ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಕೋಲ್ಕತ್ತ ವೈದ್ಯ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಕೃತ್ಯ ಖಂಡಿಸಿ ಭಾರತೀಯ ವೈಧ್ಯಕೀಯ ಸಂಘ, ಐಎಂಎಸ್ ಸೇರಿ ವಿವಿಧ ಸಂಘಟನೆಗಳು ವೈದ್ಯಕೀಯ ಸೇವೆಯನ್ನು ಬಂದ್ ಮಾಡಿ ಶನಿವಾರ ಚಿಕ್ಕೋಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಕೋಲ್ಕತ್ತ ವೈದ್ಯ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಕೃತ್ಯ ಖಂಡಿಸಿ ಭಾರತೀಯ ವೈಧ್ಯಕೀಯ ಸಂಘ, ಐಎಂಎಸ್ ಸೇರಿ ವಿವಿಧ ಸಂಘಟನೆಗಳು ವೈದ್ಯಕೀಯ ಸೇವೆಯನ್ನು ಬಂದ್ ಮಾಡಿ ಶನಿವಾರ ಚಿಕ್ಕೋಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗ್ರಹಿಸಿದರು.ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಿಂದ ಪ್ರತಿಭಟನಾ ರ್‍ಯಾಲಿ ಆರಂಬಿಸಿ ಬಸ್ ನಿಲ್ದಾಣ, ಕೆ.ಎಸ್.ರಸ್ತೆ ಮೂಲಕ ಸಾಗಿ ಬಸವ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ದುಷ್ಕರ್ಮಿಗಳ ಕೃತ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ವೈದ್ಯರು ಕಠಿಣ ಕ್ರಮಕ್ಕೆ ಆಗ್ರಹಿಸಿಸಿ ಉಪವಿಭಾಗಾಧಿಕಾರಿ ಸುಭಾಷ ಸಂಪಗಾಂವಿ ಅವರ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಭಾರತೀಯ ವೈದ್ಯಕೀಯ ಸಂಘ ಆ.17 ಬೆಳಿಗ್ಗೆ 6 ರಿಂದ ಆ.18ರ ಬೆಳಿಗ್ಗೆ 6ರ ತನಕ ತುರ್ತು ಸೇವೆ ಹೊರತು ಪಡಿಸಿ ಇತರ ಸೇವೆಗಳನ್ನು ನಿಲ್ಲಿಸುವಂತೆ ನಿರ್ದೇಶನ ನೀಡಿದ ಹಿನ್ನಲೆಯಲ್ಲಿ ಚಿಕ್ಕೋಡಿ ಸೇರಿದಂತೆ ತಾಲೂಕಿನ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಸೇವೆಯನ್ನು ಸ್ಥಗಿತಗೊಳಿಸಿವೆ.ಐಎಂಎ ಅಧ್ಯಕ್ಷ ಡಾ.ದರ್ಶನ ಪೂಜಾರಿ ಮಾತನಾಡಿ, ಕೋಲ್ಕತ್ತಾದ ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಕೊಠಡಿಯಲ್ಲಿ ದ್ವಿತೀಯ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ, ಬಳಿಕ ಕೊಲೆ ಮಾಡಿದ ದುರುಳರ ಕೃತ್ಯವನ್ನು ಖಂಡಿಸಿದರು.ಡಾ.ಪದ್ಮರಾಜ ಪಾಟೀಲ ಮಾತನಾಡಿ, ವಿದ್ಯಾರ್ಥಿನಿ ಹತ್ಯೆಗೂ ಮುನ್ನ ಲೈಂಗಿಕ ದೌರ್ಜನ್ಯ ಎಸಗಿರುವುದು ದೃಢಪಟ್ಟಿದೆ. ದೇಶದಲ್ಲಿ ವೈದ್ಯರಿಗೆ ಹಾಗೂ ಮಹಿಳೆಯರ ಸುರಕ್ಷಿತೆ ನೀಡಬೇಕು ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.
ಡಾ.ರಾಜೇಂದ್ರ ದಿಕ್ಷೀತ್, ಡಾ.ದಯಾನಂದ ನೂಲಿ, ಡಾ.ಮಾರುತಿ ಮುಸಾಳೆ, ಡಾ.ಅಜೀತ ಚರಾಟೆ, ಡಾ.ಸಂಜಯ ಪಾಟೀಲ, ಡಾ.ಸಂಧ್ಯಾ ಪಾಟೀಲ, ಡಾ.ಕಲ್ಪನಾ ನೂಲಿ, ಡಾ.ರಾಜೇಂದ್ರ ಸಲಗರೆ, ಡಾ.ಚಿದಾನಂದ ಪಾಟೀಲ, ಡಾ.ಎನ್.ಆರ್.ಪಾಟೀಲ, ಡಾ.ಶ್ಯಾಮ ಪಾಟೀಲ, ಡಾ.ಸುಧೀರ ಪುವಲ್, ಡಾ.ಸುಧೀರ ಪಾಟೀಲ, ಡಾ.ಕಾವೇರಿ ಚರಾಟೆ, ಡಾ.ದೇವಿಕಾ ಭಾತೆ ಸೇರಿ ವಿವಿಧ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು, ಮೆಡಿಕಲ್ ಸ್ಟೋರ್ಸ್ ಮಾಲಿಕರು. ವೈದ್ಯಕೀಯ ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗವಸಿದ್ದರು.