ತಿಪಟೂರು ತಾಲೂಕಿನಲ್ಲಿ ಹಳಿತಪ್ಪಿದ ಆಡಳಿತ ವ್ಯವಸ್ಥೆ: ಆರೋಪ

| Published : Sep 16 2024, 01:58 AM IST

ಸಾರಾಂಶ

ತಿಪಟೂರು ತಾಲೂಕಿನಲ್ಲಿ ಹಳಿತಪ್ಪಿದ ಆಡಳಿತ ವ್ಯವಸ್ಥೆ: ಆರೋಪ

ಕನ್ನಡಪ್ರಭ ವಾರ್ತೆ ತಿಪಟೂರು

ತಾಲೂಕು ಆಡಳಿತ ಜನಪರ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದ್ದು ಸರ್ಕಾರದ ಸಂಬಳ ಪಡೆಯುವ ಅಧಿಕಾರಿಗಳು ಶಾಸಕರ ಕೈಗೊಂಬೆಯಂತೆ ಕುಣಿಯುತ್ತ ಸಣ್ಣಪುಟ್ಟ ಕೆಲಸ ಕಾರ್ಯಗಳಿಗೂ ಸಾರ್ವಜನಿಕರು ಹಾಗೂ ರೈತರನ್ನು ಅಲೆದಾಡಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಲೋಕೇಶ್ವರ ತಾಲೂಕು ಆಡಳಿತದ ಕಾರ್ಯವೈಖರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ಒಂದೂವರೆ ವರ್ಷಗಳಿಂದಲೂ ತಾಲೂಕಿನಲ್ಲಿ ಯಾವುದೇ ಅಭಿವೃದ್ದಿ ಕೆಲಸಗಳಾಗುತ್ತಿಲ್ಲ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲಜೀವನ್ ಕಾಮಗಾರಿಯಲ್ಲಿ ಗುಣಮಟ್ಟದ ಕೆಲಸ ಆಗದೆ ಭ್ರಷ್ಠಾಚಾರ ತಾಂಡವವಾಡುತ್ತಿದೆ. 3 ಅಡಿ ಆಳಕ್ಕೆ ಹೂಳಬೇಕಾದ ಪೈಪ್‌ಗಳನ್ನು ಒಂದೂವರೆಯಿಂದ ೨ಅಡಿಗಿಂತ ಕಡಿಮೆ ಆಳಕ್ಕೆ ಹೂಳಲಾಗಿದ್ದು ಕಾಮಗಾರಿಯಲ್ಲಿ ದೊಡ್ಡಮಟ್ಟದ ಲೋಪವಾಗಿದೆ. ನಗರಕ್ಕೆ ಕುಡಿಯುವ ನೀರು ಪೂರೈಸುವ ಈಚನೂರು ಕೆರೆಗೆ ಯುಜಿಡಿ ಕೊಳಚೆ ನೀರು ಸೇರ್ಪಡೆಯಾಗುತ್ತಿದ್ದರೂ ಶಾಸಕರಾಗಲಿ ಅಥವಾ ಸಂಬಂಧಪಟ್ಟ ಅಧಿಕಾರಿಗಳಾಗಲಿ ಕ್ರಮಕೈಗೊಳ್ಳದೆ ಜನರಿಗೆ ಕಲುಷಿತ ನೀರನ್ನೇ ಕುಡಿಸುತ್ತಿದ್ದಾರೆ. ನಗರ ಸೇರಿದಂತೆ ಈಚನೂರು ಸುತ್ತಮುತ್ತ ಗ್ರಾಮಗಳ ಜನರ ಆರೋಗ್ಯದ ಬಗ್ಗೆಯೂ ಯಾರಿಗೂ ಚಿಂತೆಯಿಲ್ಲ. ಜನರು ಕಾಯಿಲೆಗಳಿಂದ ಬಳಲುತ್ತಿದ್ದು ಮುಂದೆ ಆರೋಗ್ಯ ಅನಾಹುತಗಳಾದರೆ ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳೇ ನೇರ ಹೊಣೆಯಾಗಲಿದ್ದಾರೆ ಎಂದು ದೂರಿದರು. ಸಾರ್ವಜನಿಕರು ತಮ್ಮ ವಿವಿಧ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಲು ಮದ್ಯವರ್ತಿಗಳಿಗೆ ಹಣ ಕೊಟ್ಟರೆ ಮಾತ್ರ ಕೆಲಸ ಎನ್ನುವಂತಾಗಿದೆ. ಇದು ಒಂದು ಇಲಾಖೆಗೆ ಸಿಮೀತವಾಗಿಲ್ಲ ಬದಲಿಗೆ ಎಲ್ಲಾ ಇಲಾಖೆಯಲ್ಲೂ ಇದೇ ಸ್ಥಿತಿ ಇದೆ. ಇನ್ನೂ ಕಾನೂನು ಸುವ್ಯವಸ್ಥೆ ಹದಗೆಟ್ಟುಹೋಗಿದ್ದು, ಸಮಾಜಘಾತಕ ಕೃತ್ಯಗಳು ರಾಜರೋಷವಾಗಿ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಕ್ರಮವಹಿಸುತ್ತಿಲ್ಲ. ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಸದಸ್ಯರಾದ ಸೊಪ್ಪುಗಣೇಶ್, ಭಾರತಿ ಮಂಜುನಾಥ್, ಮುಖಂಡರಾದ ದಶರಥ, ಸಿದ್ದಾಪುರ ಶಶಿ, ಮಲ್ಲೇಶ್, ಸಿದ್ದರಾಮಣ್ಣ, ಡಾಬಾ ಶಂಕರ್, ನಾಗರಾಜು, ಬನ್ನಿಹಳ್ಳಿ ಮಧು ಮತ್ತಿತರರಿದ್ದರು.