ನಮ್ಮ ಮೆಟ್ರೋ ಪಿಂಕ್ ಲೈನ್‌ನ ಎಲಿವೇಟೆಡ್ ಮಾರ್ಗದಲ್ಲಿ ರೈಲು ಸೇವೆ ಆರಂಭಕ್ಕೂ ಮುನ್ನ ಅಗತ್ಯವಿರುವ ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಶನಿವಾರದಿಂದ ರೈಲ್ವೆ ಇಲಾಖೆಯ ಸಂಶೋಧನಾ ವಿನ್ಯಾಸಗಳು ಮತ್ತು ಮಾನದಂಡಗಳ ಸಂಸ್ಥೆ (ಆರ್‌ಡಿಒಎಸ್) ಅಧಿಕಾರಿಗಳಿಂದ ಪರಿಶೀಲನಾ ಕಾರ್ಯ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಮ್ಮ ಮೆಟ್ರೋ ಪಿಂಕ್ ಲೈನ್‌ನ ಎಲಿವೇಟೆಡ್ ಮಾರ್ಗದಲ್ಲಿ ರೈಲು ಸೇವೆ ಆರಂಭಕ್ಕೂ ಮುನ್ನ ಅಗತ್ಯವಿರುವ ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಶನಿವಾರದಿಂದ ರೈಲ್ವೆ ಇಲಾಖೆಯ ಸಂಶೋಧನಾ ವಿನ್ಯಾಸಗಳು ಮತ್ತು ಮಾನದಂಡಗಳ ಸಂಸ್ಥೆ (ಆರ್‌ಡಿಒಎಸ್) ಅಧಿಕಾರಿಗಳಿಂದ ಪರಿಶೀಲನಾ ಕಾರ್ಯ ನಡೆಯಲಿದೆ.ನಗರದಲ್ಲಿ ಸದ್ಯ 96.10 ಕಿಮೀ ಉದ್ದದ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲು ಸೇವೆ ನೀಡಲಾಗಿದೆ. ಅದರ ಜತೆಗೆ ಇದೀಗ ಕಾಳೇನ ಅಗ್ರಹಾರದಿಂದ ನಾಗವಾರವರೆಗಿನ 21.26 ಕಿಮೀ ಉದ್ದದ ಗುಲಾಬಿ ಮಾರ್ಗ (ಪಿಂಕ್ ಲೈನ್)ದಲ್ಲಿ ಈಗಾಗಲೇ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.50 ಕಿಮೀ ಉದ್ದದ ಎಲಿವೇಟೆಡ್ ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ. ಈ 7.50 ಕಿಮೀ ಉದ್ದದ ಮಾರ್ಗದ ಪರೀಕ್ಷಾ ಕಾರ್ಯಗಳು ನಡೆಯುತ್ತಿದ್ದು, ಮುಂದಿನ ಮೇ ತಿಂಗಳ ಅಂತ್ಯದೊಳಗೆ ಮೆಟ್ರೋ ರೈಲು ಕಾರ್ಯಾಚರಣೆ ಮಾಡಲು ಬಿಎಂಆರ್‌ಸಿಎಲ್ ಗುರಿ ಹೊಂದಿದೆ.
ಅದಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ಕು ಬಾರಿ ರೈಲುಗಳ ಮೂಲಕ ಪರೀಕ್ಷಾ ಕಾರ್ಯವನ್ನು ಕೈಗೊಳ್ಳಲಾಗಿದೆ. ಅದರ ಜತೆಗೆ ಇದೀಗ ಆರ್‌ಡಿಒಎಸ್ ಅಧಿಕಾರಿಗಳು ಮಾರ್ಗದ ರೈಲಿನ ವೇಗ, ಲೋಡ್ ಟೆಸ್ಟ್, ಟ್ರ್ಯಾಕ್ ಟೆಸ್ಟ್, ಸ್ಟೇಷನ್ ತಪಾಸಣೆ, ಪವರ್ ಪರೀಕ್ಷೆಗಳನ್ನು ಆರಂಭಿಸಿದ್ದಾರೆ. ಈ ಪರೀಕ್ಷೆಗಳು ಏ. 5ರವರೆಗೆ ನಡೆಯಲಿದೆ.ಗುಲಾಬಿ ಮಾರ್ಗದಲ್ಲಿ ಡ್ರೈವರ್‌ಲೆಸ್ ರೈಲು: ಮೇ ತಿಂಗಳಲ್ಲಿ ಉದ್ಘಾಟನೆಯಾಗಿಲಿರುವ 7.50 ಕಿಮೀ ಉದ್ದದ ಮಾರ್ಗದಲ್ಲಿ ಒಟ್ಟು 6 ನಿಲ್ದಾಣಗಳು ಬರಲಿವೆ. ಈ ಮಾರ್ಗದಲ್ಲಿ ಒಟ್ಟು 23 ರೈಲುಗಳ ಮೂಲಕ ಸೇವೆ ನೀಡಲಿದ್ದು, ಅದರಲ್ಲಿ 6 ಡ್ರೈವರ್‌ಲೆಸ್ ರೈಲುಗಳಾಗಿರಲಿವೆ. ಡ್ರೈವರ್‌ಲೆಸ್ ರೈಲುಗಳ ಪೈಕಿ ಈಗಾಗಲೇ 4 ರೈಲುಗಳು ಬಂದಿದ್ದು, ಉಳಿದ ಎರಡು ರೈಲುಗಳು ಏಪ್ರಿಲ್ ಮೊದಲ ವಾರದಲ್ಲಿ ಸೇರ್ಪಡೆಯಾಗಲಿವೆ.
