ಸಾರಾಂಶ
ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳು ವಾಪಸ್ ಪಡೆಯಬೇಕು, ರೈತ ಬೆಳೆದ ಬೆಳೆಗೆ ಕಾನೂನಾತ್ಮಕ ದರ ನಿಗದಿಪಡಿಸಬೇಕು ಎಂಬುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ನಡೆಸಿದವು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳು ವಾಪಸ್ ಪಡೆಯಬೇಕು, ರೈತ ಬೆಳೆದ ಬೆಳೆಗೆ ಕಾನೂನಾತ್ಮಕ ದರ ನಿಗದಿಪಡಿಸಬೇಕು ಎಂಬುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ನಡೆಸಿದವು.ಈ ವೇಳೆ ಅವರು ನಡೆಸಿದ ಮೆರವಣಿಗೆಯಲ್ಲಿ ಕೆಲ ನಾಟಕೀಯ ಘಟನೆಗಳು ಜರುಗಿದವು.ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ನೂರಾರು ರೈತರು ಸರ್ಕಾರದ ಗಮನ ಸೆಳೆಯಲು ರಾಷ್ಟ್ರೀಯ ಹೆದ್ದಾರಿಯಿಂದ ಧರಣಿ ಸ್ಥಳವಾದ ಸುವರ್ಣ ಗಾರ್ಡನ್ ಟೆಂಟ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾದರು. ಇದಕ್ಕೆ ಆಸ್ಪದ ನೀಡದ ಪೊಲೀಸರು ಹಲಗಾ ಬಳಿಯೇ ರೈತರನ್ನು ತಡೆದು ವಶಕ್ಕೆ ಪಡೆದು ಪೊಲೀಸ್ ವಾಹನ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಟೆಂಟ್ ಬಳಿ ತಂದು ಬಿಟ್ಟರು. ಈ ವೇಳೆ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತರೊಬ್ಬರು ಬಸ್ ಸ್ಟೆರಿಂಗ್‌ಗೆ ಹಸಿರು ಶಾಲು ಹಾಕಿ ಎಳೆದು ಬಸ್ ನಿಲ್ಲಿಸಲು ಯತ್ನಿಸಿದ ಘಟನೆಯೂ ನಡೆಯಿತು. ಬಳಿಕ ರೈತರು ಸುವರ್ಣ ಗಾರ್ಡನ್ ಟೆಂಟ್‌ನಲ್ಲಿ ಧರಣಿ ಮುಂದುವರಿಸಿದರು. ಏನೇನು ಬೇಡಿಕೆಗಳು?:
ವಿದ್ಯುತ್ ಪರಿಕರಗಳನ್ನು ಉಚಿತವಾಗಿ ವಿತರಿಸುತ್ತಿದ್ದು, ಅದನ್ನು ಮುಂದುವರಿಸಬೇಕು. ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಗೆ ₹3,500 ನಿಗದಿಪಡಿಸಬೇಕು. ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ರಾಜ್ಯದಲ್ಲಿ ಕರಾಳ ವಕ್ಫ್ ಕಾಯ್ದೆ ತಿದ್ದುಪಡಿ ಮಾಡಬೇಕು. ರಾಜ್ಯದ ನೀರಾವರಿ ಯೋಜನೆಗಳಾದ ಮಹದಾಯಿ, ಕಳಸಾ-ಬಂಡೂರಿ, ಕೃಷ್ಣಾ, ತುಂಗಭದ್ರಾ ನದಿಗೆ ನವಲಿ ಹತ್ತಿರ ಸಮಾನಾಂತರ ಜಲಾಶಯ ನಿರ್ಮಾಣ ಮಾಡಬೇಕು. ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಸುಪ್ರೀಂಕೋರ್ಟ್ ಆದೇಶದಂತೆ ಆಲಮಟ್ಟಿ ಜಲಾಶಯವನ್ನು 519 ರಿಂದ 524.5 ಅಡಿಗೆ ಎತ್ತರಿಸಬೇಕು. ಚಾಮರಾಜ ನಗರ ಜಿಲ್ಲೆ ಹಾಗೂ ಗುಂಡ್ಲುಪೇಟೆ ತಾಲೂಕಿನ ಗಾಂಧಿ ಗ್ರಾಮದ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಆಗ್ರಹಿಸಿದರು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಮಾತನಾಡಿ, ಕೇಂದ್ರ ಸರ್ಕಾರ ರೈತರಿಗೆ ಸಾಲ ನೀಡುವುದನ್ನು ನಿಲ್ಲಿಸುತ್ತಿದೆ. 15 ರಿಂದ 20 ದಿನ ಕೇಂದ್ರ ಸರ್ಕಾರ ರೈತರಿಗೆ ಬೆಳೆಸಾಲ ನೀಡದೇ ಇದ್ದರೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಮುಂದೆ ಧರಣಿ, ರೈಲು ರೋಖೋ ಚಳವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಸರ್ಕಾರ ರೈತ ಮಹಿಳೆಯರಿಗೆ ಬಜೆಟ್‌ನಲ್ಲಿ ಯಾವುದೇ ಹಣ ಮೀಸಲಿಡುತ್ತಿಲ್ಲ. ಗೃಹಲಕ್ಷ್ಮಿ ಯೋಜನೆಯ ₹2000, ಉಚಿತ ಬಸ್ ಪ್ರಯಾಣ ಎಂದು ಮಹಿಳೆಯರನ್ನು ಯಾಮಾರಿಸುತ್ತಿದೆ. ಹಣ ಸಿಕ್ತು ಎಂದು ಉಚಿತ ಪ್ರಯಾಣ ಮಾಡುತ್ತ ಮಹಿಳೆಯರು ಖುಷಿಯಾಗಿ ತಿರುಗಾಡುತ್ತಿದ್ದಾರೆ. ಆದರೆ, ಇದಕ್ಕಾಗಿ ಸರ್ಕಾರ ರೈತರ ಮೇಲೆ ಅನೇಕ ರೀತಿಯ ತೆರಿಗೆ ಹಾಕುತ್ತಿರುವುದು ಕಾಣುವುದಿಲ್ಲ. ಸರ್ಕಾರ ಇಂತಹ ಇಬ್ಬಂದಿ ಧೋರಣೆ ನಿಲ್ಲಿಸಬೇಕು ಎಂದು ರೈತ ಮಹಿಳೆ ಆಗ್ರಹಿಸಿದರು.ಸಚಿವರಿಗೆ ಘೇರಾವ್:ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಆರೋಗ್ಯ ಸಚಿವ ದಿನೇಶ್ ಗುಮಡೂರಾವ್ ಅವರು ಹೋರಾಟಗಾರರ ಬೇಡಿಕೆ ಆಲಿಸುತ್ತ ರೈತರೆಡೆಗೆ ಬಂದು, ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ಸಂಬಂಧಿಸಿದ ಸಚಿವರೇ ಬರಬೇಕೆಂದು ಪಟ್ಟುಹಿಡಿದು ಸಚಿವರಿಗೆ ಘೇರಾವ್ ಹಾಕಿದರು. ಸಚಿವರು ಮನವೊಲಿಸುವ ಯತ್ನಿಸಿದರೂ ರೈತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು ರೈತರನ್ನು ಸರಿಸಿ ಸಚಿವರಿಗೆ ದಾರಿ ಮಾಡಿಕೊಟ್ಟರು.ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯದರ್ಶಿ ರತ್ನಾ ಗೋಧಿ, ಮುಖಂಡರಾದ ಸಂಗಣ್ಣ ಬಾಗೇವಾಡಿ, ರಾಘವೇಂದ್ರ ನಾಯಿಕ ಸೇರಿ 500ಕ್ಕೂ ಅಧಿಕ ರೈತರು ಪಾಲ್ಗೊಂಡಿದ್ದರು.ಟವೆಲ್‌ನಿಂದ ಬಸ್ ಚಾಲಕರನ್ನು ಕಟ್ಟಿ ಹಾಕಿದ ರೈತರುಸುವರ್ಣ ವಿಧಾನಸೌಧ ಮಾರ್ಗದ ಹಲಗಾ ಬಳಿ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆ ತಡೆದು ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ರಸ್ತೆ ಸಂಚಾರ ಬಂದ್ ಆಗಿತ್ತು. ಈ ವೇಳೆ ಪ್ರತಿಭಟನೆಯನ್ನು ದಾಟಿಕೊಂಡು ಎರಡು ಸರ್ಕಾರಿ ಬಸ್‌ಗಳು ಮುಂದೆ ಹೋದವು. ಆಗ ರೈತರು ಓಡಿ ಬಂದು ಅಡ್ಡಗಟ್ಡಿದರು. ನಂತರ ಬಸ್ ಮುಂದೆ ಹೋಗದಂತೆ ಹಸಿರು ಟವೆಲುಗಳಿಂದ ಬಸ್ ಚಾಲಕರ ಕೈಗಳನ್ನು ಸ್ಟೆರಿಂಗ್‌ಗೆ ಕಟ್ಟಿ ಹಾಕಿದರು. ನಂತರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.