ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ನಂದಿ ಸಂತತಿ ಉಳಿದರೆ ಮಾತ್ರ ಭಾರತ ದೇಶದ ಸಂವಿಧಾನ ಉಳಿಯುವುದು. ಈ ನಿಟ್ಟಿನಲ್ಲಿ ನಂದಿ ಸಂತತಿ ಉಳಿಸಿ ಬೆಳೆಸುವುದಕ್ಕೆ ಪೂರಕವಾದ ಕಾನೂನು ಹಾಗೂ ಯೋಜನೆ ಜಾರಿಗೆ ತರುವ ರಾಜಕೀಯ ನಾಯಕರಿಗೆ ನಂಬಿದ ದೈವದ ಸಾಕ್ಷಿಯಾಗಿ ಮತದಾನ ಮಾಡುವ ಸಂಕಲ್ಪ ಯಾತ್ರೆಯನ್ನು ಮೇ೮ರಿಂದ ೧೨ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ನಂದಿ ಕೂಗು ಅಭಿಯಾನದ ಕೃಷಿ ತಜ್ಞ ಬಸವರಾಜ ಬಿರಾದಾರ ಹೇಳಿದರು.ಪಟ್ಟಣದ ಐತಿಹಾಸಿಕ ಮೂಲನಂದೀಶ್ವರ ದೇವಸ್ಥಾನದ ಆವರಣದಲ್ಲಿ ಕೃಷಿ ಪದವೀಧರರು ಪ್ರಾರಂಭಿಸಿರುವ ನಂದಿ ಕೂಗು ಅಭಿಯಾನದಡಿಯಲ್ಲಿ ನಂದಿಗಾಗಿ ನಮ್ಮ ಮತದಾನ ಸಂಕಲ್ಪ ಯಾತ್ರೆ ಗುರುವಾರ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಸಂಕಲ್ಪ ಯಾತ್ರೆಯನ್ನು ಶ್ರೀಶೈಲ ಮಲ್ಲಿಕಾರ್ಜುನ ಸನ್ನಿದಾನದಿಂದ ಬಸವ ಜಯಂತಿಯಂದು ಆರಂಭಿಸಲಾಗಿದೆ. ಬಸವೇಶ್ವರರ ಜನ್ಮಸ್ಥಳ ಬಸವನಬಾಗೇವಾಡಿಯಿಂದ ಅವರ ಕರ್ಮಭೂಮಿ ಬಸವ ಕಲ್ಯಾಣ, ಐಕ್ಯಭೂಮಿ ಕೂಡಲಸಂಗಮದವರೆಗೂ ಮೇ೮ ರಿಂದ ೧೨ರವರೆಗೂ ನಂದಿಗಾಗಿ ನಮ್ಮ ಮತದಾನ ಸಂಕಲ್ಪ ಯಾತ್ರೆ ಜರುಗಲಿದೆ. ಈ ಮಾರ್ಗದ ಮಧ್ಯದಲ್ಲಿ ಬರುವ ಪ್ರಮುಖ ಸ್ಥಳದಲ್ಲಿರುವ ದೇವಸ್ಥಾನಗಳಲ್ಲಿ ನಮ್ಮ ಯಾತ್ರೆಯ ಉದ್ದೇಶವನ್ನು ಜನರಿಗೆ ಮುಟ್ಟಿಸುವ ಮೂಲಕ ನಂದಿಗಾಗಿ ಮತ ಮೀಸಲಿಡುವ ವಿಚಾರವನ್ನು ಒಬ್ಬರ ಮನಸ್ಸಿನಿಂದ ಇನ್ನೊಬ್ಬರ ಮನಸ್ಸಿಗೆ ಹರಡುವಂತೆ ಮಾಡಿ ರಾಷ್ಟ್ರದ ಬಹುಜನರ ಮತವನ್ನು ನಂದಿ ಕೃಷಿ ಪುನಶ್ಚೇತನಕ್ಕಾಗಿ ಕ್ರೋಢಿಸಕರಿಸುವದಾಗಿ ಅವರು ತಿಳಿಸಿದರು.ಸಂವಿಧಾನದ ಭಾಗ ೧ಅನ್ನು ಸಿಂಧೂ ನದಿ ಜಲಾನಯನ ಪ್ರದೇಶದಲ್ಲಿದ್ದ ಮೆಹೆಂಜೋದಾರೋ ನಾಗರಿಕತೆಯ ನಂದಿ ಮುದ್ರೆಯೊಂದಿಗೆ ಅಲಂಕರಿಸಿ ಆರಂಭಿಸಲಾಗಿದೆ. ನಂದಿ ಮುದ್ರೆಯಿಂದ ನೀಡುವ ಮೂಲಕ ಸಂವಿಧಾನದ ಮೊದಲ ಭಾಗವಾದ ಒಕ್ಕೂಟ ಹಾಗೂ ಇದರ ಪ್ರದೇಶಗಳು ಎಂಬ ಶೀರ್ಷಿಕೆಯಡಿಯಲ್ಲಿ ಸಂವಿಧಾನದ ಬರವಣಿಗೆ ಆರಂಭಿಸಲಾಗಿದೆ. ಜೋಡೆತ್ತಿನ ಕೃಷಿ ಉಳಿದರೆ ಮಣ್ಣು ಉಳಿಯುವುದು. ಮಣ್ಣು ಉಳಿದರೆ ಮಾತ್ರ ನಾಗರಿಕತೆಗಳು ಉಳಿಯಲು ಸಾಧ್ಯ. ನಮ್ಮ ಸಂಕಲ್ಪ ಯಾತ್ರೆಯ ಉದ್ದೇಶ ಅರಿತುಕೊಂಡು ಎಲ್ಲರೂ ಪಕ್ಷಾತೀತವಾಗಿ ನಿರ್ಣಯ ಕೈಗೊಳ್ಳುವ ಮೂಲಕ ಮತದಾನ ವೇಳೆ ನಂದಿ ಸಂರಕ್ಷಣೆ ಮಾಡುವ ಪ್ರತಿನಿಧಿಗಳಿಗೆ ತಮ್ಮ ಮತದಾನ ಮಾಡುವ ಸಂಕಲ್ಪ ಮಾಡಬೇಕು. ಈ ಮೂಲಕ ಜೋಡೆತ್ತು ಸಂರಕ್ಷಣೆ ಮಾಡಬೇಕೆಂದರು. ಇದೇ ಸಂದರ್ಭದಲ್ಲಿ ನಂದಿಗಾಗಿ ನಮ್ಮ ಮತದಾನ ಸಂಕಲ್ಪ ವಿಧಿ ಬೋಧಿಸಲಾಯಿತು.ಈ ಸಂದರ್ಭದಲ್ಲಿ ಅಭಿಯಾನದ ಸ್ವಯಂ ಸೇವಕರಾದ ಬಿ.ಎಸ್.ಕೋನರಡ್ಡಿ, ಅಭಿಷೇಕ ಬಿರಾದಾರ, ಬಸವರಾಜ ಸಂಗಮ, ಮುಕೇಶ, ಅರವಿಂದ ಕವಲಗಿ, ಎನ್.ಎನ್.ಅಂಗಡಿ, ಮುಖಂಡರಾದ ಸುರೇಶ ಹಾರಿವಾಳ, ಶೇಖರ ಗೊಳಸಂಗಿ, ವಿನುತ ಕಲ್ಲೂರ, ರವಿಗೌಡ ಚಿಕ್ಕೊಂಡ, ಬಸಣ್ಣ ದೇಸಾಯಿ, ಡಾ.ಬಸವರಾಜ ಚವ್ಹಾಣ, ಚನ್ನಬಸು ಜಾಡರ, ಮಲ್ಲಪ್ಪ ಅಡಗಿಮನಿ, ಕಲ್ಲಪ್ಪ ಹಾರಿವಾಳ, ರಾಮನಗೌಡ ಚಿಕ್ಕೊಂಡ, ಶಿವಾನಂದ ಮಾಳೂರ, ಮುರಗೇಶ ಗೊಳಸಂಗಿ, ಬಸವರಾಜ ಸಿಂದಗಿ ಇತರರು ಇದ್ದರು.