ಸವಣೂರು ತಾಲೂಕಿನ ಮಾರುತಿಪುರ ಗ್ರಾಮದಲ್ಲಿ ನೂರಾರು ವರ್ಷಗಳಿಂದ ವಾಸಿಸುತ್ತಿದ್ದರೂ ಸಹಿತ ಇದುವರೆಗೆ ಪಟ್ಟಾ ವಿತರಿಸದಿರುವುದು ಹಾಗೂ ಸರ್ಕಾರದ ಯಾವುದೇ ಸೌಲಭ್ಯಗಳು ತಲುಪದಿರುವುದನ್ನು ಖಂಡಿಸಿ ಗ್ರಾಮಸ್ಥರು ಸೋಮವಾರ ಹಮ್ಮಿಕೊಂಡಿದ್ದ ಎಸ್‌ಐಆರ್‌ ಪ್ರಕ್ರಿಯೆಯನ್ನು ಬಹಿಷ್ಕಾರ ಕೈಗೊಂಡು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಹಾವೇರಿ: ಬ್ಯಾಂಕ್‌ಗಳು ನೀಡುವ ಸಾಲವನ್ನು ಗ್ರಾಹಕರು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದರ ಮೇಲೆ ಅವರ ಭವಿಷ್ಯ ನಿರ್ಧಾರವಾಗುತ್ತದೆ. ಬ್ಯಾಂಕ್‌ನಿಂದ ಪಡೆಯುವ ಸಾಲವನ್ನು ಸದುಪಯೋಗಪಡಿಸಿಕೊಂಡು, ದುಡಿಮೆಯ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ತಾಲೂಕಿನ ಹೊಸರಿತ್ತಿ ಗ್ರಾಮದಲ್ಲಿ ನಡೆದ ಬ್ಯಾಂಕ್ ಆಫ್ ಬರೋಡಾ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಆದಾಯದ ಹಣದಿಂದ ಸಾಲವನ್ನು ಮರುಪಾವತಿಸಿ ಸ್ವಾವಲಂಬಿಗಳಾಗಬೇಕು. ಆಗ ಮಾತ್ರ ಗ್ರಾಮಗಳಲ್ಲಿ ಬ್ಯಾಂಕ್ ಶಾಖೆಗಳನ್ನು ತೆರೆದಿದ್ದಕ್ಕೂ ಸಾರ್ಥಕತೆ ಸಿಗುತ್ತದೆ ಎಂದರು.

ಕಳೆದ ಹತ್ತು-ಹದಿನೈದು ವರ್ಷಗಳ ಹಿಂದೆ ದೇಶದ ಬ್ಯಾಂಕಿಂಗ್ ವಲಯವು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿತ್ತು. ಅನೇಕ ಬ್ಯಾಂಕ್‌ಗಳು ಶೇ.5ರಿಂದ 10ರಷ್ಟು ವಸೂಲಾಗದ ಸಾಲದ ಹೊರೆ ಹೊಂದಿದ್ದವು. ಆದರೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷ ನೇತೃತ್ವ ಹಾಗೂ ಹಣಕಾಸು ನಿರ್ವಹಣೆಯಿಂದಾಗಿ ಬ್ಯಾಂಕಿಂಗ್ ವಲಯವು ಚೇತರಿಸಿಕೊಂಡಿದೆ. ಪ್ರಸ್ತುತ ಬ್ಯಾಂಕ್‌ಗಳ ಎನ್‌ಪಿಎ ಪ್ರಮಾಣ ಶೇ.1ರಿಂದ 3ರಷ್ಟಕ್ಕೆ ಇಳಿಕೆಯಾಗಿದ್ದು, ಆರ್‌ಬಿಐ ಸೇರಿದಂತೆ ದೇಶದ ಬಹುತೇಕ ಎಲ್ಲಾ ಬ್ಯಾಂಕ್‌ಗಳು ಲಾಭದತ್ತ ಮುನ್ನಡೆಯುತ್ತಿವೆ ಎಂದರು.

ಹೊಸದಾಗಿ ಆರಂಭವಾಗಿರುವ ಬ್ಯಾಂಕ್ ಶಾಖೆಯು ಸುತ್ತಮುತ್ತಲಿನ ಸುಮಾರು 20 ಕ್ಕೂ ಹೆಚ್ಚು ಗ್ರಾಮಗಳ ಜನರಿಗೆ ಆರ್ಥಿಕ ನೆರವು ನೀಡಬೇಕು. ಪ್ರತಿಯೊಬ್ಬರೂ ಬ್ಯಾಂಕ್ ಖಾತೆಗಳನ್ನು ಹೊಂದುವ ಮೂಲಕ ಹಾಗೂ ಬ್ಯಾಂಕಿನ ಮಾರ್ಗದರ್ಶನದಲ್ಲಿ ಆರ್ಥಿಕವಾಗಿ ಬೆಳೆಯಬೇಕು ಎಂದು ಹೇಳಿದರು.

ಬ್ಯಾಂಕ್ ಆಫ್ ಬರೋಡಾ ಸಂಸ್ಥೆಯ ಇತಿಹಾಸವನ್ನು ಸ್ಮರಿಸಿದ ಅವರು, ಗುಜರಾತ್‌ನ ಬರೋಡಾ ಮಹಾರಾಜರು ಸುಮಾರು 118 ವರ್ಷಗಳ ಹಿಂದೆ ಈ ಬ್ಯಾಂಕನ್ನು ಪ್ರಾರಂಭಿಸಿದ್ದರು. ಅದೇ ರೀತಿ ನಮ್ಮ ಮೈಸೂರು ಮಹಾರಾಜರು ಕೂಡ ''''''''ಸ್ಟೇಟ್ ಬ್ಯಾಂಕ್ ಆಫ್ ಮೈಸೂರು'''''''' ಅನ್ನು ಸ್ಥಾಪಿಸಿದ್ದರು. ಮೈಸೂರು ಮತ್ತು ಬರೋಡಾ ಮಹಾರಾಜರ ನಡುವೆ ಉತ್ತಮ ಬಾಂಧವ್ಯವಿತ್ತು ಎಂದು ಹಳೆಯ ನೆನಪುಗಳನ್ನು ಹಂಚಿಕೊಂಡರು.

ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿ ಪ್ರಗತಿಯನ್ನು ಪರಿಶೀಲಿಸುತ್ತಿದ್ದೇನೆ. ಬ್ಯಾಂಕುಗಳಲ್ಲಿ ನಮ್ಮ ಜಿಲ್ಲೆಯ ಜನರು ಇಡುವ ಡೆಪಾಸಿಟ್‌ಗಿಂತ, ಜನರಿಗೆ ನೀಡುವ ಸಾಲದ ಪ್ರಮಾಣ ಹೆಚ್ಚಿರಬೇಕು. ಜನರು ಇಡುವ ಹಣದ ಲಾಭ ಸ್ಥಳೀಯರಿಗೇ ಸಿಗಬೇಕು. ಅಧಿಕಾರಿಗಳ ನಿರಂತರ ಪ್ರಯತ್ನ ಹಾಗೂ ಬ್ಯಾಂಕಿನ ಉನ್ನತ ಅಧಿಕಾರಿಗಳ ಸಹಕಾರದಿಂದಾಗಿ ಈ ನೂತನ ಶಾಖೆ ಹಾವೇರಿಯಲ್ಲಿ ತಲೆಎತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ವಿನಂತಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಹಿರಿಯ ಅಧಿಕಾರಿಗಳಾದ ಜಿ. ರೂಪಾ, ಸುಹಾಸ, ದೀಪಕ್ ಎನ್ ಶಂಕರ, ಪ್ರಭುದೇವ ಸೇರಿದಂತೆ ಪ್ರಮುಖರು ಇದ್ದರು.

ಶೀಘ್ರದಲ್ಲೇ ಅತ್ಯಾಧುನಿಕ ಟೆಕ್ಸಟೈಲ್ ಪಾರ್ಕ್ ಸ್ಥಾಪನೆ..

ಜಿಲ್ಲೆಯ ಆರ್ಥಿಕ ಅಭಿವೃದ್ಧಿ ಹಾಗೂ ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣಕ್ಕೆ ಪೂರಕವಾಗುವಂತೆ ಹಾವೇರಿಯಲ್ಲಿ ಶೀಘ್ರದಲ್ಲೇ ಬೃಹತ್ ಟೆಕ್ಸಟೈಲ್ ಪಾರ್ಕ್ (ಜವಳಿ ಪಾರ್ಕ್) ಮತ್ತು ಗಾರ್ಮೆಂಟ್ ಉದ್ಯಮವನ್ನು ಸ್ಥಾಪಿಸಲಾಗುವುದು. ಈಗಾಗಲೇ ಜಾರಿಯಲ್ಲಿರುವ ಗಾರ್ಮೆಂಟ್ಸ್ ಉದ್ಯಮಗಳಿಂದ ಸುಮಾರು 8,000 ದಿಂದ 10,000 ಮಹಿಳೆಯರು ಉದ್ಯೋಗ ಪಡೆದುಕೊಂಡಿದ್ದಾರೆ. ಹಾವೇರಿಯಲ್ಲಿ ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ ಟೆಕ್ಸಟೈಲ್ ಪಾರ್ಕಗಾಗಿ ಸುಮಾರು 50 ಎಕರೆ ಭೂಮಿಯ ಅಗತ್ಯವಿದ್ದು, ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಭಾರತ ಸರ್ಕಾರದ ವಿಶೇಷ ಯೋಜನೆಯಡಿ ಈ ಬೃಹತ್ ಪಾರ್ಕ್ ಅನ್ನು ಯಶಸ್ವಿಯಾಗಿ ಸ್ಥಾಪಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ಬ್ಯಾಂಕ್‌ಗಳೊಂದಿಗೆ ಗ್ರಾಹಕರು ಉತ್ತಮ ಸಂಬಂಧವನ್ನು ಇಟ್ಟುಕೊಂಡಾಗ ಮಾತ್ರ ಹೆಚ್ಚಿನ ಆರ್ಥಿಕ ನೆರವು ಮತ್ತು ಅಭಿವೃದ್ಧಿ ಸಾಧ್ಯ. ಕೇಂದ್ರ ಸರ್ಕಾರದ ಮುದ್ರಾ ಯೋಜನೆಯು ಯುವಕರಲ್ಲಿ ಸ್ವಯಂ ಉದ್ಯೋಗವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹಾವೇರಿ ಜಿಲ್ಲೆಯೊಂದರಲ್ಲೇ ವಿವಿಧ ಬ್ಯಾಂಕ್‌ಗಳ ಮೂಲಕ ಸುಮಾರು 92,000 ಯುವಕರಿಗೆ ಸ್ವಯಂ ಉದ್ಯೋಗಕ್ಕಾಗಿ ಒಟ್ಟು 1,402 ಕೋಟಿ ರುಪಾಯಿಗಳ ಸಾಲ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಸಂಸದ ಬೊಮ್ಮಾಯಿ ಹೇಳಿದರು.