ಸಾರಾಂಶ
ಚುನಾವಣೆಗೂ ಮುನ್ನಾ ನೀಡಿದ ಭರವಸೆಯಂತೆ ಸರ್ಕಾರದ ಗ್ಯಾರಂಟಿ ಯೋಜನೆಗಳು ಪರಿಣಾಮಕಾರಿಯಾಗಿ ಉಪಯೋಗವಾಗುತ್ತಿದ್ದು, ಯೋಜನೆಗಳನ್ನು ಫಲಾನುಭವಿಗೆ ತಲುಪಿಸುವಲ್ಲಿ ಮೊಳಕಾಲ್ಮುರು ತಾಲೂಕು ಶೇ.90 ರಷ್ಟು ಪ್ರಗತಿ ಸಾಧಿಸಿದೆ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಹೇಳಿದರು.
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ಚುನಾವಣೆಗೂ ಮುನ್ನಾ ನೀಡಿದ ಭರವಸೆಯಂತೆ ಸರ್ಕಾರದ ಗ್ಯಾರಂಟಿ ಯೋಜನೆಗಳು ಪರಿಣಾಮಕಾರಿಯಾಗಿ ಉಪಯೋಗವಾಗುತ್ತಿದ್ದು, ಯೋಜನೆಗಳನ್ನು ಫಲಾನುಭವಿಗೆ ತಲುಪಿಸುವಲ್ಲಿ ಮೊಳಕಾಲ್ಮುರು ತಾಲೂಕು ಶೇ.90 ರಷ್ಟು ಪ್ರಗತಿ ಸಾಧಿಸಿದೆ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಹೇಳಿದರು.ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರ್ಕಾರ ಚುನಾವಣೆಗೂ ಮುನ್ನಾ ನೀಡಿದ್ದ ಭರವಸೆಯಂತೆ ಐದು ಗ್ಯಾರಂಟಿಗಳನ್ನು ಜಾರಿ ಮಾಡಿ ನುಡಿದಂತೆ ನಡೆದ ಸರ್ಕಾರ ಎನಿಸಿಕೊಂಡಿದೆ. ಗ್ಯಾರಂಟಿ ಸೌಲಭ್ಯಗಳು ಬಡ ಜನತೆಗೆ ತುಂಬಾ ಪರಿಣಾಮಕಾರಿಯಾಗಿ ಉಪಯೋಗವಾಗುತ್ತಿದೆ. ಎಲ್ಲಾ ಕಡೆ ಉತ್ತಮ ಪ್ರಸಂಸೆ ವ್ಯಕ್ತವಾಗಿದೆ. ಇದಕ್ಕೆ ಲೋಕಸಭಾ ಚುನಾವಣೆಯೇ ಸಾಕ್ಷಿ . ವಿಧಾನ ಸಭಾ ಚುನಾವಣೆಗಿಂತ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತದಾರರು ಪಕ್ಷವನ್ನು ಬೆಂಬಲಿಸಿದ್ದಾರೆ ಎಂದರೆ ಗ್ಯಾರೆಂಟಿ ಯೋಜನೆಗಳು ಉತ್ತಮವಾಗಿವೆ ಎಂದರ್ಥ ಎಂದು ಅಭಿಪ್ರಾಯಪಟ್ಟರು.ತಾಲೂಕಿನಲ್ಲಿ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಸೌಲಭ್ಯವನ್ನು ಶೇ.90ರಷ್ಟು ಫಲಾನುಭವಿಗಳು ಪಡೆದುಕೊಳ್ಳುತ್ತಿದ್ದಾರೆ. ಇನ್ನೂ ಉಳಿದ ಫಲಾನುಭವಿಗಳು ಯಾಕೆ ಸೌಲಭ್ಯದಿಂದ ದೂರ ಉಳಿದಿದ್ದಾರೆ ಎನ್ನುವುದನ್ನು ಅನುಷ್ಠಾನ ಸಮಿತಿ ಸದಸ್ಯರು ಖಚಿತಪಡಿಸಿಕೊಂಡು ಲೋಪಗಳು ಬಾರದಂತೆ ಅಧಿಕಾರಿಗಳೊಡನೆ ಚರ್ಚಿಸಿ ಸೌಲಭ್ಯ ತಲುಪಿಸುವ ಕಾರ್ಯ ಮಾಡಬೇಕೆಂದು ತಿಳಿಸಿದರು.
ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಣ್ಣ ಮಾತನಾಡಿ, ರಾಜ್ಯದ ಸರ್ಕಾರ ಐದು ಗ್ಯಾರೆಂಟಿಗಳನ್ನು ಜಾರಿ ಮಾಡಿ ಬಡವರ ಪಾಲಿಗೆ ಬೆಳಕಾಗಿದೆ. ಅನೇಕರು ಮಕ್ಕಳ ಫೀಸು, ಕುಟುಂಬ ನಿರ್ವಹಣೆಗೆ ಸೇರಿದಂತೆ ವಿವಿಧ ರೀತಿಯಲ್ಲಿ ಅನುಕೂಲ ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯನ್ನಾಗಿಸಿ ಎಲ್ಲ ಅರ್ಹರಿಗೆ ಯೋಜನೆಗಳನ್ನು ತಲುಪಿಸುವುದು ಅನುಷ್ಠಾನ ಸಮಿತಿಯ ಗುರಿಯಾಗಿದೆ ಎಂದರು.ತಾಲೂಕು ಅನುಷ್ಠಾನ ಸಮಿತಿಯ ಅಧ್ಯಕ್ಷ ಚೇತನ್ ಕುಮಾರ್ ಮಾತನಾಡಿ, ಗ್ಯಾರೆಂಟಿ ಯೋಜನೆ ಮಾಡಿರುವುದು ಇಡೀ ದೇಶದಲ್ಲೇ ಮೊದಲು. ಬಡವರ ಪಾಲಿಗೆ ತುಂಬಾ ಉಪಯುಕ್ತವಾದ ಯೋಜನೆಗಳು ಇವಾಗಿದ್ದು, ಮುಖ್ಯಮಂತ್ರಿಗಳು ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಿ ನುಡಿದಂತೆ ನಡೆದುಕೊಂಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಜಗದೀಶ್, ತಾಲೂಕು ಪಂಚಾಯಿತಿ ಇ ಓ ಹನುಮಂತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಮ್ ಉಲ್ಲಾ, ಕಾರ್ಯದರ್ಶಿ ನಾಗಭೂಷಣ,ತಳಕು ಬ್ಲಾಕ್ ಅಧ್ಯಕ್ಷ ನಾಗೇಶ್ ರೆಡ್ಡಿ, ಅನುಷ್ಠಾನ ಸಮಿತಿಯ ಸದಸ್ಯರಾದ ಸಿದ್ದು ಬಸಪ್ಪ ಟಿ.ಎಸ್, ಪಾಲಯ್ಯ ವಿ, ಎಸ್.ವಿಜಯಕುಮಾರ್, ಸುರೇಶ್ , ಮೊಹಮ್ಮದ್ ರಫಿ, ಫೇಕ್ ಇಸ್ಮಾಯಿಲ್, ಎರಿಸ್ವಾಮಿ, ನರಸಿಂಹ ರೆಡ್ಡಿ, ಗೋವಿಂದಪ್ಪ, ಸಿ. ಹೊನ್ನೂರಪ್ಪ, ಲೋಕೇಶ್ ಪಲ್ಲವಿ. ಅಂಗಡಿ ಪಾಲಯ್ಯ ಇದ್ದರು.