ನುಡಿದಂತೆ ನಡೆಯುವ ಸರ್ಕಾರ ನಮ್ಮದು: ಸಿ. ಪುಟ್ಟರಂಗಶೆಟ್ಟಿ

| Published : Jan 17 2024, 01:52 AM IST

ಸಾರಾಂಶ

ಕುಡಿಯುವ ನೀರಿಗಾಗಿ ೨೦ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಪಟ್ಟಿಯಲ್ಲಿದ್ದ ಅನೆಮಡುವಿನ ಕೆರೆಗೆ ೧.೦೨ ಕೋಟಿ ರೂ. ವೆಚ್ಚದಲ್ಲಿ ಪೈಪ್‌ಲೈನ್ ಮಾಡಿ ನೀರು ತುಂಬಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಬಾಗಿನ ಅರ್ಪಿಸಿದರು.

ಅನೆಮಡುವಿನ ಕೆರೆಗೆ ಉಸ್ತುವಾರಿ ಸಚಿವರು, ಶಾಸಕರಿಂದ ಬಾಗಿನ ಅರ್ಪಣೆ । ೧.೦೨ ಕೋಟಿ ವೆಚ್ಚದಲ್ಲಿ ಕೆರೆಗೆ ನೀರು ತುಂಬಿಸುವ ಯೋಜನೆ ಯಶಸ್ವಿ

ಕನ್ನಡಪ್ರಭ ವಾರ್ತೆ ಚಾಮರಾಜನಗರ ಕುಡಿಯುವ ನೀರಿಗಾಗಿ ೨೦ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಪಟ್ಟಿಯಲ್ಲಿದ್ದ ಅನೆಮಡುವಿನ ಕೆರೆಗೆ ೧.೦೨ ಕೋಟಿ ರೂ. ವೆಚ್ಚದಲ್ಲಿ ಪೈಪ್‌ಲೈನ್ ಮಾಡಿ ನೀರು ತುಂಬಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಬಾಗಿನ ಅರ್ಪಿಸಿದರು.

ನಂಜೇದೇವನಪುರ ಸಮೀದಲ್ಲಿರುವ ಅನೆಮಡುವಿನ ಕೆರೆಗೆ ಕಳೆದ ೧೦ ವರ್ಷಗಳ ಹಿಂದೆ ನೀರು ತುಂಬಿಸಬೇಕಾಗಿತ್ತು. ಈಗ ಉಡಿಗಾಲ ಮಾರ್ಗವಾಗಿ ಪೈಪ್ ಲೈನ್ ಹಾಗೂ ಗುರುತ್ವಾಕರ್ಷಣ ಮೂಲಕ ೧.೦೨ ಕೋಟಿ ವೆಚ್ಚದಲ್ಲಿ ನೀರು ತುಂಬಿಸುವ ಯೋಜನೆ ಪೂರ್ಣಗೊಂಡು ಕೆರೆ ಭರ್ತಿಯಾಗಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಇಂದು ಈ ವ್ಯಾಪ್ತಿಯ ಗ್ರಾಮಸ್ಥರ ಸಹಯೋಗದಲ್ಲಿ ಬಾಗಿನ ಅರ್ಪಿಸುವ ಕಾರ್ಯಕ್ರಮ ನಡೆಯಿತು.

ಬಾಗಿನ ಅರ್ಪಿಸಿ ಬಳಿಕ ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ಈ ಕೆರೆಗೆ ಕಳೆದ ೧೦ ವರ್ಷಗಳ ಹಿಂದೆ ನೀರು ತುಂಬಿಸಬೇಕಾಗಿತ್ತು. ತಾಂತ್ರಿಕ ಕಾರಣ ಹಾಗೂ ಹೋರಾಟಗಾರರು ಆ ಕಡೆಯಿಂದ ಬೇಡ. ಈ ಕಡೆಯಿಂದ ಬೇಕು ಎಂಬ ತಾರ್ಕದಿಂದಾಗಿ ಕೆರೆಗೆ ನೀರು ತುಂಬಿಸುವುದು ವಿಳಂಬವಾಯಿತು ಎಂದು ವಿಷಾಧ ವ್ಯಕ್ತಪಡಿಸಿದರು. ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ದಿ.ಎಚ್.ಎಸ್. ಮಹದೇವಪ್ರಸಾದ್ ಹಾಗೂ ಸಂಸದರಾಗಿದ್ದ ದಿ. ಆರ್. ಧ್ರುವನಾರಾಯಣ ಅವರ ಶ್ರಮದ ಫಲವಾಗಿ ಈ ಭಾಗದ ೨೦ ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಾಯಿತು. ೨೦೦೮ರಲ್ಲಿ ಬಿಜೆಪಿ ಸರ್ಕಾರ ಅನುಮೋದನೆ ನೀಡಿದ್ದು ಬಿಟ್ಟರೆ ಇನ್ನುಳಿದ ಎಲ್ಲಾ ಕೆಲಸವನ್ನು ನಮ್ಮ ಸರ್ಕಾರ ಮಾಡಿತ್ತು. ಈಗಲು ಸಹ ನಮ್ಮ ಸರ್ಕಾರವೇ ಆನೆಮಡುವಿನ ಕೆರೆಗೆ ನೀರು ತುಂಬಿಸಿದೆ. ನಮಗೆ ರೈತರು ಮುಖ್ಯ. ರೈತರ ಪರವಾಗಿರುವ ಎಲ್ಲ ಕೆಲಸ ಕಾರ್ಯಗಳನ್ನು ಅದ್ಯತೆ ಮೇರೆಗೆ ಮಾಡುತ್ತಿವೆ. ಈ ಭಾಗದ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆ ಬಹಳ ಇತ್ತು. ಕೆರೆ ತುಂಬಿದ್ದರಿಂದ ಅಂತರ್ಜಲ ವೃದ್ಧಿಯಾಗಿ ರೈತರು ಕೃಷಿಯಲ್ಲಿ ತೊಡಗಿಸಿಕೊಂಡು ನೆಮ್ಮದಿ ಜೀವನ ನಡೆಸಲು ಸಾಧ್ಯವಾಗುತ್ತಿದೆ ಎಂದು ಪುಟ್ಟರಂಗಶೆಟ್ಟಿ ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ನಂಜೇದೇವನಪುರ ದಾಸೋಹ ಮಠಾಧ್ಯಕ್ಷ ಶ್ರೀ ರಾಜೇಂದ್ರಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ, ಗ್ರಾ.ಪಂ. ಅಧ್ಯಕ್ಷ ಪಿ. ಶೇಖರಪ್ಪ, ಉಪಾಧ್ಯಕ್ಷ ಗುರುಮಲ್ಲಪ್ಪ, ಕಾರ್ಮಿಕ ವಿಭಾಗದ ಜಿಲ್ಲಾ ಉಪಾಧ್ಯಕ್ಷ ಉಡಿಗಾಲ ನಂಜಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಎನ್.ಎಂ. ಶಿವಸ್ವಾಮಿ, ಬಿ.ಕೆ. ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಅಸ್ಗರ್, ಜಿಲ್ಲಾಧಿಕಾರಿ ಶಿಲ್ಪಾನಾಗ್, ಸಿಇಓ ಅನಂದ್‌ಪ್ರಕಾಶ್ ಮೀನಾ, ಸಣ್ಣ ನೀರಾವಾರಿ ಇಲಾಖೆಯ ಎಇಇ ಎಸ್. ನಿರಂಜನ್, ಎಇಇ ಅಭಿಲಾಷ್, ಜೆಇ ಮಂಜುಳಾ, ಬಸವಣ್ಣ, ನಂಜುಂಡಸ್ವಾಮಿ, ಮುಖಂಡರಾದ ಪಿ.ರಾಜಣ್ಣ, ಕುಮಾರ್, ಪುರುಷೋತ್ತಮ್, ಮಹೇಶ್, ಮಾದಪ್ಪ, ಗ್ರಾಪಂ ಸದಸ್ಯರು ಹಾಗೂ ಉಡಿಗಾಲ, ನಂಜೇದೇವನಪುರ, ವೀರನಪುರ, ಕುಡುವಿನ ಕಟ್ಟೆಹುಂಡಿ ಹುಂಡಿ, ಶಿವಪುರ,ಕಾಳನಹುಂಡಿ ಗ್ರಾಮಸ್ಥರು ಇದ್ದರು.