ಸಾರಾಂಶ
ಕೇಂದ್ರ ಸರ್ಕಾರದ ಕೃಪಾಪೋಷಣೆಯಿಂದಾಗಿ ಕಾರ್ಮಿಕರ ವಿರೋಧಿ ನೀತಿ ಅನುಸರಿಸುತ್ತಿರುವ ಕಾರ್ಪೊರೇಟ್ ಕಂಪನಿಗಳು ದೇಶಬಿಟ್ಟು ತೊಲಗಲಿ ಎಂದು ಆಗ್ರಹಿಸಿ ಸಂಯುಕ್ತ ಹೋರಾಟ ಸಮಿತಿ ಕೊಪ್ಪಳ ಜಿಲ್ಲಾ ಸಮಿತಿ ಶುಕ್ರವಾರ ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ ಕಾರ್ಪೊರೇಟ್ ಕಂಪನಿಗಳ ಪ್ರತಿಕೃತಿ ದಹಿಸಿ, ಆಕ್ರೋಶ ವ್ಯಕ್ತಪಡಿಸಿವೆ.
ಕೊಪ್ಪಳ: ಕೇಂದ್ರ ಸರ್ಕಾರದ ಕೃಪಾಪೋಷಣೆಯಿಂದಾಗಿ ಕಾರ್ಮಿಕರ ವಿರೋಧಿ ನೀತಿ ಅನುಸರಿಸುತ್ತಿರುವ ಕಾರ್ಪೊರೇಟ್ ಕಂಪನಿಗಳು ದೇಶಬಿಟ್ಟು ತೊಲಗಲಿ ಎಂದು ಆಗ್ರಹಿಸಿ ಸಂಯುಕ್ತ ಹೋರಾಟ ಸಮಿತಿ ಕೊಪ್ಪಳ ಜಿಲ್ಲಾ ಸಮಿತಿ ಶುಕ್ರವಾರ ನಗರದ ಅಶೋಕ ವೃತ್ತದಲ್ಲಿ ಕಾರ್ಪೊರೇಟ್ ಕಂಪನಿಗಳ ಪ್ರತಿಕೃತಿ ದಹಿಸಿ, ಆಕ್ರೋಶ ವ್ಯಕ್ತಪಡಿಸಿವೆ.
ಆ. 9 ಕಿಟ್ ಇಂಡಿಯಾ ಚಳವಳಿಯ ದಿನಾಚರಣೆ ಅಂಗವಾಗಿ ಸಂಯುಕ್ತ ಹೋರಾಟ-ಕರ್ನಾಟಕ (SKM) ದೇಶಾದ್ಯಂತ ಹೋರಾಟಕ್ಕೆ ಕರೆ ನೀಡಿದೆ. ಕರ್ನಾಟಕದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಪೊರೇಟ್ ಕಂಪನಿಗಳ ಪ್ರತಿಕೃತಿ ದಹಿಸಿ, ಪ್ರತಿಭಟನೆ ನಡೆಸಲು ಕರೆ ನೀಡಿದ್ದು, ಕೊಪ್ಪಳ ನಗರದ ಅಶೋಕ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿ, ಕಾರ್ಪೊರೇಟ್ ಸಂಸ್ಥೆಗಳ ಮತ್ತು ರಾಜ್ಯ-ಕೇಂದ್ರ ಸರ್ಕಾರಗಳ ರೈತ ಮತ್ತು ಕಾರ್ಮಿಕರ ವಿರೋಧಿ ನೀತಿ ವಾಪಸ್ ಪಡೆಯಲು ಒತ್ತಾಯಿಸಲಾಯಿತು.ಹತ್ತು ಸಂಘಟನೆಗಳ ಸಹಭಾಗಿತ್ವದಲ್ಲಿ ಸಂಯುಕ್ತ ಕರ್ನಾಟಕ ಹೋರಾಟ ಸಮಿತಿ ಕಾರ್ಪೊರೇಟ್ ಕಂಪನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು.
ಕಾರ್ಪೊರೇಟ್ ಕಂಪನಿಗಳೇ- ಭಾರತ ಬಿಟ್ಟು ತೊಲಗಿ, ಕೃಷಿಯ - ಕಾರ್ಪೊರೇಟಿಕರಣ ನಿಲ್ಲಿಸಿ, ರೈತ ವಿರೋಧಿ - ವಿದ್ಯುತ್ ಖಾಸಗೀಕರಣ ಮಸೂದೆ ಹಿಂಪಡೆಯಿರಿ, ಭಾರತದ ಕೃಷಿ ಉತ್ಪಾದನೆ- ಮಾರುಕಟ್ಟೆ -ಸಂಗ್ರಹಣೆ ಮತ್ತು ವಿತರಣೆ ರೈತರು ಮತ್ತು ಸರ್ಕಾರದ ಆಧೀನದಲ್ಲಿಯೇ ಇರುವಂತೆ ಜೋಪಾನ ಮಾಡಬೇಕು, ಕೃಷಿಭೂಮಿ ರೈತರಲ್ಲೇ ಉಳಿಯುವಂತೆ ಸಂರಕ್ಷಿಸಬೇಕು. ರಾಜ್ಯ ಸರ್ಕಾರ ಹೊಸ ಭೂ ಸುಧಾರಣೆ ಕಾಯ್ದೆ ವಾಪಸ್ ಪಡೆಯಬೇಕು. ಕೈಗಾರಿಕೆ- ರಾಷ್ಟ್ರೀಯ ಹೆದ್ದಾರಿ- ರಾಜ್ಯ ಹೆದ್ದಾರಿ ಹೆಸರಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಕಬಳಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.ಕೃಷಿ ಉತ್ಪಾದನೆಯನ್ನು ವಿಶ್ವ ವಾಣಿಜ್ಯ ಒಪ್ಪಂದದಿಂದ ಹೊರಗಿಡಿ, ಕೃಷಿ ಉತ್ಪನ್ನಗಳಿಗೆ ಡಾ. ಸ್ವಾಮಿನಾಥನ್ ನೇತೃತ್ವದ ಸಮಿತಿಯ ಶಿಫಾರಸಿನಂತೆ ಬೆಂಬಲ ಬೆಲೆಯನ್ನು ಕಾನೂನಾತ್ಮಕಗೊಳಿಸಿ, ಕೃಷಿ ಒಳಸುರಿಗಳ ಮೇಲಿನ ಜಿಎಸ್‌ಟಿ ಹಿಂಪಡೆಯಿರಿ, ಕೃಷಿಗೆ ಅಂತರಿಕ ಸಹಾಯಧನವನ್ನು ಹೆಚ್ಚು ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಕೃಷಿ ಉತ್ಪನ್ನಗಳ ಸಂರಕ್ಷಣೆಗೆ ಕೋಲ್ಡ್ ಸ್ಟೋರೇಜ್‌ಗಳನ್ನು ಸಹಕಾರಿ ಸಂಘಗಳ ಮೂಲಕ ನಿರ್ಮಿಸಲು ಸಹಾಯಧನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಬಸವರಾಜ ಶೀಲವಂತರ, ಡಿ.ಎಚ್. ಪೂಜಾರ, ಖಾಸೀಮ ಸರದಾರ, ಸುಕಪ್ಪ, ನಾಗರಾಜ್, ಸಂಜಯದಾಸ್, ಬಸವರಾಜ ನರೆಗಲ್, ಮಲ್ಲೇಶ್ ಗೌಡ, ಶರಣು, ಭೀಮಸೇನ ಕಲಕೇರಿ, ಹನುಮಂತಪ್ಪ ಎಳೆಯನೀರು, ಗಾಳೆಪ್ಪ ಮುಂಗೋಲಿ, ಮಹಾದೇವಪ್ಪ, ಗಂಗಮ್ಮ, ನೀಲಮ್ಮ ಇತರರು ಹೋರಾಟದಲ್ಲಿ ಪಾಲ್ಗೊಂಡಿದ್ದರು.