ಬಳ್ಳಾರಿ ವಿವಿಯ ಮಾದರಿ ವಿವಿಯನ್ನಾಗಿಸುವುದೇ ನಮ್ಮ ಧ್ಯೇಯ: ಎಂ. ಮುನಿರಾಜು

| Published : Jan 03 2025, 12:31 AM IST

ಬಳ್ಳಾರಿ ವಿವಿಯ ಮಾದರಿ ವಿವಿಯನ್ನಾಗಿಸುವುದೇ ನಮ್ಮ ಧ್ಯೇಯ: ಎಂ. ಮುನಿರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪರೀಕ್ಷಾ ಭವನ ಮುಂಭಾಗದಲ್ಲಿ ವಿದ್ಯಾರ್ಥಿಗಳ ಸೇವೆಗಾಗಿ ಬ್ಯಾಟರಿ ಚಾಲಿತ ವಾಹನ ಹಾಗೂ ವಸತಿ ನಿಲಯ ಕಟ್ಟಡಗಳ ನವೀಕರಣ ಕಾಮಗಾರಿಗಳ ಉದ್ಘಾಟನೆ ಮತ್ತು 2025ರ ವರ್ಷಾರಂಭಕ್ಕೆ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಬಳ್ಳಾರಿ: ಬಳ್ಳಾರಿಯ ವಿಶ್ವವಿದ್ಯಾಲಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಿ ಮಾದರಿ ವಿಶ್ವವಿದ್ಯಾಲಯವಾಗಿ ಮಾರ್ಪಡಿಸುವುದು ನಮ್ಮ ಧ್ಯೇಯ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ಮುನಿರಾಜು ಹೇಳಿದರು.

ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪರೀಕ್ಷಾ ಭವನ ಮುಂಭಾಗದಲ್ಲಿ ಶಿಕ್ಷಣ ಮಹಾವಿದ್ಯಾಲಯಗಳ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಥಿಯೋಸಫಿಕಲ್ ಸೊಸೈಟಿ, ಹೊಸಪೇಟೆ ಹಾಗೂ ಬಳ್ಳಾರಿಯ ಕೆನರಾ ಬ್ಯಾಂಕ್ ಜಂಟಿಯಾಗಿ ಆಯೋಜಿಸಿದ್ದ ವಿದ್ಯಾರ್ಥಿಗಳ ಸೇವೆಗಾಗಿ ಬ್ಯಾಟರಿ ಚಾಲಿತ ವಾಹನ ಹಾಗೂ ವಸತಿ ನಿಲಯ ಕಟ್ಟಡಗಳ ನವೀಕರಣ ಕಾಮಗಾರಿಗಳ ಉದ್ಘಾಟನೆ ಮತ್ತು 2025ರ ವರ್ಷಾರಂಭಕ್ಕೆ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೊಸವರ್ಷದಲ್ಲಿ ವಿವಿಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಅಗತ್ಯವಾದ ಎಲ್ಲ ಸೌಲಭ್ಯವನ್ನು ಒದಗಿಸಲಾಗುವುದು. ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳಿಗಾಗಿ ದಾಸೋಹ ಭವನ ನಿರ್ಮಿಸಲಾಗುವುದು. ವಿವಿಯ ಅಭಿವೃದ್ಧಿಗೆ ಎಲ್ಲ ಸಿಬ್ಬಂದಿ ಕೈಜೋಡಿಸಬೇಕು ಎಂದು ಹೇಳಿದರು.

ವಿಶ್ವವಿದ್ಯಾಲಯದ ಕುಲಸಚಿವ ಎಸ್.ಎನ್. ರುದ್ರೇಶ ಮಾತನಾಡಿ, ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ಬ್ಯಾಟರಿ ಚಾಲಿತ ವಾಹನದ ಸೇವೆಯನ್ನು ವಿದ್ಯಾರ್ಥಿಗಳಿಗಾಗಿಯೇ ಒದಗಿಸಿದೆ. ಈ ವಿನೂತನ ಸೇವೆಯನ್ನು ಆರಂಭಿಸಿರುವ ರಾಜ್ಯದ ಪ್ರಥಮ ವಿಶ್ವವಿದ್ಯಾಲಯ ನಮ್ಮದು. ಇದೇ ರೀತಿ ಹತ್ತು-ಹಲವು ಯೋಜನೆಗಳನ್ನು ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳಿಗಾಗಿ ರೂಪಿಸಲಾಗುವುದು. ಈ ನಿಟ್ಟಿನಲ್ಲಿ ಎಲ್ಲ ಸಿಬ್ಬಂದಿ ಸಹಕಾರ ಅಗತ್ಯ ಎಂದರು.

ಥಿಯೋಸಫಿಕಲ್ ಸೊಸೈಟಿಯ ನಿರ್ದೇಶಕ ಶರಣಪ್ಪ ಮಾತನಾಡಿ, ವಿದ್ಯಾರ್ಥಿಗಳು ದೇವರು ಎಂಬ ಪರಿಕಲ್ಪನೆ ವ್ಯಕ್ತಪಡಿಸಿರುವ ವಿಶ್ವವಿದ್ಯಾಲಯದ ಆಡಳಿತ ವರ್ಗಕ್ಕೆ ಅಭಿನಂದನೆ ಸಲ್ಲಿಸಿದರು. ಈ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುವುದರಲ್ಲಿ ಸಂಶಯವಿಲ್ಲ ಎಂದರು.

ಥಿಯೋಸಫಿಕಲ್ ಸೊಸೈಟಿಯ ಕಾರ್ಯದರ್ಶಿ ಅಶೋಕ ಜೀರೆ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಹಲವಾರು ಅವಕಾಶಗಳಿವೆ. ಪ್ರವಾಸೋದ್ಯಮದಿಂದಾಗಿ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶಗಳು ದೊರೆಯುತ್ತವೆ ಎಂದು ತಿಳಿಸಿದರು.

ಕೆನರಾ ಬ್ಯಾಂಕ್ ಡಿವಿಜನಲ್ ಮ್ಯಾನೇಜರ್ ಗಿರೀಶ ಕುಲಕರ್ಣಿ ಮಾತನಾಡಿ, ವಿಶ್ವವಿದ್ಯಾಲಯದ ಮತ್ತು ವಿದ್ಯಾರ್ಥಿಗಳ ಕಲ್ಯಾಣಕ್ಕೆ ಸೇವೆ ನೀಡಲು ಸದಾ ಸಿದ್ಧವಿದ್ದು, ವಿದ್ಯಾರ್ಥಿಸ್ನೇಹಿ ಯೋಜನೆ ಪರಿಚಯಿಸಿರುವ ವಿವಿಯ ಆಡಳಿತ ಮಂಡಳಿಗೆ ಅಭಿನಂದಿಸಿದರು.

ವಿವಿಯ ಮಾಜಿ ಸಿಂಡಿಕೇಟ್ ಸದಸ್ಯ ರಾಜಶೇಖರ ಮಾತನಾಡಿ, ಸರ್ಕಾರದಿಂದ ಎಲ್ಲ ಸಹಾಯವನ್ನು ನಿರೀಕ್ಷಿಸದೆ ಸ್ವ ಪ್ರಯತ್ನದಿಂದ ಅಭಿವೃದ್ಧಿಗೆ ಶ್ರಮಿಸುತ್ತಿರುವುದಕ್ಕೆ ವಿವಿಯ ಆಡಳಿತ ವರ್ಗವನ್ನು ಹೊಗಳಿದರು.

ಹುಬ್ಬಳ್ಳಿಯ ಬಿ.ವಿ. ಭೂಮರೆಡ್ಡಿ ತಾಂತ್ರಿಕ ಮಹಾವಿದ್ಯಾಲಯದ ಪ್ರೊ. ಶಿವಾನಂದ ಪಾಟೀಲ್ ಮಾತನಾಡಿ, ಶಿಕ್ಷಣ ಪೂರೈಸುವ ವಿದ್ಯಾರ್ಥಿಗಳು ಕೇವಲ ಉದ್ಯೋಗಕ್ಕೆ ಸೀಮಿತವಾಗಿರದೆ ಉದ್ಯೋಗ ಸೃಷ್ಟಿಸುವ ಮಟ್ಟಿಗೆ ಬೆಳೆಯಬೇಕು. ವಿಭಿನ್ನ ಆಲೋಚನೆಗಳಿರುವ ವಿದ್ಯಾರ್ಥಿಗಳು ನಮ್ಮೊಡನೆ ಪ್ರಾಜೆಕ್ಟ್ ಮಾಡಲು ಅವಕಾಶ ನೀಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಎರಡು ವಿದ್ಯುತ್ ಚಾಲಿತ ವಾಹನಗಳನ್ನು ಗಣ್ಯರು ಲೋಕಾರ್ಪಣೆಗೊಳಿಸಿದರು. ವಿದ್ಯಾರ್ಥಿಗಳಿಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ. ರಮೇಶ್ ಓ. ಓಲೇಕಾರ್, ವಿವಿಧ ನಿಕಾಯದ ಡೀನರು ಉಪಸ್ಥಿತರಿದ್ದರು.

ಶ್ರೀದೇವಿ ಆಲೂರ ಕಾರ್ಯಕ್ರಮ ನಿರೂಪಿಸಿದರು. ಸಿದ್ಧರಾಮಪ್ಪ ಪೂಜಾರ ವಂದಿಸಿದರು. ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ ಸದಸ್ಯರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.