ಕನ್ನಡಪ್ರಭ ವಾರ್ತೆ ಭಟ್ಕಳ
ಮುರುಡೇಶ್ವರ ಕಡಲ ತೀರದಲ್ಲಿ ಮಾ. 4ರಂದು ಸಂಜೆ 5 ಗಂಟೆಯಿಂದ ಧಾರ್ಮಿಕ ಆಚರಣೆ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಎಲ್ಲರ ಸಹಕಾರದಿಂದ ನಮ್ಮೂರ ಹೋಳಿ ಸಂಭ್ರಮ 2026 ವಿಜೃಂಭಣೆಯಿಂದ ನಡೆಸಲು ಉದ್ದೇಶಿಸಲಾಗಿದೆ ಎಂದು ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪುಷ್ಪಲತಾ ಎಂ. ವೈದ್ಯ ಹೇಳಿದರು.ಸೋಮವಾರ ಸಂಜೆ ಮುರುಡೇಶ್ವರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಹೋಳಿ ಹಬ್ಬದ ಸಂಭ್ರಮಾಚರಣೆ ಕುರಿತು ಮಾಹಿತಿ ನೀಡಿದ ಅವರು, ಊರ ಜನರ ಸಹಕಾರದಿಂದ ಮುರುಡೇಶ್ವರದಲ್ಲಿ ಈ ಸಲದಿಂದ ನಮ್ಮೂರ ಹೋಳಿ ಸಂಭ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. 4ರ ಸಂಜೆ 5 ಗಂಟೆಗೆ ಶ್ರೀ ಮುರುಡೇಶ್ವರ ದೇವರಿಗೆ ಪೂಜೆ ಸಲ್ಲಿಸಿ ಹೋಳಿ ಸಂಭ್ರಮಕ್ಕೆ ಸಚಿವ ಮಂಕಾಳ ಎಸ್. ವೈದ್ಯ ಚಾಲನೆ ನೀಡಲಿದ್ದಾರೆ. ಸಂಭ್ರಮದಲ್ಲಿ ಹೋಳಿ ಕುಣಿತ, ಬಣ್ಣದ ಮಡಿಕೆ ಒಡೆಯುವುದು, ರಂಗೀಲಾ ಹಬ್ಬ (ಬಣ್ಣ ಹಚ್ಚುವುದು) ಕಾಮದಹನ, ಮಳೆ ನೃತ್ಯ, ಲೈವ್ ಡಿಜೆ, ಸಮುದ್ರ ಸ್ನಾನ ಮುಂತಾದ ಕಾರ್ಯಕ್ರಮ ನಡೆಯಲಿದೆ. ಹೋಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಹೋಳಿ ಆಡಲು ಅವಕಾಶ ಕಲ್ಪಿಸಲಾಗಿದೆ. ಹೋಳಿಯಲ್ಲಿ ಪಾಲ್ಗೊಳ್ಳುವವರು ಬಿಳೆ ಬಣ್ಣದ ಬಟ್ಟೆ ಧರಿಸಿ ಬರಬೇಕು ಎಂದ ಅವರು, ಹೋಳಿ ಸಂಭ್ರಮದಲ್ಲಿ ಸಚಿವ ಮಂಕಾಳ ವೈದ್ಯರೂ ಸಹ ಪಾಲ್ಗೊಳ್ಳುತ್ತಿದ್ದು, ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಜನರು ಪಾಲ್ಗೊಳ್ಳುವುದರ ಮೂಲಕ ಹೋಳಿ ಸಂಭ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಮುರುಡೇಶ್ವರ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಎಸ್.ಎಸ್. ಕಾಮತ್ ಮಾತನಾಡಿದರು. ಈ ಸಂದರ್ಭ ಭಟ್ಕಳ ಅರ್ಬನ್ ಬ್ಯಾಂಕ್ ನಿರ್ದೇಶಕಿ ಬೀನಾ ವೈದ್ಯ, ಮಾವಳ್ಳಿ ಗ್ರಾಪಂ ಮಾಜಿ ಅಧ್ಯಕ್ಷೆ ನಯನಾ ನಾಯ್ಕ, ಸತೀಶ ನಾಯ್ಕ, ನಾಗೇಶ ನಾಯ್ಕ ಮುಂತಾದವರಿದ್ದರು.