಎತ್ತಿನ ಗಾಡಿಗಳೊಂದಿಗೆ ರೈತರ ದಸರಾ ಮೆರವಣಿಗೆಗೆ ನಡೆಯಿತು.